ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಕರೆದಿದ್ದ ಶಾಂತಿ ಸಭೆಯಲ್ಲೇ ಎರಡು ರಾಜಕೀಯ ಬಣಗಳು ಅಶಾಂತಿ ಸೃಷ್ಟಿಸಿ, ವಾಗ್ವಾದ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಗಂಗಾವತಿ ಪಟ್ಟಣದಲ್ಲಿರುವ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಇಂದು(ಜೂ.14) ಗಂಗಾವತಿ ಪೊಲೀಸರು ಬಕ್ರೀದ್ ಹಬ್ಬದ ಆಂಗವಾಗಿ ಪೂರ್ವಭಾವಿ ಶಾಂತಿ ಸಭೆ ಕರೆದಿದ್ದರು. ಆದರೆ, ಪೂರ್ವಭಾವಿ ಶಾಂತಿ ಸಭೆ ಎರಡು ಬಣಗಳ ತಿಕ್ಕಾಟಕ್ಕೆ ಸಾಕ್ಷಿಯಾಯಿತು.
ಸಭೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರ ನಡುವೆ ಪೊಲೀಸರ ಮುಂದೆಯೇ ವಾಗ್ವಾದ ನಡೆಯಿತು.
ಸಭೆ ಆರಂಭವಾದ ಬಳಿಕ ಪೊಲೀಸ್ ಅಧಿಕಾರಿಗಳು ಬಕ್ರೀದ್ ಆಚರಣೆ ಕುರಿತು ಸಲಹೆ, ಸೂಚನೆ ನೀಡಲು ಮುಸ್ಲಿಂ ಮುಖಂಡರಿಗೆ ಅವಕಾಶ ನೀಡಿದರು.
ಈ ವೇಳೆ ಶಾಸಕ ಜಿ.ಜನಾರ್ದನರೆಡ್ಡಿ ಅಪ್ತ ಅಲಿಖಾನ್ ಮಾತನಾಡಿ, “ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಸಂದೇಶದ ಕುರಿತು ಮಾತನಾಡದೇ ಪಕ್ಷ ಹಾಗೂ ರಾಜಕಾರಣಿಗಳ ವಿರುದ್ಧ ಮಾತನಾಡಿ ಜನರನ್ನ ಯಾಮಾರಿಸುವ ಕೆಲಸ ಮಾಡುತ್ತಾರೆ. ಪ್ರಾರ್ಥನಾ ಸಮಯಕ್ಕೆ ಬರುವುದಿಲ್ಲ. ಯಾವಾಗಲೋ ಬರುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು” ಎಂದು ಸಭೆಯಲ್ಲೇ ಹೇಳಿದರು.
ಈ ವೇಳೆ ಅನ್ಸಾರಿ ಅವರ ಬೆಂಬಲಿಗ ಎಸ್.ಬಿ ಖಾದ್ರಿ ಮತ್ತು ಸಂಗಡಿಗರು ಅಲಿಖಾನ್ ಅವರಿಗೆ, “ನೀವು ಗಂಗಾವತಿಯವರಲ್ಲ. ಇಲ್ಲಿ ನಿಮ್ಮದೇನು ಕೆಲಸ. ಏಕೆ ಮಾತನಾಡುತ್ತೀರಿ?” ಎಂದು ವಾಗ್ವಾದ ನಡೆಸಿ ಸಭೆ ಬಹಿಷ್ಕಾರಕ್ಕೆ ಮುಂದಾದರು.
ಪೊಲೀಸರ ಮಧ್ಯ ಪ್ರವೇಶ: ಖಡಕ್ ಎಚ್ಚರಿಕೆ
ಈ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದಕ್ಕೆ ಹೋಗುವುದನ್ನು ಕಂಡ ಪೊಲೀಸರು, ಎಲ್ಲರನ್ನೂ ಸುಮ್ಮನಿರುವಂತೆ ಸೂಚಿಸಿದರು.
ಬಳಿ ಮಾತನಾಡಿದ ಎಎಸ್‌ಪಿ ಹೇಮಂತ್ ಕುಮಾರ್, “ಬಕ್ರೀದ್ ಆಚರಣೆಗೆ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ ಹಬ್ಬ ಆಚರಣೆ ಮಾಡಬೇಕು. ಗೋಹತ್ಯೆ ಸಂಪೂರ್ಣ ನಿಷೇಧಿಸಲಾಗಿದೆ. ಪ್ರಾಣಿವಧೆ ಅಗತ್ಯವಿದ್ದಲ್ಲಿ ಪಶುಪಾಲನಾ ಇಲಾಖೆಯಿಂದ ಪರವಾನಗಿ ಪಡೆದು ಪಶುವೈದ್ಯರ ನೇತೃತ್ವದಲ್ಲಿ ವಧಾಗಾರದಲ್ಲಿ ವಧೆ ಮಾಡಬೇಕು” ಎಂದರು.
ಡಿವೈಎಸ್ಪಿ ಸಿದ್ಧಲಿಂಗಪ್ಪಗೌಡ ಪೊಲೀಸ್ ಪಾಟೀಲ್ ಮಾತನಾಡಿ, “ಶಾಂತಿಯುತವಾಗಿ ಹಬ್ಬ ಆಚರಿಸುತ್ತೇವೆ ಎಂದು ನೀವೇ ಅಶಾಂತಿ ಮಾಡಲು ಹೊರಟಿದ್ದೀರಾ. ಹೀಗಾದರೆ ಗಂಗಾವತಿ ಶಾಂತಿಯಿಂದ ಇರುವುದಾದರೂ ಹೇಗೆ?. ಹಬ್ಬವನ್ನ ಹಬ್ಬದ ರೀತಿಯಲ್ಲಿ ಆಚರಿಸಬೇಕು. ಅದಕ್ಕೆ ಬೇಕಾದ ಬಂದೋಬಸ್ತ್ ಅನ್ನು ಇಲಾಖೆ ಒದಗಿಸುತ್ತದೆ. ಕಾನೂನು ಬಾಹಿರ ಕೃತ್ಯಗಳು ನಡೆದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ನಾವು ನೀಡುವ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಶಾಂತಿಗೆ ಭಂಗವನ್ನು ಯಾರು ತರಬಾರದು. ಕಾನೂನು ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಿಮ್ಮ ವೈಯಕ್ತಿಕ ಏನಿದ್ದರೂ ಇಲ್ಲಿ ಬೇಡ. ರಾಜಕೀಯ ಮಾಡುವುದಿದ್ದರೆ ಚುನಾವಣೆಗಳ ಸಂದರ್ಭದಲ್ಲಿ ಮಾಡಿ. ನಮಗೂ ಅದಕ್ಕೂ ಸಂಬಂಧವಿಲ್ಲ. ಸಮುದಾಯವೊಂದರ ಧಾರ್ಮಿಕ ಹಬ್ಬ ಸರಿಯಾಗಿ ಆಗಲಿ ಅಂತ ಪೊಲೀಸರು ಕರ್ತವ್ಯ ಮಾಡುತ್ತಿದ್ದೇವೆ. ನೀವೆಲ್ಲರೂ ಸಹಕಾರ ಕೊಡಬೇಕು ಅಷ್ಟೇ” ಎಂದು ಖಡಕ್ ಆಗಿ ಎರಡೂ ಬಣದ ನಾಯಕರಿಗೆ ಎಚ್ಚರಿಕೆ ನೀಡಿದರು.
ನಗರ ಠಾಣೆ ಪಿಐ ಪ್ರಕಾಶ ಮಾಳೆ, ಗ್ರಾಮೀಣ ಠಾಣೆ ಪಿಐ ಸೋಮಶೇಖರ ಜುತ್ತಲ್, ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ, ತಾ.ಪಂ ಇಒ ಲಕ್ಷ್ಮೀದೇವಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
