ದೋಸೆ ಸೇವಿಸಿ 20 ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ನೌಕರ ನರಸಿಂಹಪ್ಪ ಎಂಬುವವರನ್ನು ಅಮಾನತು ಮಾಡಲಾಗಿದೆ.
ಕೋಲಾರ ತಾಲೂಕಿನ ವೇಮಗಲ್ ಹೋಬಳಿ ಅಮ್ಮನಲ್ಲೂರು ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕಳೆದ ಶುಕ್ರವಾರ ಬೆಳಗ್ಗೆ ದೋಸೆ, ಚಟ್ನಿ ಸೇವಿಸಿ ಶಾಲೆಗೆ ತೆರಳಿದ್ದ ಸುಮಾರು 20 ಮಂದಿ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿತ್ತು. ಕೂಡಲೇ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
“ಹಾಸ್ಟೆಲ್ ವಾರ್ಡನ್ ಗುರುಶಾಂತಪ್ಪ ರಜೆಯಲ್ಲಿದ್ದ ಕಾರಣ ನಿಲಯದ ಜವಾಬ್ದಾರಿವಹಿಸಿಕೊಂಡಿದ್ದ ನರಸಿಂಹಪ್ಪ ಎರಡು ದಿನದ ಅನ್ನವನ್ನು ದೋಸೆಗೆ ಬಳಸಿದ್ದಾರೆ. ಹಾಸ್ಟೆಲ್‌ನಲ್ಲಿ ಸ್ವಚ್ಛತೆಯಿಲ್ಲ, ಕುಡಿಯಲು ಶುದ್ಧ ನೀರಿಲ್ಲ. ನರಸಿಂಹಪ್ಪ ನಮ್ಮನ್ನು ಬೈಯುವುದಲ್ಲದೆ, ನಮ್ಮಿಂದ ಇತರೆ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ” ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮುಡಾ ಪ್ರಕರಣ | ಪಾದಯಾತ್ರೆ ಫ್ಲಾಪ್ ಶೋ; ನಡೆಯದ ಅಕ್ರಮಕ್ಕೆ ಬಿಜೆಪಿ-ರಾಜ್ಯಪಾಲರ ಅತ್ಯುತ್ಸಾಹ
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್ ಆಯುಕ್ತರಿಗೆ ಪ್ರಕರಣದ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್ ಕತ್ಯವ್ಯಲೋಪದ ಆಧಾರದಲ್ಲಿ ಅಡುಗೆ ನೌಕರ ನರಸಿಂಹಪ್ಪ ಅವರನ್ನು ಅಮಾನತು ಮಾಡಿ ಭಾನುವಾರ ಆದೇಶ ಹೊರಡಿಸಿದ್ದಾರೆ.