ಅಂಗನವಾಡಿಯ ಮೇಲ್ಚಾವಣಿಯ ಕಾಂಕ್ರೀಟ್ ದಿಢೀರ್ ಕುಸಿದು ಬಿದ್ದು ನಾಲ್ವರು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮೆಹಬೂಬ್ ಕಾಲೋನಿಯಲ್ಲಿ ಸೋಮವಾರ ನಡೆದಿದೆ.
ಮೆಹಬೂಬ್ ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರ-7ರಲ್ಲಿ ಈ ಘಟನೆ ನಡೆದಿದೆ. ಘಟನೆಯ ವೇಳೆ ಅಂಗನವಾಡಿಯಲಿದ್ದ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ದಿಢೀರ್ ಆಗಿ ಮೇಲ್ಛಾವಣಿಗೆ ಹಾಕಲಾಗಿದ್ದ ಸಿಮೆಂಟ್ ಕಾಂಕ್ರೀಟ್ ಕಿತ್ತು ನೆಲಕ್ಕೆ ಬಿದ್ದಿದೆ. ಇದರಿಂದಾಗಿ ನಾಲ್ಕು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಮಕ್ಕಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಮಕ್ಕಳ ಪೈಕಿ ಇಬ್ಬರ ಕಾಲಿಗೆ ಗಂಭೀರ ಗಾಯವಾಗಿದ್ದು, ಮತ್ತಿಬ್ಬರಿಗೆ ತಲೆಗೆ ಪೆಟ್ಟಾಗಿರುವುದಾಗಿ ತಿಳಿದುಬಂದಿದೆ. ಅಮನ್, ಮನ್ವಿತ್, ಮರ್ದನ್ ಹಾಗೂ ಸುರಕ್ಷಾ ಗಾಯಗೊಂಡ ಮಕ್ಕಳು ಎಂದು ತಿಳಿದುಬಂದಿದೆ.
ಪ್ರತಿದಿನವೂ ಈ ಅಂಗನವಾಡಿಗೆ 20 ಮಕ್ಕಳು ಬರುತ್ತಿದ್ದರು. ಇಂದು ಅಂಗನವಾಡಿಗೆ 14 ಮಕ್ಕಳು ಬಂದಿದ್ದರು. ಎಲ್ಲ 20 ಮಕ್ಕಳು ಇದ್ದಿದ್ದರೆ ಇನ್ನೂ ಹಲವು ಮಕ್ಕಳಿಗೆ ಗಾಯವಾಗುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಈ ದಿನ.ಕಾಮ್‌ಗೆ ಮಾಹಿತಿ ನೀಡಿರುವ ಸ್ಥಳೀಯ ವ್ಯಕ್ತಿ ಮೆಹಬೂಬ್, ” ನಮ್ಮ ಕಾಲನಿಯ ಅಂಗನವಾಡಿ ಕಟ್ಟಡ ನಿರ್ಮಾಣಗೊಂಡು 7 ವರ್ಷಗಳಾಗಿದೆ. ಕಳಪೆ ಕಾಮಗಾರಿಯಿಂದ ಈ ಘಟನೆ ಸಂಭವಿಸಿದೆ. ಟೆಂಡರ್ ಪಡೆದವರ ಲೈಸನ್ಸ್ ರದ್ದು ಮಾಡಬೇಕು ಹಾಗೂ ಸಂಬಂಧಪಟ್ಟ ಇಲಾಖೆಯವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಶಿರೂರು ದುರಂತ | ಡ್ರೆಜ್ಜಿಂಗ್ ಕಾರ್ಯಾಚರಣೆಯ ವೇಳೆ ಮೂಳೆ ಪತ್ತೆ: ಡಿಎನ್‌ಎ ಪರೀಕ್ಷೆ ನಡೆಸಲು ರವಾನೆ
ಅಲ್ಲದೇ, ಸ್ಥಳಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಬೇಕು, ಗಾಯಗೊಂಡಿರುವ ಮಕ್ಕಳ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
