ಸಹಕಾರಿ ಕ್ಷೇತ್ರದಲ್ಲಿ ಯುವ ಸಮುದಾಯ ಮುಂದೆ ಬರುತ್ತಿಲ್ಲ. ಪ್ರಾಥಮಿಕ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿಯೇ ಸಹಕಾರಿ ಆಂದೋಲನಗಳ ಬಗ್ಗೆ ಮಾಹಿತಿ ತಿಳಿಸುವಂತಾಗಬೇಕು ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರು.
ಕೊಪ್ಪಳ ಜಿಲ್ಲೆಯ ಕುಕನೂರು ನಗರದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಗಳ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಕೊಪ್ಪಳ ಜಿಲ್ಲಾ ಸಹಕಾರಿ ಯೂನಿಯನ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಹಕಾರ ಇಲಾಖೆ ಹಾಗೂ ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ, ಸಹಕಾರ ಜಾಗೃತಿ ಸಮಾವೇಶದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಸಹಕಾರಿ ಆಂದೋಲನ ಯಾವ ರೀತಿ ನಡೆಯುತ್ತದೆ, ಅದನ್ನು ಯಾವ ರೀತಿ ನಡೆಸಿಕೊಂಡು ಹೋಗಬೇಕು ಹಾಗೂ ಅದರಿಂದ ರೈತರಿಗೆ ಏನೆಲ್ಲಾ ಅನುಕೂಲವಾಗುತ್ತದೆ ಎಂಬುವುದನ್ನಾದರೂ ಪಠ್ಯ ಪುಸ್ತಕಗಳ ಒಂದು ಪಾಠದಲ್ಲಿ ಅಳವಡಿಸಿ, ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ಪ್ರತಿ ಗ್ರಾಮಕ್ಕೊಂದು ಸಹಕಾರಿ ಸಂಸ್ಥೆಗಳು ಇರಬೇಕು” ಎಂದರು.
“ಪ್ರಪಂಚದಲ್ಲಿ ಪ್ರಪ್ರಥಮವಾಗಿ ಪತ್ತಿನ ವ್ಯವಸ್ಥೆಯನ್ನು ಪ್ರಾರಂಭಿಸಿದ ಹೆಗ್ಗಳಿಕೆ ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲರದ್ದು. ಈ ಪತ್ತಿನ ಸಂಸ್ಥೆ 1904ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಆರಂಭವಾಯಿತು. ಯುವಕರು, ಮಹಿಳೆಯರು ಸಹಕಾರಿಗಳಾಗಲು ಮುಂದೆ ಬರಬೇಕು” ಎಂದು ಕರೆ ನೀಡಿದರು.
“ರಾಜ್ಯದಲ್ಲಿ ಸುಮಾರು 46 ರಿಂದ 47 ಸಾವಿರ ಸಹಕಾರಿ ಸಂಸ್ಥೆಗಳಿವೆ. ಇದರಲ್ಲಿ 26 ಸಾವಿರ ಸಹಕಾರಿ ಸಂಸ್ಥೆಗಳು ಮಾತ್ರ ಲಾಭದಲ್ಲಿವೆ. ಸಾಮಾನ್ಯವಾಗಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿ, ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆಯಲಾಗುತ್ತದೆ. ಸಹಕಾರಿ ಸಂಸ್ಥೆಗಳಲ್ಲಿ ನಮ್ಮ ಹೂಡಿಕೆ ಮಾಡಿದಾಗ ಮಾತ್ರ, ಸಹಕಾರಿ ಕ್ಷೇತ್ರ ಬೆಳೆಯುತ್ತದೆ. ರೈತರಿಗೆ ಸಹಕಾರಿ ಸಂಸ್ಥೆಗಳಲ್ಲಿಯೇ ಎಲ್ಲ ಸೌಲಭ್ಯಗಳು ಸಿಗುವಂತಾಗಬೇಕು. ರೈತರು ಉತ್ಪಾದಿಸುವ ವಸ್ತುಗಳಿಗೆ ರೈತರೇ ಬೆಲೆ ನಿಗದಿಪಡಿಸುವಂತಾಗಬೇಕು. ರೈತರು ಕೃಷಿ ಜತೆಗೆ ಕುಲ ಕಸುಬುಗಳಿಗೂ ಆದ್ಯತೆ ನೀಡಬೇಕು” ಎಂದು ತಿಳಿಸಿದರು.
“ಸಹಕಾರಿಗಳನ್ನು ಒಗ್ಗೂಡಿಸುವ ಜತೆಗೆ ಎಲ್ಲರ ಜವಾಬ್ದಾರಿಯನ್ನು ನೆನಪಿಸುವಂತಹ ಸಮಾವೇಶ ಇದಾಗಿದೆ. ಸಹಕಾರ ಸಂಘಗಳ ಅಧ್ಯಕ್ಷರು ಆಯಾ ಗ್ರಾಮ ಪಂಚಾಯಿತಿ ಸದನಗಳಲ್ಲಿ ಭಾಗವಹಿಸುವುದು ಮತ್ತು ಗ್ರಾ.ಪಂ ಸದಸ್ಯರಾಗಿ ಬರುವ ರಿಯಾಯಿತಿಯಲ್ಲಿ ತಿದ್ದುಪಡಿಯನ್ನು ತರಲು ಪ್ರಯತ್ನವನ್ನು ಮಾಡುತ್ತವೆ. ಸಹಕಾರಿ ಸಂಸ್ಥೆಗಳು, ಜನ ಸಂಸ್ಥೆಗಳು ಹಾಗೂ ಸಹಕಾರಿ ಆಂದೋಲನಗಳು ಜನರ ಆಂದೋಲನಗಳಾಗಿದ್ದು, ಎಲ್ಲರ ಒಗ್ಗೂಡುವಿಕೆಯಿಂದ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಆಶಯದಂತೆ ಸಹಕಾರಿ ಸಂಸ್ಥೆಗಳು ನಡೆಯುತ್ತಿವೆ” ಎಂದು ಹೇಳಿದರು.
“ಇತ್ತೀಚೆಗೆ ಖಾಸಗಿ ಮತ್ತು ಅನಧಿಕೃತ ಫೈನಾನ್ಸ್ ವಸೂಲಾತಿ ದಬ್ಬಾಳಿಕೆ ಹಿನ್ನೆಲೆಯಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ. ಈ ಬಗ್ಗೆ ಸುಗ್ರೀವಾಜ್ಞೆ ಮಾಡಬೇಕೆಂದು ಈಗಾಗಲೇ ಸರ್ಕಾರವೂ ತೀರ್ಮಾನ ಮಾಡಿದೆ. ಇಂತಹ ಆತ್ಮಹತ್ಯೆ ಪ್ರಕರಣಗಳು ಕಂಡುಬಂದರೆ, ಈಗಿರುವ ಕಾನೂನಿನಲ್ಲಿಯೇ ಪ್ರಕರಣ ದಾಖಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಅವಕಾಶವಿದ್ದು, ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಆರ್‌ಡಿಸಿಸಿ ಬ್ಯಾಂಕಿನ ಕೇಂದ್ರ ಶಾಖೆಯನ್ನು ಕೊಪ್ಪಳ ಜಿಲ್ಲೆಗೆ ಬದಲಿಸುವ ಕುರಿತಂತೆ, ಈ ಬಗ್ಗೆ ಕಾರ್ಯ ಸಾಧ್ಯತೆ ಪಟ್ಟಿ ತಯಾರಿಸಿ, ಆರ್‌ಬಿಐಗೆ ಸಲ್ಲಿಸಲು ಕ್ರಮ ವಹಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭೂಹೀನರಿಗೆ ಪಟ್ಟಾ ನೀಡಲು ಭೂಮಿ ವಸತಿ ಹಕ್ಕು ವಂಚಿತರ ಸಂಘಟನೆ ಆಗ್ರಹ
“ಸಮಾಜದ ಕಟ್ಟಕಡೆಯ ವ್ಯಕ್ತಿಗಳೂ ಸಹಕಾರಿ ಕ್ಷೇತ್ರಕ್ಕೆ ಬರಬೇಕು. ಈ ದಿಶೆಯಲ್ಲಿ ಮೀಸಲಾತಿ ತರುವುದು ಮತ್ತು ನಾಮನಿರ್ದೇಶನಕ್ಕಾಗಿ ತಿದ್ದುಪಡಿಗಳನ್ನು ವಿಧಾನಮಂಡಲದಲ್ಲಿ ಮಂಜೂರು ಮಾಡಿ, ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ. ಈ ಬಗ್ಗೆ ಅವರು ಕೆಲವು ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೇಳಿದ್ದು, ಅದನ್ನೂ ಕೂಡಾ ಸಲ್ಲಿಸಿದ್ದೇವೆ. ಒಂದು ವೇಳೆ ಇದಕ್ಕೆ ಅನುಮೋದನೆ ದೊರೆಯದೇ ಇದ್ದಲ್ಲಿ, ಮತ್ತೊಮ್ಮೆ ವಿಧೇಯಕವನ್ನು ಮಂಡನೆ ಮಾಡಿ ಸಲ್ಲಿಸುತ್ತೇವೆ. ಇದಕ್ಕೆ ನಮ್ಮ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದ ಕೆ ರಾಜಶೇಖರ ಹಿಟ್ನಾಳ, ಸಚಿವ ಶಿವರಾಜ್ ತಂಗಡಗಿ, ಯಲಬುರ್ಗಾ ಶಾಸಕರಾದ ರಾಯರೆಡ್ಡಿ, ಹಸನಸಾಬ ದೋಟಿಹಾಳ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಪಾಟೀಲ ತೋರಣದಿನ್ನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ ಸೇರಿದಂತೆ ಇತರರು ಇದ್ದರು.
