ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಆಂದೋಲನ’ಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಜಿ. ರಾಮಲಿಂಗಾರೆಡ್ಡಿ ಅವರು ಶನಿವಾರ ಜೂನಿಯರ್ ಕಾಲೇಜು ಆವರಣದಲ್ಲಿ ಚಾಲನೆ ನೀಡಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರಿಕಲ್ಪನೆಯಂತೆ ನೂತನವಾಗಿ ‘ಪ್ರಜಾಸೇವಾ ಇಲಾಖೆ’ಯನ್ನು ಸೃಜಿಸಲಾಗಿದ್ದು, ಜನಸಾಮಾನ್ಯರು ಸಣ್ಣಪುಟ್ಟ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದೇ ವೇದಿಕೆಯ ಮುಖಾಂತರ ಸಚಿವರು ನಾಡಿನ ಸಮಸ್ತ ಶಿಕ್ಷಕ ಸಮುದಾಯಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಈ ಪ್ರಜಾಸೇವಾ ಆಂದೋಲನ ಕೇವಲ ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗಿರದೆ ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೂ ವಿಸ್ತರಣೆಯಾಗಲಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿ ತಿಂಗಳ 1 ಮತ್ತು 3ನೇ ಶನಿವಾರ ಹಾಗೂ ಶಾಸಕರ ನೇತೃತ್ವದಲ್ಲಿ ಪ್ರತಿ ಶನಿವಾರ ತಾಲೂಕು ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಆಯಾ ಇಲಾಖೆಗಳ ಕೌಂಟರ್‌ಗಳಲ್ಲಿ ಸಲ್ಲಿಸುವ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಬೇಕು; ಕೆರೆ, ರಾಜಕಾಲುವೆ, ರಸ್ತೆ ಒತ್ತುವರಿಯಂತಹ ಕ್ಲಿಷ್ಟಕರ ಸಮಸ್ಯೆಗಳಿಗೆ ಕಾಲಮಿತಿ ನಿಗದಿಪಡಿಸಿ ಪರಿಹಾರ ಒದಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸ್ಥಳದಲ್ಲಿ ಇತ್ಯರ್ಥವಾಗದ ಅರ್ಜಿಗಳ ಕುರಿತು ಪ್ರತಿ ಬುಧವಾರ ತಾಲೂಕು ಕಚೇರಿಗಳಲ್ಲಿ ವಿಮರ್ಶಾ ಸಭೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಮತಿ ಸಲ್ಮಾ ಫಾಹಿನ್ ಅವರು 15 ದಿನಗಳಿಗೊಮ್ಮೆ ಹಾಗೂ ಮುಖ್ಯಮಂತ್ರಿಗಳು ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಮಳೆ ಕೊರತೆಯಿಂದ ಕಂಗೆಟ್ಟಿರುವ ಜಿಲ್ಲೆಯ ರೈತರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ ರಾಮಲಿಂಗಾರೆಡ್ಡಿ ಅವರು, ಬೆಳೆ ಹಾನಿ ಪರಿಹಾರವಾಗಿ ಒಟ್ಟು 28.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು. ರಾಗಿ ಬೆಳೆದ ರೈತರಿಗೆ ಎಕರೆಗೆ 5,೦೦೦ ರೂ. ಹಾಗೂ ಕಡಲೆಕಾಯಿ ಬೆಳೆದವರಿಗೆ ನಿಗದಿತ ಪರಿಹಾರವನ್ನು ಡಿಬಿಟಿ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದ್ದು, ಮಳೆಯಿಲ್ಲದೆ ಬೆಳೆ ಬೆಳೆಯಲಾಗದ ರೈತರಿಗೂ ಉಚಿತವಾಗಿ ಮೇವಿನ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತು ಮಾತನಾಡಿದ ಅವರು, 2027ರ ಒಳಗೆ ಕೆ.ಸಿ. ವ್ಯಾಲಿ ಯೋಜನೆಯಡಿ 440 ಎಂಎಲ್.ಡಿ ಶುದ್ಧ ನೀರನ್ನು ಕೆರೆಗಳಿಗೆ ಹರಿಸುವ ನಿಟ್ಟಿನಲ್ಲಿ ಶುದ್ಧೀಕರಣ ಘಟಕಗಳ ದುರಸ್ತಿ ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದರು. ಅಲ್ಲದೆ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೋಲಾರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗಲಿದ್ದು, ದೇಶದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯನ್ನು 6೦ ಎಕರೆ ಗೋಮಾಳ ಜಾಗದಲ್ಲಿ ವಿಸ್ತರಿಸಿ ಮೇಲ್ದರ್ಜೆಗೇರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದರು.
ಕೋಲಾರ ಶಾಸಕ ಡಾ. ಕೊತ್ತೂರು ಜಿ. ಮಂಜುನಾಥ್ ಅವರು ಮಾತನಾಡಿ ರಾಜ್ಯಾದ್ಯಂತ ಹೊಸದಾಗಿ ‘ಪ್ರಜಾಸೇವಾ ಇಲಾಖೆ’ಯನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯ ಜನರ ಮನೆಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ರೇಷನ್ ಕಾರ್ಡ್ ಮತ್ತು ಪಿಂಚಣಿ ಸೌಲಭ್ಯ ಪಡೆಯುವ ಆದಾಯ ಮಿತಿಯನ್ನು ಸರ್ಕಾರ 1,2೦,೦೦೦ ರೂಪಾಯಿಗಳವರೆಗೆ ಹೆಚ್ಚಿಸಿದೆ. ಇದರ ಜೊತೆಗೆ ಟೈಲರಿಂಗ್ ಯಂತ್ರಗಳು, ರೈತರಿಗೆ ಪಂಪ್ ಮೋಟಾರ್, ಕಷ್ಟಕಾಲದಲ್ಲಿರುವವರಿಗೆ ಟ್ಯಾಕ್ಸಿ ಹಾಗೂ ಲಗೇಜ್ ಆಟೋಗಳನ್ನು ಸರ್ಕಾರದ ವತಿಯಿಂದ ಒದಗಿಸಲಾಗುತ್ತಿದೆ. ರಾಜಕಾಲುವೆಗಳ ಸರ್ವೆ, ಆರ್.ಟಿ.ಸಿ ಹಾಗೂ ಪಿ-ನಂಬರ್ ಸಮಸ್ಯೆಗಳ ತ್ವರಿತ ಪರಿಹಾರ, ಕೆರೆ, ಸರ್ಕಾರಿ ಜಮೀನು ಮತ್ತು ಶಾಲಾ ಕಟ್ಟಡಗಳ ಜಾಗದ ಒತ್ತುವರಿ ತೆರವುಗೊಳಿಸುವುದು ಈ ಆಂದೋಲನದ ಪ್ರಮುಖ ಗುರಿಯಾಗಿದೆ. ಸಾರ್ವಜನಿಕರು ಸ್ಥಳದಲ್ಲಿಯೇ ತೆರೆದಿರುವ ಕೌಂಟರ್‌ಗಳಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಸ್ಥಳದಲ್ಲೇ ಇತ್ಯರ್ಥವಾಗದ ಅರ್ಜಿಗಳಿಗೆ 1-2 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಕೇವಲ ಜಿಲ್ಲಾ ಕೇಂದ್ರಕ್ಕೆ ಸೀಮಿತಗೊಳಿಸದೆ, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿ ಶನಿವಾರ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರೈತರಿಗೆ ಬೆಳೆ ವಿಮೆ ಹಾಗೂ ಬರ ನಿರ್ವಹಣೆ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಕುಡಿಯುವ ನೀರು ಹಾಗೂ ಮೇವಿನ ತೀವ್ರ ಅಭಾವವಿದ್ದು, ರೈತರಿಗೆ ಉಚಿತವಾಗಿ ಮೇವಿನ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದರು. ರಾಗಿ ಬೆಳೆದ ರೈತರಿಗೆ ವಿಮೆ ಮೂಲಕ 5,೦೦೦ ರೂ. ಹಾಗೂ ಕಡಲೆಕಾಯಿ ಬೆಳೆದ ರೈತರಿಗೆ 6,4೦೦ ರೂ. ಪರಿಹಾರವನ್ನು ನೀಡಲಾಗುತ್ತಿದ್ದು, ಒಟ್ಟು 28 ಕೋಟಿ ರೂಪಾಯಿಗಳ ಪರಿಹಾರ ಮೊತ್ತವನ್ನು ಸೋಮವಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ (DBT) ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಕೇಂದ್ರ ಸರ್ಕಾರದಿಂದ ಬರಪೀಡಿತ ಪ್ರದೇಶಗಳಿಗೆ ಬಿಡುಗಡೆಯಾಗುವ ಅನುದಾನ ಬಂದ ಬಳಿಕ, ರೈತರಿಗೆ ಪ್ರತಿ ಗುಂಟೆಗೆ 80 ರಿಂದ 1೦೦ ರೂಪಾಯಿಗಳ ಹೆಚ್ಚುವರಿ ಪರಿಹಾರ ದೊರೆಯಲಿದೆ.
ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣದ ಬಗ್ಗೆ ಪ್ರಸ್ತಾಪಿಸುತ್ತಾ, ಕೋಲಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಮೊದಲು ದಿನಕ್ಕೆ 6೦೦-7೦೦ ರಷ್ಟಿದ್ದ ಹೊರರೋಗಿಗಳ ಸಂಖ್ಯೆ ಇದೀಗ 12೦೦ ರಿಂದ 15೦೦ ಕ್ಕೆ ಏರಿಕೆಯಾಗಿದೆ. ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉನ್ನತ ಗುಣಮಟ್ಟದ ಚಿಕಿತ್ಸೆ ನೀಡಲು ಆದ್ಯತೆ ನೀಡಲಾಗಿದೆ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ. ಎಲ್. ಅನಿಲಕುಮಾರ್ ಅವರು ಮಾತನಾಡಿ ಸರ್ಕಾರದ ಯೋಜನೆಗಳು ಹಾಗೂ ಭವಿಷ್ಯದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರಿಕಲ್ಪನೆಯಂತೆ ‘ಪ್ರಜಾಸೇವಾ ಇಲಾಖೆ’ಯನ್ನು ಪ್ರಾರಂಭಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಜನರ ಮನೆಬಾಗಿಲಿಗೆ ತಲುಪಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದ್ದು, ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮವನ್ನು ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು. ಸಾರ್ವಜನಿಕರು ಸಭಾಂಗಣದ ಎಡಭಾಗದಲ್ಲಿ ತೆರೆಯಲಾಗಿರುವ ಆಯಾ ಇಲಾಖೆಗಳ ಕೌಂಟರ್‌ಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು, ಕೆರೆ, ರಾಜಕಾಲುವೆ, ರಸ್ತೆ, ಬಂಡಿದಾರಿ ಹಾಗೂ ಗುಂಡುತೋಪು ಒತ್ತುವರಿಯಂತಹ ಜ್ವಲಂತ ಸಮಸ್ಯೆಗಳನ್ನು ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೋಲಾರ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಅವರು, 2೦27ರ ಒಳಗಾಗಿ ಜಿಲ್ಲೆಯ ಕೆರೆಗಳಿಗೆ ನೀರು ತಂದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಗುರಿ ಹೊಂದಲಾಗಿದೆ ಎಂದರು. ಕೆ.ಸಿ. ವ್ಯಾಲಿ ಯೋಜನೆಯಡಿ 440೦ ಎಂಎಲ್.ಡಿ ನೀರು ಒದಗಿಸುವ ಒಪ್ಪಂದವಿದ್ದರೂ ಪ್ರಸ್ತುತ ಕೇವಲ 215 ಎಂಎಲ್.ಡಿ ನೀರು ಮಾತ್ರ ಪೂರೈಕೆಯಾಗುತ್ತಿದೆ. ಹೀಗಾಗಿ ಶುದ್ಧೀಕರಣ ಘಟಕಗಳ ದುರಸ್ತಿ ಕಾರ್ಯವನ್ನು ಶೀಘ್ರದಲ್ಲಿಯೇ ಮುಗಿಸಿ ಪೂರ್ಣ ಪ್ರಮಾಣದ ನೀರು ಹರಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೋಲಾರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಲಿದ್ದು, ದೇಶದ 2ನೇ ಅತಿದೊಡ್ಡ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯನ್ನು ವಿಸ್ತರಿಸಲು 6೦ ಎಕರೆ 33 ಗುಂಟೆ ಗೋಮಾಳ ಜಮೀನನ್ನು ಗುರುತಿಸಿ ಮಂಜೂರು ಮಾಡಿಸಲು ಅಗತ್ಯ ಕ್ರಮವಹಿಸಲಾಗುತ್ತಿದೆ. ಇದರ ಜೊತೆಗೆ ಕೋಲಾರ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ರಿಂಗ್ ರಸ್ತೆ ನಿರ್ಮಿಸುವ ಯೋಜನೆ ಕೂಡ ಶೀಘ್ರವೇ ಅನುಷ್ಠಾನಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಸಮಾರಂಭದಲ್ಲಿ ನಗರಭಿವೃದ್ಧಿ ಅಧ್ಯಕ್ಷರು ಹನೀಫ್, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷರು ವೈ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಫಾಹಿನ್,ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ. ಪ್ರವೀಣ್ ಪಿ ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅಪರ ಜಿಲ್ಲಾಧಿಕಾರಿ ಎಸ್ ಎಂ ಮಂಗಳ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸರಿನಾ ಸಿಕ್ಕಲಿಗರ್ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ನಗರಸಭೆ ಮುಖ್ಯಧಿಕಾರಿ ವೆಂಕಟೇಶ್ ನಾಗನೂರ್, ಜಿಲ್ಲಾ ಮಟ್ಟದ ಎಲ್ಲಾ ಹಿರಿಯ ಅಧಿಕಾರಿಗಳು, ಸೇರಿದಂತೆ ಅಪಾರ ಜನಸ್ತೋಮ ನೆರೆದಿತ್ತು.





