ಕೋಲಾರ | ನೆಲ ಸಂಸ್ಕೃತಿಯ ತಂಗುದಾಣ ʼಆದಿಮʼ

Date:

Advertisements

ಕಲೆ, ಸಾಹಿತ್ಯ, ಸಂಸ್ಕೃತಿ, ಭಜನೆ, ತತ್ವಪದ, ದಲಿತ ಚಳವಳಿಯ ಇತಿಹಾಸವನ್ನು ಹೊಂದಿರುವ ಕೋಲಾರದ ನೆಲ ಸಂಸ್ಕೃತಿಯನ್ನು ತನ್ನಲ್ಲಿ ಕೇಂದ್ರೀಕರಿಸಿಕೊಂಡಿರುವ ತಂಗುದಾಣ ʼಆದಿಮʼ. ಜಗದುದ್ದಕ್ಕೂ ತನ್ನ ಘಮಲನ್ನು ಸೂಸುತ್ತ ಎರಡು ದಶಕ ಪೂರೈಸುವತ್ತ ಯಶಸ್ವಿ ಹೆಜ್ಜೆಯಿಡುತ್ತಿದೆ.

ಹೌದು, ʼಮನೆಗೊಂದು ಹುಂಡಿ, ದಿನಕ್ಕೊಂದು ರೂಪಾಯಿʼ ಎಂಬ ಪರಿಕಲ್ಪನೆಯಡಿ ಸಮಾನ ಮನಸ್ಕರು ಕಟ್ಟಿಬೆಳೆಸಿದ ಕನಸಿನ ಕೂಸು ʼಆದಿಮʼ. ಕೋಲಾರ ನಗರದ ಶತಶೃಂಗ ಶ್ರೇಣಿಯ ತೇರಹಳ್ಳಿ ಬೆಟ್ಟದ ಮೇಲಿನ ಶಿವಗಂಗೆ ಗ್ರಾಮದಲ್ಲಿ 2005ರಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಜನಪ್ರಿಯವಾಗಿದೆ.

ಅಳಿವಿನಂಚಿನಲ್ಲಿದ್ದ ನೆಲ ಸಂಸ್ಕೃತಿಯನ್ನು ಹುಣ್ಣಿಮೆ ಹಾಡಿನ ಮೂಲಕ ಜೀವಕಳೆ ತುಂಬಿದ ಸಾಂಸ್ಕೃತಿಕ ಚಟುವಟಿಕೆಗಳು ಇಂದು ದಕ್ಷಿಣ ಭಾರತದ ಕಲೆಗಳ ಅನಾವರಣ, ಕಲಾವಿದರ ಕಲರವಕ್ಕೆ ವೇದಿಕೆಯಾಗುತ್ತಿದೆ.

Advertisements

ಕೋಲಾರದಿಂದ ನಿಂತು ನೋಡಿದರೆ ಅದು ತೇರಹಳ್ಳಿಯ ಶಿವಗಂಗೆ ಬೆಟ್ಟ. ಆದರೆ ಆ ಬೆಟ್ಟಕ್ಕೆ ಸಾಂಸ್ಕೃತಿಕ ಮಹತ್ವವನ್ನು ಸಾಮಾಜಿಕ ಹಿನ್ನೆಲೆಯೊಂದಿಗೆ ತಂದುಕೊಟ್ಟಿದ್ದು ಆದಿಮ ಸಂಸ್ಥೆ. ಹುಣ್ಣಿಮೆಯಂದು ಆಯೋಜಿಸುವ ಕಾರ್ಯಕ್ರಮಗಳು, ಆದಿಮದ ಹತ್ತಾರು ಚಟುವಟಿಕೆಗಳು ಸಾಂಸ್ಕೃತಿಕ ಮನಸುಗಳನ್ನು ಬೆಸೆಯುತ್ತಿವೆ.

adima betta3 1
ಕೋಲಾರದ ತೇರಹಳ್ಳಿ ಬೆಟ್ಟದ ಮೇಲೆ ನೆಲೆಗೊಂಡಿರುವ ನೆಲೆ ಸಂಸ್ಕೃತಿಯ ತಂಗುದಾಣ ಆದಿಮ ಸಾಂಸ್ಕೃತಿಕ ಕೇಂದ್ರ

ದಲಿತ ಚಳವಳಿಗಳ ನೆಲ ಕೋಲಾರ. ಸಾಂಸ್ಕೃತಿಕವಾಗಿಯೂ ವೈಶಿಷ್ಟ್ಯಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಚಳವಳಿಯ ಸಂಗಾತಿಗಳು ಹುಟ್ಟಿ ಹಾಕಿದ್ದೇ ʼಆದಿಮʼ. ಎಪ್ಪತ್ತು ಎಂಬತ್ತರ ದಶಕದಲ್ಲಿ ಚಳವಳಿಯ ಮುಂಚೂಣಿಯಲ್ಲಿದ್ದ ಕೋಟಿಗಾನಹಳ್ಳಿ ರಾಮಯ್ಯ, ಕೊಮ್ಮಣ್ಣ, ಹ.ಮಾ.ರಾಮಚಂದ್ರ, ಲಕ್ಷ್ಮೀಪತಿ ಕೋಲಾರ, ಎನ್ ಮುನಿಸ್ವಾಮಿ, ಸಿ ಮುನಿಯಪ್ಪ, ಕೆ ವೈ ನಾರಾಯಣಸ್ವಾಮಿ, ಪದ್ಮಾಲಯ ನಾಗರಾಜ್ ಮೊದಲಾದವರ ಮುಂದಾಲೋಚನೆಗಳ ಫಲವಾಗಿ ಮೂಡಿದ್ದೇ ಆದಿಮ. ಇದರ ಭಾಗವಾಗಿಯೇ ಹುಣ್ಣಿಮೆ ಹಾಡು ಸಾಂಸ್ಕೃತಿಕ ಮಹತ್ವ ಪಡೆದಿದೆ.

ಜಗದ್ವಿಖ್ಯಾತಿ ಪಡೆದ ಹುಣ್ಣಿಮೆ ಹಾಡು : ಪ್ರತಿ ತಿಂಗಳ ಹುಣ್ಣಿಮೆಯ ರಾತ್ರಿಯಲ್ಲಿ ನಡೆಯುವ ’ಹುಣ್ಣಿಮೆ ಹಾಡು’ ಜಗದ್ವಿಖ್ಯಾತಿ ಪಡೆದಿದೆ. ಫಿನ್‌ ಲ್ಯಾಂಡಿನಾ ಡಯಾನ, ಜರ್ಮನಿಯ ಡಿಜಾನಾ ಈ ನೆಲದ ಸಂಸ್ಕೃತಿಯನ್ನು ಕಲಿತು, ಕಲಿಸಿಕೊಟ್ಟು ಹೋಗಿದ್ದಾರೆ. ನೆಲಸಂಸ್ಕೃತಿಯ ಅಗಾಧತೆಯನ್ನು ಮತ್ತು ಪ್ರಾಮುಖ್ಯತೆಯನ್ನು ಬಿತ್ತುವಂತಹ ನಾಟಕ, ಜನಪದ ಕಲಾ ಪ್ರದರ್ಶನ, ಹಾಡುಗಾರಿಕೆ, ಭಜನೆ, ತತ್ವಪದ ಗಾಯನ, ದೇಸೀಕಲೆಗಳು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ, ನಮ್ಮ ನಡುವಿನ ಸಾಧಕರಿಗೆ ’ಗದ್ದುಗೆ ಗೌರವ’ ನೀಡುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬರಲಾಗಿದೆ. ಆದಿಮ ಬಿತ್ತಿದ ’ಹುಣ್ಣಿಮೆ ಹಾಡು’ ಎಂಬ ಸಾಂಸ್ಕೃತಿಕ ಬೀಜ ಈಗ 207 ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದೆ. ಈವರೆಗೆ ನಡೆದಿರುವ ಹುಣ್ಣಿಮೆ ಹಾಡು ಕಾರ್ಯಕ್ರಮಗಳಲ್ಲಿ ನಾಡಿನ ಹಲವಾರು ಕಲಾವಿದರು, ಗಣ್ಯಮುಖಂಡರು ಭಾಗಿಯಾಗಿದ್ದಾರೆ. ಹುಣ್ಣಿಮೆ ಹಾಡು-200ರ ಸಂಭ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಉಮಾಶ್ರೀ, ಬಿ.ಜಯಶ್ರೀ, ಕರಿಬಸವಯ್ಯ, ರಮೇಶ್ ಅರವಿಂದ್, ಗಿರಿಜಾ ಲೋಕೇಶ್, ಮಂಡ್ಯ ರಮೇಶ್, ದುನಿಯಾ ವಿಜಯ್, ಹಂಸಲೇಖ, ವಿ.ಮನೋಹರ್, ಮೈಸೂರು ರಂಗಾಯಣದ ಜನಾರ್ದನ್, ಸಿ.ಬಸವಲಿಂಗಯ್ಯ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಹುಣ್ಣಿಮೆಯ ಸಂಭ್ರಮವನ್ನು ಆನಂದಿಸಿದ್ದಾರೆ.

adima2
ಹುಣ್ಣಿಮೆ ಹಾಡು-200ರ ಸಂಭ್ರಮದ ಕ್ಷಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಲವು ಗಣ್ಯರು ಭಾಗವಹಿಸಿದ್ದರು.

ಕಲಿತು, ಕಲಿಸಿಕೊಟ್ಟ ವಿದೇಶಿ ಹಕ್ಕಿಗಳಾದ ಡಯಾನ, ಡಿಜಾನಾ : ಆದಿಮ ಅಂಗಳಕ್ಕೆ ವಿದೇಶಿ ಹಕ್ಕಿಗಳು ಬಂದೋಗುತ್ತಿದ್ದು, ನಮ್ಮ ನೆಲದ ಸಂಸ್ಕೃತಿಯನ್ನು ಕಲಿಯುವಲ್ಲಿ ಆಸಕ್ತಿ ತೋರುತ್ತಿದ್ದಾರೆ. ಫಿಲ್‌ ಲ್ಯಾಂಡಿನ ಡಯಾನ 6 ತಿಂಗಳ ಕಾಲ ಆದಿಮದಲ್ಲಿದ್ದು ಡೊಳ್ಳು ಕುಣಿತವನ್ನು ಕಲಿತುಕೊಂಡು, ಅವರ ನೆಲದ ಪಾಯ್ಸ್‌ ಸಮರ ಕಲೆಯನ್ನು ಮಕ್ಕಳ ಶಿಬಿರದಲ್ಲಿ ಕಲಿಸಿಕೊಟ್ಟಿದ್ದಾರೆ. ಜರ್ಮನಿಯ ಡಿಜಾನಾ ಅವರು ಕೂಡ ಇಲ್ಲಿಗೆ ಬಂದು ನಿರುಪಯುಕ್ತ ವಸ್ತುಗಳಲ್ಲಿ ಕಲೆಯನ್ನು ಅರಳಿಸುವುದನ್ನು ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ.

Screenshot 2024 08 10 23295೧ edited

ಆದಿಮ ಮೈಲಿಗಲ್ಲು :

  • ಆದಿಮದ ʼಮತ್ತೆ ಏಕಲವ್ಯʼ ನಾಟಕಕ್ಕೆ ಮೆಟಾ ಅವಾರ್ಡ್‌ ಲಭಿಸಿದೆ. ಮೆಟಾ ಅವಾರ್ಡ್‌ ಪಡೆದ ಕನ್ನಡದ ಮೊದಲ ನಾಟಕ ಇದು.
  • 1 ತಿಂಗಳ ಕಾಲ ದಕ್ಷಿಣ ಅಮೇರಿಕಾದ ಕೊಲಂಬಿಯಾದಲ್ಲಿ ಆದಿಮ ತಂಡದಿಂದ ಏಕಲವ್ಯ ಉವಾಚ ನಾಟಕ ಪ್ರದರ್ಶನ.
  • ವಿದೇಶಿ ವಿಶ್ವವಿದ್ಯಾಲಯಗಳಾದ ಸ್ಕೂಲ್‌ ಆಫ್‌ ಆರ್ಟ್ಸ್‌ ಅಂಡ್‌ ಹ್ಯೂಮ್ಯಾನಿಟೀಸ್‌ ಹಾಗೂ ನಾಟಿಂಗ್ಯಾಮ್‌ ಟ್ರೆಂಟ್‌ ಯೂನಿವರ್ಸಿಟಿ ಸಹಯೋಗದಲ್ಲಿ ಅಂತರಾಷ್ಟ್ರೀಯ ಕಾರ್ಯಗಾರ.
  • ಆದಿಮ ಅಂಗಳದಲ್ಲಿ ಜಪಾನಿನ ಡೊಳ್ಳು ಮತ್ತು ಡೆನ್ಮಾರ್ಕಿನ ಮರಗಾಲು ಕಲಾತಂಡಗಳ ಪ್ರದರ್ಶನ

ಮಕ್ಕಳಿಗಾಗಿ ಸನಿವಾಸ ಚುಕ್ಕಿಮೇಳ : ಮಕ್ಕಳಲ್ಲಿನ ಬಹುವಿಧ ಬುದ್ಧಿವಂತಿಕೆ, ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಸನಿವಾಸ ಚುಕ್ಕಿಮೇಳ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಬಸವ ಜಯಂತಿಗೆ ಆರಂಭಿಸಿ, ಬುದ್ಧ ಪೂರ್ಣಿಮೆಗೆ ಮುಕ್ತಾಯವಾಗುವ ಈ ಶಿಬಿರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಮಕ್ಕಳನ್ನು ಪೋಷಕರು ಕರೆತರುತ್ತಾರೆ. ಶಿಬಿರಕ್ಕೆ ಬರುವ ಮಕ್ಕಳಿಗೆ ಮಣ್ಣಿನ ಆಟಿಕೆ ತಯಾರಿಕೆ, ಪೇಪರ್‌ ಕ್ರಾಫ್ಟ್‌, ಚಿತ್ರಕಲೆ, ನಾಟಕ, ತಮಟೆ ವಾದ, ಡೊಳ್ಳು ಕುಣಿತ, ನಗಾರಿ, ನೃತ್ಯ ರೂಪಕ ಮುಂತಾದ ಕಲಾಪ್ರಕಾರಗಳೊಂದಿಗೆ ಮಕ್ಕಳನ್ನು ಕಲಾವಿದರನ್ನಾಗಿಸುತ್ತಿದ್ದಾರೆ. ಈ ಮೂಲಕ ಮುಂದಿನ ಪೀಳಿಗೆಗಳಿಗೆ ಸಂಸ್ಕೃತಿ ಬಿತ್ತುವ ಕೆಲಸ ಮಾಡಲಾಗುತ್ತಿದೆ.

ನಾಡಿನಾದ್ಯಂತ ರಂಗ ತರಬೇತಿ : ಆಧುನಿಕತೆ ಭರಾಟೆಯಲ್ಲಿ ನೆಲ ಸಂಸ್ಕೃತಿಯನ್ನು ಮರೆಯುತ್ತಿರುವ ಯುವಜನರಿಗೆ ನಾಡಿನಾದ್ಯಂತ ರಂಗತಂಡಗಳ ಮೂಲಕ ಕಿನ್ನೂರಿ ನುಡಿದೋ, ಹಕ್ಕಿಹಾಡು, ಅಣ್ಣಾ ಹಜಾರೆ ಮುಂತಾದ ನಾಟಕಗಳ 175 ಪ್ರದರ್ಶನಗಳ ಮೂಲಕ ಕನ್ನಡ ರಂಗಭೂಮಿಯ ಪ್ರದರ್ಶನ ಮಾಡಿಸಲಾಗಿದೆ. ʼಐದೆʼ ಸ್ತ್ರೀ ಸಬಲೀಕರಣ ಕಾರ್ಯಗಾರ, ದ್ವಿಲಿಂಗಿಗಳು, ಸೆಕ್ಸ್‌ ವರ್ಕರ್ಸ್‌ ಮತ್ತು ಹೆಚ್.ಐ.ವಿ ಕುರಿತು ಏಳು ದಿನಗಳ ಶಿಬಿರಗಳನ್ನು ನಡೆಸುವ ಮೂಲಕ ಸಾಮಾಜಿಕ ಅರಿವು ಮೂಡಿಸಿದೆ.

Screenshot 2024 08 10 232959
ಅಂತರಾಷ್ಟ್ರೀಯ ವಿವಿಯೊಂದಿಗೆ ಆದಿಮ ಹಮ್ಮಿಕೊಂಡಿದ್ದ ಕಾರ್ಯಕ್ರಮದ ದೃಶ್ಯ

15 ಕೃತಿಗಳ ಅನಾವರಣ : ಆದಿಮ ಸಾಂಸ್ಕೃತಿಕ ಕೇಂದ್ರವು ಅರ್ಥಪೂರ್ಣವಾದ ಮಾಹಿತಿಯೊಂದಿಗೆ ಮತ್ತು ಪೂರಕವಾದ ಚಟುವಟಿಕೆಗಳ ಪುಸ್ತಕ ಪ್ರಕಟಣೆಗಳ ಮೂಲಕ ಜನರಿಗೆ ಹತ್ತಿರವಾಗುವಂತೆ ಸಾಹಿತಿಗಳು, ಕವಿಗಳು, ಹೋರಾಟಗಾರರು ಬರೆದಿರುವಂತಹ ಕೆಲವು ಕೃತಿಗಳನ್ನು ವಿಚಾರಧಾರೆಗಳನ್ನು ಹೊರ ತಂದಿದೆ. ಇಲ್ಲಿಯವರೆಗೂ 15 ಮಹತ್ವದ ಕೃತಿಗಳನ್ನು ಬಿಡುಗಡೆಗೊಳಿಸಿದೆ.

adima

ಡ್ರಾಮಾ ಡಿಪ್ಲೋಮಾ ಕೋರ್ಸ್‌ : ಟ್ರಸ್ಟಿಗಳ ಪರಿಶ್ರಮ ಮತ್ತು ನೂರಾರು ಜನ ಸಹೃದಯಿಗಳ ಸಹಕಾರದೊಂದಿಗೆ ಬೆಂಗಳೂರು ಉತ್ತರ ವಿವಿ ಸಹಯೋಗದೊಂದಿಗೆ 30 ಜನ ಆಸಕ್ತರಿಗೆ ಒಂದು ವರ್ಷದ ಡ್ರಾಮಾ ಡಿಪ್ಲೋಮಾ ಕೋರ್ಸ್‌ ಆರಂಭ ಮಾಡುತ್ತಿರುವುದು ಮತ್ತೊಂದು ರೀತಿಯ ಯಶಸ್ಸಿನ ದಾರಿಯಾಗಿದೆ.

ಸ್ಥಳೀಯ ಜ್ಞಾನಶಿಸ್ತುಗಳ ಮೇಲೆ ಸಂಶೋಧನೆಗಳಾಗಬೇಕು. ಕಳೆದ 20 ವರ್ಷಗಳಿಂದ ಮಕ್ಕಳ ಮೇಲೆ ಮಾಡಿರುವ ಪ್ರಯೋಗಗಳಿಂದ ಬಂದಿರುವ ಕಲಿಕೆಯನ್ನು ಗ್ರಹಿಸಿದ್ದೇವೆ. ಹಾಗಾಗಿ ಬೇರೆಯವರು ಇಲ್ಲಿಗೆ ಬಂದು ಅಧ್ಯಯನ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಬದುಕೋಣ, ಬದುಕಲು ಬಿಡೋಣ ಎಂಬ ಪರಿಕಲ್ಪನೆಯೊಂದಿಗೆ ಮುಂದಿನ ವರ್ಷದಿಂದ ನೀನಾಸಂ, ರಂಗಾಯಣ, ಸಾಣೇನಹಳ್ಳಿ ಮಾದರಿಯಲ್ಲಿ ಇನ್ನು ಕೊಂಚ ಭಿನ್ನವಾಗಿ ಆದಿಮ ರಂಗಭೂಮಿ ಶಿಕ್ಷಣ ಕೇಂದ್ರವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮಾನ್ಯತೆಯೊಂದಿಗೆ ಆರಂಭ ಮಾಡಲಾಗುತ್ತಿದೆ. ನೆಲ ಸಂಸ್ಕೃತಿಯನ್ನು ಅನುಸರಿಸಿದ ತತ್ವಪದಕಾರರ ಹಾದಿಯಲ್ಲಿ ನಾವೆಲ್ಲಾ ನಡೆಯಬೇಕು ಎಂಬುದು ನಮ್ಮ ಆಶಯ ಎನ್ನುತ್ತಾರೆ ಆದಿಮ ಸಾಂಸ್ಕೃತಿಕ ಕೇಂದ್ರದ ಟ್ರಸ್ಟಿ ಹ.ಮಾ.ರಾಮಚಂದ್ರ.

ಇದನ್ನು ಓದಿದ್ದೀರಾ? ಕೋಲಾರ | ದೋಸೆ ಸೇವಿಸಿ 20 ಮಂದಿ ವಿದ್ಯಾರ್ಥಿಗಳು ಅಸ್ವಸ್ಥ; ಅಡುಗೆ ನೌಕರ ನರಸಿಂಹಪ್ಪ ಅಮಾನತು

ಒಟ್ಟಾರೆಯಾಗಿ, ನೆಲ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ʼಆದಿಮ ಸಾಂಸ್ಕೃತಿಕ ಕೇಂದ್ರʼ ಆಧುನಿಕತೆಯ ಭರಾಟೆಯಲ್ಲಿರುವ ಯುವಪೀಳಿಗೆಯನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ಯಶಸ್ವಿಯಾಗಲಿ ಎಂಬುದು ಎಲ್ಲರ ಆಶಯವಾಗಬೇಕಿದೆ.

ವಿಜಯಕುಮಾರ್
ವಿಜಯ ಕುಮಾರ್ ಗಜ್ಜರಹಳ್ಳಿ
+ posts

ಪತ್ರಕರ್ತ, ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿಜಯ ಕುಮಾರ್ ಗಜ್ಜರಹಳ್ಳಿ
ವಿಜಯ ಕುಮಾರ್ ಗಜ್ಜರಹಳ್ಳಿ
ಪತ್ರಕರ್ತ, ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕರು

2 COMMENTS

  1. ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ, ಇದರಿಂದ ನಮ್ಮ ಜಿಲ್ಲೆಗೆ ಮತ್ತು ಮುಂದಿನ ತಲೆಮಾರಿನವರಿಗೆ ಅನುಕೂಲವಾಗುತ್ತದೆ. ಆದಿ ಮಾಗೆ ದುಡಿಯುತ್ತಿರುವ ಎಲ್ಲಾ ಸದಸ್ಯರಿಗೂ ನನ್ನ ಅಭಿನಂದನೆಗಳು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X