ವಿದೇಶಿ ಮತ್ತು ದೇಶಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಓರ್ವ ಪ್ರವಾಸಿಯ ಶವವು ಶನಿವಾರ ಬೆಳಗ್ಗೆ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಪತ್ತೆಯಾಗಿದೆ.
ಮೃತನನ್ನು ಒಡಿಶಾ ಮೂಲದ ಬಿಬಾಷ್(26) ಎಂದು ಗುರುತಿಸಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಾಣಾಪುರ ಕೆರೆ ಬಳಿ ಜಂಗ್ಲಿಗೆ ತೆರಳುವ ಮಾರ್ಗದಲ್ಲಿ ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಗಿಟಾರ್ ಬಾರಿಸುತ್ತ ಕುಳಿತಿದ್ದ ಇಬ್ಬರು ವಿದೇಶಿ ಹಾಗೂ ಮೂವರು ದೇಶಿಯ ಪ್ರವಾಸಿಗರ ಮೇಲೆ ಗುರುವಾರ ತಡರಾತ್ರಿ ಮೂವರ ಗುಂಪು ಹಲ್ಲೆ ನಡೆಸಿದ್ದಲ್ಲದೇ, ತಂಡದಲ್ಲಿದ್ದ ಮೂವರು ಯುವಕರನ್ನು ಕಾಲುವೆಗೆ ದೂಡಿ ಇಬ್ಬರು ಯುವತಿಯರನ್ನು ಅತ್ಯಾಚಾರ ನಡೆಸಿ, ಪರಾರಿಯಾಗಿದ್ದರು.
ಕಾಲುವೆಗೆ ಬಿದ್ದಿದ್ದ ವಿದೇಶಿ ಯುವಕನ ಸಹಿತ ಇಬ್ಬರು ಭಾರತೀಯ ಪ್ರವಾಸಿಗರ ಪೈಕಿ ಓರ್ವ ಯುವಕ ಹಾಗೂ ವಿದೇಶಿ ಪ್ರವಾಸಿಗ ಈಜಿಕೊಂಡು ಜೀವ ಉಳಿಸಿಕೊಂಡಿದ್ದರು. ಆದರೆ, ಇನ್ನೊಬ್ಬ ಯುವಕನ ವಿವರ ಇನ್ನೂ ಪತ್ತೆಯಾಗಿರಲಿಲ್ಲ. ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿ ಕಾಲುವೆಯಲ್ಲಿ ಹುಡುಕಾಟ ನಡೆಸಿದ್ದರು. 24 ಗಂಟೆಗಳ ಬಳಿಕ ಕಾಲುವೆಯಲ್ಲಿ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು, ಶವವನ್ನು ಹೊರತೆಗೆದಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ರವಾನಿಸಲಾಗಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಕೊಪ್ಪಳದಲ್ಲಿ ದಾರುಣ ಘಟನೆ: ವಿದೇಶಿ ಯುವತಿಯ ಸಹಿತ ಸ್ಥಳೀಯ ಯುವತಿಗೆ ಹಲ್ಲೆಗೈದು ಅತ್ಯಾಚಾರ ನಡೆಸಿದ ದುರುಳರು!
ತನಿಖೆಗೆ ಎರಡು ತಂಡ ರಚಿಸಿದ ಎಸ್‌ಪಿ
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಕೊಪ್ಪಳ ಜಿಲ್ಲಾ ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ, “ತನಿಖೆ ಮುಂದುವರಿಸಿದ್ದೇವೆ. ಆರೋಪಿಗಳ ಪತ್ತೆಗೆ ಎರಡು ತಂಡವನ್ನು ರಚಿಸಿದ್ದೇವೆ. ಸಂತ್ರಸ್ತರಿಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಏನಿದು ಘಟನೆ?
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಾಣಾಪುರ ಕೆರೆ ಬಳಿ ಜಂಗ್ಲಿಗೆ ತೆರಳುವ ಮಾರ್ಗದಲ್ಲಿ ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಗಿಟಾರ್ ಬಾರಿಸುತ್ತ ಕುಳಿತಿದ್ದ ಇಬ್ಬರು ವಿದೇಶಿ ಹಾಗೂ ಮೂವರು ದೇಶಿಯ ಪ್ರವಾಸಿಗರ ಮೇಲೆ ಗುರುವಾರ ತಡರಾತ್ರಿ ಮೂವರ ಗುಂಪು ಹಲ್ಲೆ ನಡೆಸಿದ್ದಲ್ಲದೇ, ತಂಡದಲ್ಲಿದ್ದ ಮೂವರು ಯುವಕರನ್ನು ಕಾಲುವೆಗೆ ದೂಡಿ ಇಬ್ಬರು ಯುವತಿಯರನ್ನು ಅತ್ಯಾಚಾರ ನಡೆಸಿ, ಪರಾರಿಯಾಗಿದ್ದರು.
Statement by Police on Sexual assault of Israeli woman and a local Woman. pic.twitter.com/J5LjiinU7v
— Mohammed Zubair (@zoo_bear) March 8, 2025
ಗುರುವಾರ ತಡರಾತ್ರಿ ಸಾನಾಪುರ ಬಳಿಯ ಹನುಮನಹಳ್ಳಿ ಸಮೀಪದ ದುರ್ಗಮ್ಮ ಗುಡಿಯ ಬಳಿಯಲ್ಲಿರುವ ತುಂಗಭದ್ರಾ ಕಾಲುವೆ ಸಮೀಪ ಕೂತು ನಕ್ಷತ್ರ ವೀಕ್ಷಣೆಗೆಂದು ಒಬ್ಬ ವಿದೇಶಿ ಯುವಕ, ಒಬ್ಬಳು ವಿದೇಶಿ ಯುವತಿಯ ಸಹಿತ ಅನ್ಯರಾಜ್ಯದ ಇಬ್ಬರು ಪ್ರವಾಸಿಗರೊಂದಿಗೆ ಸ್ಥಳೀಯವಾಗಿ ಹೋಮ್ ಸ್ಟೇ ನಡೆಸುತ್ತಿರುವ ಯುವತಿ ಕೂಡ ತೆರಳಿದ್ದರು. ಈ ವೇಳೆ ಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು, ‘ಪೆಟ್ರೋಲ್ ಬಂಕ್ ಎಲ್ಲಿದೆ?’ ಎಂದು ಕನ್ನಡದಲ್ಲಿ ಸ್ಥಳೀಯ ಯುವತಿಯೊಂದಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಉತ್ತರಿಸಿದ್ದ ಯುವತಿ, ಸಾನಾಪುರಕ್ಕೆ ಹೋಗುವಂತೆ ಸಲಹೆ ನೀಡಿದ್ದಾರೆ. ಆದರೆ, ಆ ಬಳಿಕವೂ ಅಲ್ಲಿಂದ ಕದಲದೆ, 100₹ ಕೊಡುವಂತೆ ಒತ್ತಾಯಿಸಿದ್ದಾರೆ.
ನಮ್ಮಲ್ಲಿ ದುಡ್ಡಿಲ್ಲ ಎಂದು ಸಮಜಾಯಿಷಿ ನೀಡಿದಾಗ ತಗಾದೆ ತೆಗೆದ ಮೂವರು ದುರುಳರು, ತಂಡದಲ್ಲಿದ್ದ ವಿದೇಶಿ ಯುವಕನ ಸಹಿತ ಮೂವರು ಯುವಕರಿಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಆ ಬಳಿಕ ಕಾಲುವೆಗೆ ದೂಡಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಯುವಕರನ್ನು ಕಾಲುವೆಗೆ ದೂಡಿ ಹಾಕಿದ ಬಳಿಕ ವಿದೇಶಿ ಯುವತಿ ಹಾಗೂ ಸ್ಥಳೀಯ ಯುವತಿಗೂ ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿದ್ದಲ್ಲದೇ, ಇಬ್ಬರನ್ನೂ ಅತ್ಯಾಚಾರಗೈದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಕಾಲುವೆಗೆ ಬಿದ್ದಿದ್ದ ವಿದೇಶಿ ಯುವಕನ ಸಹಿತ ಇಬ್ಬರು ಭಾರತೀಯ ಪ್ರವಾಸಿಗರ ಪೈಕಿ ಓರ್ವ ಯುವಕ ಹಾಗೂ ವಿದೇಶಿ ಪ್ರವಾಸಿಗ ಈಜಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಗುರುವಾರ ರಾತ್ರಿ 11ರ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
