- ʼಪೊಲೀಸ್ ಕಣ್ಗಾವಲಿನಲ್ಲಿರುವವರೇ ಪ್ರಜಾಪ್ರಭುತ್ವ ನಿಜವಾದ ರಕ್ಷಕರು’
- ‘ಹೋರಾಟದ ಕಿಚ್ಚು ಕಡಿಮೆಯಾಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ’
ಬ್ರಿಟಿಷರ ಆಳ್ವಿಕೆಯ ಗುಲಾಮಗಿರಿಯಿಂದ ಹೊರ ಬರಲು ಲಕ್ಷಾಂತರ ದೇಶ ಭಕ್ತರು ಸರ್ವವನ್ನೂ ತ್ಯಾಗ ಮಾಡಿ ಗಳಿಸಿದ ಸ್ವಾತಂತ್ರ್ಯ ಹರಣವಾಗುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಸಂಘಟಕರು, ಬರಹಗಾರರು ಮತ್ತು ಲೇಖಕರು ಜೈಲಿಗೆ ಹೋಗಲು ಹೆದರಬಾರದು ಎಂದು ಖ್ಯಾತ ಕಾದಂಬರಿಕಾರ ಮತ್ತು ಕಥೆಗಾರ ಕುಂ ವೀರಭದ್ರಪ್ಪ ಕರೆ ನೀಡಿದರು.
ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಶ್ರೀಕೃಷ್ಣ ಹೋಟೆಲ್‌ನಲ್ಲಿ ಹಿರಿಯ ಕಾರ್ಮಿಕ ಮುಖಂಡ ಜೆ ಭಾರಧ್ವಾಜ್ ಅವರ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದರು.
“ಸಂವಿಧಾನದಲ್ಲಿ ಹೋರಾಟ, ಧರ್ಮದ ಆಚರಣೆ, ಪ್ರತಿಭಟಿಸುವ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯ ನೀಡಿದ್ದರೂ ಆಳುವ ಸರ್ಕಾರ, ಹೋರಾಟಗಾರರು, ಪತ್ರಕರ್ತರು, ಲೇಖಕರು, ಬರಹಗಾರರ ಮೇಲೆ ಪೊಲೀಸರನ್ನು ಗುಪ್ತವಾಗಿ ಬಿಟ್ಟು ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ನಿತ್ಯವೂ ಮಾಡುತ್ತಿದೆ. ಯಾರು ಪೊಲೀಸ್ ಕಣ್ಗಾವಲಿನಲ್ಲಿರುತ್ತಾರೋ ಅವರೇ ನಿಜವಾದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವವರಾಗಿದ್ದಾರೆ” ಎಂದು ಅಭಿಪ್ರಾಯಪಟ್ಟರು.
“ದೇಶದಲ್ಲಿ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳು ನಡೆಯುತ್ತಿದ್ದರೂ ಜನರು ಮೌನವಹಿಸಿರುವುದು ಸರಿಯಲ್ಲ. ಜನರಲ್ಲಿ ಹೋರಾಟದ ಕಿಚ್ಚು ಕಡಿಮೆಯಾಗುತ್ತಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾರಕವಾಗಿದೆ. ಪ್ರಶ್ನೆ ಮಾಡುವವರನ್ನು, ಸರ್ಕಾರವನ್ನು ಟೀಕಿಸುವವರನ್ನು ದೇಶ ದ್ರೋಹಿಗಳೆಂದು ಬಿಂಬಿಸಲಾಗುತ್ತಿರುವುದು ಕಳವಳಕಾರಿಯಾಗಿದೆ. ರಾಜ್ಯ ಸರ್ಕಾರ ಮುಸ್ಲಿಂ ಸಮಾಜಕ್ಕೆ ಸಂವಿಧಾನ ಬದ್ಧವಾಗಿ ಕಲ್ಪಿಸಿದ್ದ ಶೇ. 4ರಷ್ಟು ಮೀಸಲಾತಿ ತೆಗೆದು ಹಾಕಿರುವುದು ಘೋರವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಆಳುವ ಸರ್ಕಾರ ಜನಪರವಾಗಿಲ್ಲ. ಉಳ್ಳವರು ಮತ್ತು ಬಂಡವಾಳಶಾಹಿಗಳ ಪರವಾಗಿದೆ. ಚುನಾವಣೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಂತರ ಬಹುಮತ ಲಭಿಸದಿದ್ದರೆ ಹಣ ಕೊಟ್ಟು ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸುವ ಮೂಲಕ ಪ್ರಜಾಪ್ರಭುತ್ವವನ್ನು ಅಣಕಿಸಲಾಗುತ್ತಿದೆ. ಮತದಾರರು ಜಾಗೃತರಾಗಿ ದೇಶಕ್ಕಾಗಿ ಹುತಾತ್ಮರಾದವರ ತ್ಯಾಗವನ್ನು ಸ್ಮರಣೆ ಮಾಡದೇ ಜಾತಿ, ಧರ್ಮ, ಹಣದ ಆಸೆಯಿಂದ ಪಕ್ಷಗಳನ್ನು ಗೆಲ್ಲಿಸುವ ಪದ್ಧತಿ ಕೈ ಬಿಡದಿದ್ದರೆ ದೇಶವನ್ನು ದೇವರೂ ಕಾಪಾಡಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.
“ಹಿರಿಯ ಕಾರ್ಮಿಕ ಮುಖಂಡ ಜೆ ಭಾರಧ್ವಾಜ್ ಹಣವಂತರ ಮನೆತನದಲ್ಲಿ ಜನಿಸಿದರೂ ಬಡವರು, ಕಾರ್ಮಿಕರು, ಧ್ವನಿ ಇಲ್ಲದವರ ಪರವಾಗಿ ನಿರಂತರ ಕೆಲಸ ಮಾಡುವ ಮೂಲಕ ಇಡೀ ರಾಜ್ಯದಲ್ಲಿ ಗುರುತಿಸುವ ವ್ಯಕ್ತಿಯಾಗಿದ್ದಾರೆ. ತೆಲಂಗಾಣ ಹೋರಾಟ, ಎಡಪಂಥೀಯ ಹೋರಾಟಗಳಲ್ಲಿ ಪಾಲ್ಗೊಂಡು ಜನಸಾಮಾನ್ಯರಿಗೆ ನ್ಯಾಯ ಒದಗಿಸಿದ್ದಾರೆ. ಇದೀಗ ಅವರಿಗೆ ಅಭಿಮಾನಿಗಳು ಅಭಿನಂದನಾ ಗ್ರಂಥ ರಚನೆ ಮಾಡಿದ್ದು, ಅವರ ಹೋರಾಟ ಜೀವನ ದಾಖಲಿಸುವ ಕಾರ್ಯ ಶ್ಲಾಘನೀಯವಾಗಿದೆ. ಈ ಅಭಿನಂದನಾ ಗ್ರಂಥಗಳನ್ನು ಇಂಗ್ಲೀಷ್ ಹಾಗೂ ತೆಲುಗು ಭಾಷೆಗೆ ಭಾಷಾಂತರ ಮಾಡುವ ಮೂಲಕ ಜೆ ಭಾರಧ್ವಾಜ್ ಅವರ ಹಿರಿಮೆ ಹೆಚ್ಚಿಸಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಚಿಟಗುಪ್ಪ ಆಸ್ಪತ್ರೆಯಲ್ಲಿ ಸೌಲಭ್ಯಗಳ ಸುಧಾರಣೆ; ರೋಗಿಗಳ ದಾಖಲಾತಿ ಹೆಚ್ಚಳ
ಪೌರಕಾರ್ಮಿಕರು ಸೇರಿದಂತೆ ಇತರ ಸಂಘನೆಗಳವರು ಭಾರಧ್ವಾಜರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕ ಮುಖಂಡರಾದ ಜೆ ಭಾರಧ್ವಾಜ್, ಜೆ ಶಾಂತಕುಮಾರಿ, ಸಾಹಿತಿಗಳಾದ ಡಾ. ಶರಣಬಸಪ್ಪ ಕೋಲ್ಕಾರ್, ಡಾ. ಲಿಂಗಣ್ಣ ಜಂಗಮರಳ್ಳಿ, ಡಾ. ಜಾಜಿ ದೇವೆಂದ್ರಪ್ಪ, ಡಾ. ಶಿವಕುಮಾರ ಮಾಲೀಪಾಟೀಲ್, ಡಾ. ಮಣಿ, ಬಿ. ಪೀರಬಾಷಾ, ಸಂಪಾದಕ ಸಿರಾಜ್ ಬಿಸರಳ್ಳಿ, ಎಂ ಆರ್ ವೆಂಕಟೇಶ, ಎಚ್ ಎನ್ ಬಡಿಗೇರ್, ರಾಜಾಭಕ್ಷಿ ಎಚ್ ವಿ ಹಾಗೂ ಇತರರು ಇದ್ದರು.