- ಸೋಲಿನ ಭೀತಿಯಿಂದ ಬಿಜೆಪಿಯವರು ಮೀಸಲಾತಿ ಕುತಂತ್ರ ಮಾಡಿದ್ದಾರೆ
- ಬಿಜೆಪಿಯ ಮಾಜಿ ಸಂಸದ ಮಂಜುನಾಥ್ ಕುನ್ನೂರ ಕಾಂಗ್ರೆಸ್ ಸೇರ್ಪಡೆ
ಮೀಸಲಾತಿ ಹಂಚಿಕೆಯ ಸರ್ಕಾರ ತೀರ್ಮಾನವನ್ನು ಕಾಂಗ್ರೆಸ್ ಖಂಡಿಸುತ್ತದೆ. ನಾವು ಅಧಿಕಾರಕ್ಕೆ ಬಂದ ನಂತರ ಸರ್ಕಾರದ ಮೀಸಲಾತಿ ತೀರ್ಮಾನವನ್ನು ರದ್ದು ಮಾಡಿ, ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ಬಿಜೆಪಿಯ ಮಾಜಿ ಸಂಸದ ಮತ್ತು ಮಾಜಿ ಶಾಸಕ ಮಂಜುನಾಥ್ ಕುನ್ನೂರ, ಅವರ ಪುತ್ರ ರಾಜು ಕುನ್ನೂರ, ಕೆ ಆರ್ ಪೇಟೆಯ ಜೆಡಿಎಸ್ ದೇವರಾಜ್, ಶಿವಮೊಗ್ಗದ ಬಿಜೆಪಿ ಮುಖಂಡ ಅರುಣ್ ಹಾಗೂ ಮಾಜಿ ಶಾಸಕ ಸುಧಾಕರ್ ಬೆಂಬಲಿತ ಚಿಂತಾಮಣಿಯ ಅನ್ಯಪಕ್ಷಗಳ ಮುಖಂಡರನ್ನು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
“ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗ ಬಿಜೆಪಿಯವರು ಇಂತಹ ಕುತಂತ್ರ ರೂಪಿಸುತ್ತಿದ್ದಾರೆ. ರಾಜ್ಯದ ಜನ ಇವರ ಕುತಂತ್ರ ಅರ್ಥ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದಾರೆ” ಎಂದರು.
“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಲಗೈ ಭಂಟನಂತೆ ಇದ್ದ ಶಿಗ್ಗಾಂವ್ ಕ್ಷೇತ್ರದ ಬಿಜೆಪಿ ನಾಯಕ, ಮಾಜಿ ಸಂಸದ, ಹಾಗೂ ಶಾಸಕ ಮಂಜುನಾಥ್ ಕುನ್ನೂರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಬಿಜೆಪಿಯ ಶೋಚನೀಯ ಸ್ಥಿತಿಗೆ ಸಾಕ್ಷಿ. ತನ್ನ ಆಪ್ತರನ್ನೇ ಆಪ್ತರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದ ಮುಖ್ಯಮಂತ್ರಿಗಳು ರಾಜ್ಯದ ಜನರ ವಿಶ್ವಾಸ ಗಳಿಸಲು ಸಾಧ್ಯವೇ?” ಎಂದು ಕುಟುಕಿದರು.
ಬೊಮ್ಮಾಯಿ ತಿರಸ್ಕರಿಸಿದ ಬಿಜೆಪಿ ನಾಯಕರು:
“ಮಂಜುನಾಥ್ ಕುನ್ನೂರ ಅವರ ಸೇರ್ಪಡೆಯಿಂದ ಬಿಜೆಪಿ ನಾಯಕರೇ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಸೇರ್ಪಡೆ ಶಿಗ್ಗಾಂವ್ ಕ್ಷೇತ್ರದಲ್ಲಿ ಮುಂಬರುವ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಮಂಜುನಾಥ್ ಹಾಗೂ ಅವರ ಜತೆ ಬಂದಿರುವ ಎಲ್ಲ ನಾಯಕರಿಗೆ ನಾನು ಹೃದಯಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಯಾವ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದೇವೆಯೋ ಅದನ್ನು ಕಾಂಗ್ರೆಸ್ ವಿರೋಧಿಸುತ್ತಾ?: ಬೊಮ್ಮಾಯಿ ಸವಾಲು
“ಜಾತ್ಯಾತೀತ ಜನತಾದಳ ತ್ಯಜಿಸಿ ಚಿಂತಾಮಣಿ ಕ್ಷೇತ್ರದ ಮೂವರು ಪ್ರಮುಖ ನಾಯಕರು ಇಂದು ಕಾಂಗ್ರೆಸ್ ಸೇರಿದ್ದಾರೆ. ಯುವ ಮಿತ್ರ ಸುಧಾಕರ್ ಅವರು ಸಾಕಷ್ಟು ಬಾರಿ ನನ್ನ ಭೇಟಿ ಮಾಡಿ ಪಕ್ಷ ಸೇರ್ಪಡೆ ಬಗ್ಗೆ ತಿಳಿಸಿದ್ದರು. ಚಿಂತಾಮಣಿಯ ರಿಯಾಜ್ ಪಾಷಾ, ಮಹೇಶ್, ಭಾಸ್ಕರ್, ಕೃಷ್ಣಾ ರೆಡ್ಡಿ ಅಮರ್, ಮಹಮದ್ ಶಫಿವುಲ್ಲಾ, ಸಾಮ್ರಾಟ್, ಇರ್ಫಾನ್ ಖಾನ್, ಆರ್. ಪ್ರಸಾದ್, ವೆಂಕಟರೆಡ್ಡಿ, ನವೀನ್, ವಿಜಯ್, ಶ್ರೀನಿವಾಸ್ ಯಾದವ್ ಸೇರಿದಂತೆ ವಿವಿಧ ಸಮುದಾಯದ ಅನೇಕ ಮುಖಂಡರು ಪಕ್ಷ ಸೇರುತ್ತಿದ್ದಾರೆ” ಎಂದರು.
“ಸುಧಾಕರ್ ಅವರನ್ನು ನಾವು ಪಕ್ಷದ ಅಭ್ಯರ್ಥಿ ಎಂದು ತೀರ್ಮಾನಿಸಿದ್ದು, ನೀವೆಲ್ಲರೂ ಸೇರಿ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸಬೇಕು” ಎಂದು ಕರೆ ನೀಡಿದರು.
“ಮಂಡ್ಯ ಜಿಲ್ಲೆಯ ರಾಜಕೀಯ ಇಂದು ಹೊಸ ತಿರುವು ಪಡೆಯುತ್ತಿದೆ. ಬಹಳಷ್ಟು ನಾಯಕರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಕಳೆದ ಕೆ ಆರ್ ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ದೇವರಾಜ್ ಇಂದು ಕಾಂಗ್ರೆಸ್ ಸೇರಿದ್ದಾರೆ” ಎಂದರು.
“ಶಿವಮೊಗ್ಗದ ಜೆಡಿಎಸ್ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಕೂಡ ಪಕ್ಷಕ್ಕೆ ಬಂದಿದ್ದು, ಅವರನ್ನು ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಸ್ವಾಗತಿಸುತ್ತೇನೆ. ಗುಬ್ಬಿ ವಾಸು ಅವರು ಕೂಡ ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ಸೇರಲು ಅರ್ಜಿ ಹಾಕಲು ಬಂದಿದ್ದಾರೆ. ಅವರನ್ನು ಮತ್ತೊಂದು ದಿನ ಕಾರ್ಯಕ್ರಮ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ”’ ಎಂದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಪ್ರಿಯಾಂಕ್ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.