ತಾಲೂಕಿನ ವೇಮಗಲ್ ಹೋಬಳಿಯ ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಲಾರ ಗಡಿ ಗ್ರಾಮ ಚೋಳಘಟ್ಟದಲ್ಲಿ ಸರ್ಕಾರ ಮಂಜೂರು ಮಾಡಿರುವ ಜಮೀನಿಗೆ ಚಿಂತಾಮಣಿ ಗಡಿ ಗ್ರಾಮ ಜಂಗಮಪುರದ ರಿಯಲ್ ಎಸ್ಟೇಟ್ ಮಾಫಿಯಾದವರಯ ಅತಿಕ್ರಮಣ ಮಾಡಿ ತೊಂದರೆ ನೀಡುತ್ತಿದ್ದಾರೆ. ಕೂಡಲೇ ಸರ್ವೆ ನಡೆಸಿ ಜಮೀನಿನ ಗಡಿ ಗುರುತಿಸಿ, ಅತಿಕ್ರಮಣ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಚೋಳಘಟ್ಟ ಗ್ರಾಮದ ಸರ್ವೆ ನಂ.25ರಲ್ಲಿ ಕೃಷ್ಣಪ್ಪ ಅವರಿಗೆ ಸರ್ಕಾರದಿಂದ ತಲಾ 1.20 ಎಕರೆ ಪ್ರಮಾಣದ ಎರಡು ಭಾಗಗಳಲ್ಲಿ ಒಟ್ಟು 3 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಆದರೆ ಜಂಗಮಪುರ ಗ್ರಾಮದ ಕೆಲವರು ಜಮೀನಿಗೆ ಸಂಬಂಧಿಸಿದಂತೆ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ತಹಶೀಲ್ದಾರ್ಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ವೇಮಗಲ್ ಕಂದಾಯ ನಿರೀಕ್ಷಕ (ಆರ್ಐ) ಅಜಯ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಮೀನಿನ ಸರ್ವೆ ನಡೆಸಿ, ಗಡಿ ಗುರುತಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ದಮನಿತರ ಸೇವಾ ಸಮಿತಿ ಅಧ್ಯಕ್ಷ ಮೇಡಹಾಳ ಮುನಿ ಅಂಜಿನಪ್ಪ ಮಾತನಾಡಿ, ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಯು.ಟಿ. ಖಾದರ್ ಅವರು ಸ್ಥಳ ಪರಿಶೀಲನೆ ನಡೆಸಿ ಕೃಷ್ಣಪ್ಪ ಅವರಿಗೆ ಜಮೀನು ಮಂಜೂರು ಮಾಡಿಸಿದ್ದರು. ಇದೀಗ ಜಂಗಮಪುರದ ಕೆಲವರು ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿ ತೊಂದರೆ ನೀಡುತ್ತಿದ್ದಾರೆ. ಕೃಷ್ಣಪ್ಪ ಅವರು ಜಮೀನಿನಲ್ಲಿ ಬಿತ್ತಿದ್ದ ರಾಗಿ ಬೆಳೆಯನ್ನು ರಾತ್ರೋರಾತ್ರಿ ನಾಶಪಡಿಸಲಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಚಿಕ್ಕ ಅಯ್ಯೂರು ರವೀಂದ್ರನಾಥ್ ಮಾತನಾಡಿ, ಸರ್ವೆ ನಡೆಸಿ ಗಡಿ ಗುರುತಿಸುವವರೆಗೆ ಕೃಷ್ಣಪ್ಪ ಅವರ ಜಮೀನಿಗೆ ಯಾರೂ ತೊಂದರೆ ನೀಡಬಾರದು. ಅತಿಕ್ರಮಣ ಪ್ರವೇಶ ಕಂಡುಬಂದರೆ ಪೊಲೀಸರ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ದ್ವಿಚಕ್ರ ವಾಹನ ಚಾಲನೆ ವೇಳೆ ನಿಯಂತ್ರಣ ತಪ್ಪಿ ಬಸ್ ಚಕ್ರದಡಿ ಸಿಲುಕಿ ಪೌರ ಕಾರ್ಮಿಕ ಸ್ಥಳದಲ್ಲೆ ಸಾವು
ಜಾಗೃತಿ ಸಮಿತಿ ಸದಸ್ಯ ಬೈರಂಡಹಳ್ಳಿ ನಾಗೇಶ್, ದಲಿತ ಮುಖಂಡ ನಾಗನಾಳ ಶಂಕರ್, ಗ್ರಾಮಸ್ಥರಾದ ಸಿದ್ದಲಿಂಗಪ್ಪ,, ಕೃಷ್ಣಪ್ಪ, ಸತೀಶ್, ಬಾಲಯ್ಯ, ಚಂದ್ರಪ್ಪ, ಬಸಣ್ಣ ಮುಂತಾದವರು ಇದ್ದರು.





