ಸಾರ್ವಜನಿಕರ ಹಿತದೃಷ್ಟಿಯಿಂದ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ 55 ಮೂಲೆ ನಿವೇಶನಗಳ (ಕಾರ್ನರ್ ಸೈಟ್ಸ್) ಇ-ಹರಾಜು ಮಾಡುತ್ತಿದ್ದು, ಸಾರ್ವಜನಿಕರು ಭಾಗವಹಿಸಿ ತಮ್ಮ ಇಷ್ಟವಾದ ಸೈಟ್ಗಳನ್ನು ಪಡೆಯಬಹುದಾಗಿದೆ ಎಂದು ಕೂಡಾ ಅಧ್ಯಕ್ಷ ಮೊಹಮ್ಮದ್ ಹನೀಫ್ ಮಾಹಿತಿ ನೀಡಿದರು.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆ.15 ಬೆಳಗ್ಗೆ 10ರಿಂದ ಸೆ.16ರ ಸಂಜೆ 5 ಗಂಟೆಯವರೆಗೂ ಬಿಡ್ ಮಾಡಬಹುದು ಎಂದ ಅವರು, ಟಮಕ ಬಳಿ ಇರುವ ಶ್ರೀ ಡಿ.ದೇವರಾಜ ಅರಸು ಬಡಾವಣೆಯಲ್ಲಿ ಒಟ್ಟು 334 ಕಾರ್ನರ್ ಸೈಟ್ ಗಳು ಇದ್ದು, ಸದ್ಯಕ್ಕೆ 55 ಮೂಲೆ ನಿವೇಶನಗಳನ್ನು ಇ-ಹರಾಜು ಪ್ರಕ್ರಿಯೆಯಲ್ಲಿ ಜನತೆ ಪಡೆಯಬಹುದಾಗಿದೆ ಎಂದು ಹೇಳಿದರು.
30 ವರ್ಷದಿಂದ ಕೂಡಾ ಲೇಔಟ್ ಅಭಿವೃದ್ಧಿ ಆಗಿರಲಿಲ್ಲ, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್, ನಜೀರ್ ಅಹ್ಮದ್ ಇವರ ಮುತುವರ್ಜಿಯಿಂದ ಈಗ ಎಲ್ಲಾ ಮೂಲಭೂತ ಸೌಕರ್ಯಗಳು ನೀಡಲಾಗಿದ್ದು, ರಸ್ತೆ, ಬೀದಿ ದೀಪ, ಒಳಚರಂಡಿ, ನೀರಿನ ವ್ಯವಸ್ಥೆ ಎಲ್ಲವನ್ನು ನೀಡಲಾಗಿದೆ. ಜನರು ಬಡಾವಣೆಗೆ ಭೇಟಿ ನೀಡಿ, ಇಲ್ಲಿನ ವಾತಾವರಣವನ್ನು ಕಣ್ಣಾರೆ ಕಂಡು ತಮ್ಮ ಇಷ್ಟವಾದ ಸೈಟ್ಗಳನ್ನು ಪಡೆಯಬಹುದು ಎಂದು ತಿಳಿಸಿದರು.
121 ಎಕರೆ ಒಳಗೊಂಡ ಬಡಾವಣೆ ಇದಾಗಿದ್ದು, ಜಿಲ್ಲೆಯಲ್ಲಿಯೇ ಅತಿ ದೊಡ್ಡ ಬಡಾವಣೆ ಇದಾಗಿದೆ. 60 ಅಡಿಯ ಮುಖ್ಯ ರಸ್ತೆಗಳು, 30, 40 ಅಡಿಯ ಬಡಾವಣೆಯ ರಸ್ತೆಗಳು ಒಳಗೊಂಡಿದ್ದು, ತಮ್ಮ ವಾಹನಗಳನ್ನು ಚಾಲನೆ ಮಾಡಲು, ಸುಲಭವಾಗಿದೆ. ಈ ಬಡಾವಣೆಯಲ್ಲಿ ಅಫೀಷಿಯಲ್ ಜನವಾಸಿಗಳು ವಾಸಿಸುತ್ತಿದ್ದು, ನಿಮ್ಮ ಪೀಳಿಗೆಯ ಭವಿಷ್ಯಕ್ಕೆ ಅತ್ಯುತ್ತಮ ಬಡಾವಣೆ ಇದಾಗಿದೆ. ಆದ್ದರಿಂದ, ಸಾರ್ವಜನಿಕರು ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ವೆಬ್ ಸೈಟ್ https:/kppp.karnataka.gov.in ಭೇಟಿ ನೀಡಿ ವಿವರಗಳನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.
ನಿವೇಶನಗಳ ಮಾರಾಟದ ಹಣದಲ್ಲಿ ಕೂಡಾದಿಂದ ಇನ್ನೂ ಕೆಲವು ಕಡೆ ಭೂಮಿಯನ್ನು ಪಡೆದು ಬಡಾವಣೆಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಅಮಾನಿಕೆರೆ ಅಕ್ಕಪಕ್ಕದಲ್ಲಿ ಭೂಮಿ ಖರೀದಿಯ ಪ್ರಕ್ರಿಯೆ ಶುರುವಾಗಿದೆ. ಇದೇ ರೀತಿ ಕೋಮುಲ್ ಡೈರಿ ರಸ್ತೆಯಲ್ಲಿ ಹಾಗೂ ಬಂಗಾರಪೇಟೆ ರಸ್ತೆಯಲ್ಲಿ ಭೂಮಿ ಖರೀದಿಯ ಬಗ್ಗೆ ಚರ್ಚಿಸಲಾಗುತ್ತಿದೆ. ಸರ್ಕಾರ ಏನೇ ಮಾಡಿದರೂ ಜನರ ಹಿತದೃಷ್ಟಿ, ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..?ಶ್ರೀನಿವಾಸಪುರ | ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡ ಉದ್ಘಾಟನೆ
ಈ ಸಂದರ್ಭದಲ್ಲಿ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಿ.ಟಿ.ಚಂದ್ರಶೇಖರ್, ಆಯುಕ್ತ ಎಂ.ಎ.ಶ್ರೀನಾಥ್ ಉಪಸ್ಥಿತರಿದ್ದರು.





