‘ಒಕ್ಕಲಿಗರು ಮತ್ತು ಲಿಂಗಾಯತರು ಬೇರೆಯವರಿಗೆ ಅನ್ನ ನೀಡಿದವರೇ ಹೊರತು, ಯಾರಿಂದಲೂ ಕಿತ್ತುಕೊಂಡು ತಿಂದವರಲ್ಲ’ ಇದು ಒಕ್ಕಲಿಗ ಸಮುದಾಯದ ಪ್ರಜ್ಞಾನವಂತರ ಮನದಾಳ. ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಮುಸ್ಲಿಂ ಸಮುದಾಯಕ್ಕೆ ಶೇ.4ರಷ್ಟು ಮೀಸಲಾತಿ ಇತ್ತು. ಪ್ರಸ್ತುತ ಈ ಮೀಸಲಾತಿಯನ್ನು ಕಿತ್ತು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಹಂಚಿರುವುದು ಆಕ್ಷೇಪಾರ್ಹ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಸಮುದಾಯದ ಪ್ರಜ್ಞಾವಂತರು.
ಕರ್ನಾಟಕದಲ್ಲಿ ಪ್ರವರ್ಗ 2ಬಿ ಅಡಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ಕಸಿದು, ತಲಾ ಶೇ 2ರಷ್ಟು ಮೀಸಲಾತಿಯನ್ನು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಹಂಚುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಇತ್ತೀಚೆಗೆ ನಿರ್ಣಯ ಕೈಗೊಂಡಿದೆ. ಈ ನಿರ್ಧಾರದ ವಿರುದ್ಧ ಒಕ್ಕಲಿಗರು, ಲಿಂಗಾಯತರು ಹಾಗೂ ಇಡೀ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈದಿನ.ಕಾಮ್‌ನೊಂದಿಗೆ ಚಿಂತಕರಾದ ಡಾ. ಪುರುಷೋತ್ತಮ ಬಿಳಿಮಲೆ, ಸಾಹಿತಿ ಎಲ್ ಎನ್ ಮುಕುಂದರಾಜ್, ಕರ್ನಾಟಕ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಗೌಡ, ಪ್ರಾಧ್ಯಾಪಕರು ಮತ್ತು ಸಾಮಾಜಿಕ ವಿಶ್ಲೇಷಕರಾದ ಡಾ. ಬಿ ಸಿ ಬಸವರಾಜು, ಸಾಮಾಜಿಕ ಹೋರಾಟಗಾರ ದೀಪು ಗೌಡ ಹಾಗೂ ನಿವೃತ್ತ ಪ್ರಾಂಶುಪಾಲರಾದ ಜಿ ಟಿ ವೀರಪ್ಪ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮುಸ್ಲಿಂ ದ್ವೇಷದ ಮುಂದುವರೆದ ಭಾಗ
ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಆ ಮೀಸಲಾತಿಯನ್ನು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ತಲಾ ಶೇ. 2ರಷ್ಟು ಹಂಚಿಕೆ ಮಾಡಲಾಗಿದೆ. ಆರೆಸ್ಸೆಸ್ ನಿಯಂತ್ರಿತವಾದ ಬಿಜೆಪಿಯ ಈ ನಿರ್ಣಯವು ಅವರು ಈಗಾಗಲೇ ಮುಂದುವರೆಸಿಕೊಂಡು ಬರುತ್ತಿರುವ ಮುಸ್ಲಿಂ ದ್ವೇಷದ ಮುಂದಿನ ಹೆಜ್ಜೆಯಾಗಿದೆ. 2ಬಿಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಶೇ.10ರಷ್ಟು ಮೀಸಲಾತಿ ಇರುವ EWS ಕೋಟಾಕ್ಕೆ ಸ್ಥಳಾಂತರಿಸುತ್ತಿರುವುದು ಎಂದರೆ ಮುಸ್ಲಿಮರಿಗೆ ಮೀಸಲಾತಿ ಇಲ್ಲದಂತೆ ಮಾಡುವುದು. ಮುಸ್ಲಿಮರು ಆರ್ಥಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿಯೂ ಹಿಂದುಳಿದಿದ್ದಾರೆ ಎಂಬ ಅಂಶವನ್ನು ಉದ್ದೇಶಪೂರ್ವಕವಾಗಿ ಮರೆಸುವುದು ಇದರ ಹಿಂದಿನ ಕುತಂತ್ರ. ಮಾರುಕಟ್ಟೆಯನ್ನೂ ಹೇಗೂ ಮುಸ್ಲಿಮರಿಂದ ʼರಕ್ಷಿಸಲಾಗಿದೆʼ. ಯುಪಿಎಸ್‌ಸಿ ಜಿಹಾದ್ ಆರಂಭವಾಗಿದೆ. ಪ್ರಾಚೀನ ಭಾರತದ ʼಸುವರ್ಣ ಯುಗʼದಲ್ಲಿ ಯಾರಿಗೂ ಮೀಸಲಾತಿ ಇರಲಿಲ್ಲವಲ್ಲ ಎಂಬ ವಾದವನ್ನು ಜನಪ್ರಿಯಗೊಳಿಸಲಾಗಿದೆ. ಭಾರತೀಯ ಸಮಾಜದಿಂದ ಮುಸ್ಲಿಮರನ್ನು ಅಳಿಸಿಹಾಕುವುದು ಈ ಎಲ್ಲ ಪ್ರಕ್ರಿಯೆಗಳ ಅಂತಿಮ ಉದ್ದೇಶ.
ಆದರೆ ಮುಂದಿನ ಇತಿಹಾಸ ಕೋಮುವಾದಿ ಶಕ್ತಿಗಳು ಯೋಜಿಸಿದ ಹಾಗಿರುವುದಿಲ್ಲ. ಈ ಪ್ರಕ್ರಿಯೆಗಳು ಅಂತಿಮವಾಗಿ ಸಮುದಾಯಗಳ ನಡುವಣ ಸಂಘರ್ಷಗಳಾಗಿ ಬೆಳೆದು ನಾಗರಿಕತೆಯ ಪತನಕ್ಕೆ ಕಾರಣವಾಗುತ್ತದೆ. ಇದಕ್ಕೆ ಬಿಜೆಪಿ ಮುನ್ನುಡಿ ಬರೆಯುತ್ತಿದೆ.

ಪ್ರೊ. ಪುರುಷೋತ್ತಮ ಬಿಳಿಮಲೆ, ಲೇಖಕರು
ಸರ್ಕಾರದ ನಡೆ ಖಂಡನೀಯ
ನಮ್ಮಲ್ಲಿರುವ ಎಲ್ಲ ಜಾತಿ, ಜನಾಂಗಗಳ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಿ ಎಂಬುದು ನಮ್ಮ ಆಗ್ರಹವಾಗಿತ್ತು. ಆದರೆ, ಸರ್ಕಾರವು ಒಕ್ಕಲಿಗ ಸಮುದಾಯಕ್ಕೆ ಶೇ. 6ರಷ್ಟು ಮೀಸಲಾತಿ ಕೊಟ್ಟಿರುವುದು ಕಣ್ಣೊರೆಸುವ ತಂತ್ರ. ಒಕ್ಕಲಿಗರನ್ನು ಮೆಚ್ಚಿಸುವುದಕ್ಕೋಸ್ಕರ ಚುನಾವಣೆಯ ಗಿಮಿಕ್ ಇದಾಗಿದೆ. ವೈಯಕ್ತಿಕವಾಗಿ ನಾನಿದನ್ನು ಒಪ್ಪುವುದಿಲ್ಲ.
ಯಾವುದೋ ಒತ್ತಡದ ಕಾರಣದಿಂದಾಗಿ ನಮ್ಮ ಹೋರಾಟ ಸಮಿತಿಯವರು ಈ ಮೀಸಲಾತಿಯನ್ನು ಒಪ್ಪಿರಬಹುದು. ಕೇವಲ ಶೇ. ೨ರಷ್ಟು ಮೀಸಲಾತಿ ಪಡೆಯುವುದಕ್ಕಾಗಿ ಇಷ್ಟೆಲ್ಲ ಹೋರಾಟ ಮಾಡಬೇಕಾದ ಅಗತ್ಯ ನಮ್ಮ ಸಮುದಾಯದವರಿಗೆ ಇರಲಿಲ್ಲ. ಯಾವುದೇ ಸಮುದಾಯ ತೀರ ಸಣ್ಣದಿದ್ದಾಗಲೂ ಕೂಡ ಅವರಿಗೂ ಮೀಸಲಾತಿಯನ್ನು ಕೊಡಬೇಕು ಎಂದು ಕೇಳಿದ್ದೆವು.
ಮುಸ್ಲಿಮರ ಮೀಸಲಾತಿಯನ್ನು ಕಿತ್ತು ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದವರಿಗೆ ಕೊಡುತ್ತಿರುವುದನ್ನು ನಾನು ವಿರೋಧಿಸುತ್ತೇನೆ. ಇನ್ನೊಂದು ಸಮುದಾಯದ ಅವಕಾಶವನ್ನು ಕಿತ್ತುಕೊಂಡು ಈ ಸಮುದಾಯಗಳಿಗೆ ಕೊಡುವುದು ತಪ್ಪು. ಒಕ್ಕಲಿಗರು ಬೇರೆಯವರಿಗೆ ಅನ್ನ ನೀಡಿದವರೇ ಹೊರತು, ಬೇರೆ ಯಾರಿಂದಲೂ ಕಿತ್ತುಕೊಂಡು ತಿಂದವರಲ್ಲ. ಆದರೆ, ಇಂದು ಮುಸ್ಲಿಮರ ತಟ್ಟೆಗೆ ಕೈಹಾಕಿ ತಿನ್ನಿ ಎಂದು ಸರ್ಕಾರ ಮಾಡುತ್ತಿರುವುದು ಖಂಡನೀಯ.

ಎಲ್ ಎನ್ ಮುಕುಂದರಾಜ್, ಸಾಹಿತಿ
ಸಮುದಾಯಗಳನ್ನು ಎತ್ತಿಕಟ್ಟುವ ಕುತಂತ್ರ
ವೈಜ್ಞಾನಿಕ ಅಧ್ಯಯನದ ಆಧಾರದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಎಲ್ಲ ಸಮುದಾಯಗಳಿಗೆ ಮೀಸಲಾತಿಯನ್ನು ಹಂಚಿಕೆ ಮಾಡಬೇಕಿತ್ತು. ಆದರೆ, ಇಂದು ಮೀಸಲಾತಿ ಎಂಬುದು ರಾಜಕೀಯ ಪ್ರೇರಿತವಾಗಿದ್ದು, ಎಲ್ಲ ಪಕ್ಷಗಳು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ.
ಮೀಸಲಾತಿ ಒಪ್ಪುವವನು ನಾನು.ಮೀಸಲಾತಿ ಇಲ್ಲದೇ ಹೋಗಿದ್ದರೆ ತಳಸಮುದಾಯದವರು ಇಂದು ಉತ್ತಮ ಸ್ಥಿತಿ ತಲುಪಲು ಸಾಧ್ಯವಾಗುತ್ತಿರಲಿಲ್ಲ.ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಧ್ಯಯನ ನಡೆಸಿ ಮೀಸಲಾತಿ ಕಲ್ಪಿಸುವಂತದ್ದು ಸರಿಯಾದ ಲಕ್ಷಣ. ಆ ರೀತಿ ಸಮೀಕ್ಷೆ ನಡೆಸದೇ ಮೀಸಲಾತಿ ಬಗ್ಗೆ ತೀರ್ಮಾನಕ್ಕೆ ಬರುವುದು ಯಾವ ರೀತಿ ಸರಿ? ಜಾತಿವಾರು ಮೀಸಲಾತಿ ಸರಿಯಾಗಿ ಹಂಚಿಕೆಯಾಗಿದ್ದರೆ ಒಳಮೀಸಲಾತಿಯ ಪ್ರಶ್ನೆಯೇ ಬರುತ್ತಿರಲಿಲ್ಲ. ಲಿಂಗಾಯತರು, ಒಕ್ಕಲಿಗರು ಹಾಗೂ ದಲಿತರೇ ಆಗಿರಲಿ ಈ ಸಮುದಾಯದೊಳಗೆ ಹಲವು ಉಪಜಾತಿಗಳಿವೆ. ಈ ಎಲ್ಲ ಜಾತಿಗಳಿಗೂ ಶೇಕಡಾವಾರು ಮೀಸಲಾತಿ ನೀಡಿದರೆ, ಈ ಜಾತಿಗಳೊಳಗಿರುವ ಉಪಜಾತಿಗಳಿಗೆ ಮೀಸಲಾತಿ ಲಾಭ ದಕ್ಕುವುದೆಂದು?
ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿಯನ್ನು ಕಸಿದು ಒಕ್ಕಲಿಗ ಮತ್ತು ಲಿಂಗಾಯತರಿಗೆ ಕೊಡಲಾಗಿದೆ. ಹೀಗೆ ಸೌಲಭ್ಯವನ್ನು ಒಂದು ಸಮುದಾಯಕ್ಕೆ ಕೊಟ್ಟಮೇಲೆ ಅದನ್ನು ಕಸಿದು ಇನ್ನೊಬ್ಬರಿಗೆ ಕೊಡೋದಲ್ಲ. ಒಟ್ಟಾರೆಯಾಗಿ, ಇಡೀ ವ್ಯವಸ್ಥೆ ಹೇಗೆ ಸಾಗುತ್ತಿದೆ ಎಂದರೆ ಓಲೈಕೆಯ ರಾಜಕಾರಣದ ಮೂಲಕ ಮೀಸಲಾತಿಯನ್ನು ಕಲ್ಪಿಸುತ್ತಿರುವುದು ಬೇಸರದ ಸಂಗತಿ. ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಕಸಿದು ಬೇರೆ ಸಮುದಾಯಗಳಿಗೆ ಕೊಡುವುದು ಸಮುದಾಯಗಳ ನಡುವೆ ಎತ್ತಿಕಟ್ಟುವ ಕುತಂತ್ರ.

ಜಯಪ್ರಕಾಶ್ ಗೌಡ, ಅಧ್ಯಕ್ಷರು, ಕರ್ನಾಟಕ ಸಂಘ
ಇದ್ದಕ್ಕಿದ್ದಂತೆ ಮುಸ್ಲಿಮರು ಮುಂದುವರೆದುಬಿಟ್ಟರೇ?
ಮುಸ್ಲಿಂ ಸಮುದಾಯಕ್ಕೆ ಶೇ 4 ಮೀಸಲಾತಿ ಕೊಟ್ಟಿದ್ದು ಅವರ ಹಿಂದುಳಿದಿರುವಿಕೆ ಆಧಾರದಲ್ಲಿ. ಅದನ್ನು ಕಸಿದು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚುವ ಬಿಜೆಪಿ ಸರ್ಕಾರದ ಪ್ರಸ್ತಾಪ ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ದುರುದ್ದೇಶವನ್ನು ಹೊಂದಿದೆ. ಈ ಪ್ರಸ್ತಾಪಕ್ಕೆ ಕಾನೂನಿನ ಪ್ರಕಾರ ಮಾನ್ಯತೆಯೂ ಇಲ್ಲ. ಇದು ಮೀಸಲಾತಿಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತಿದೆ.

ದೀಪು ಗೌಡ, ಸಾಮಾಜಿಕ ಹೋರಾಟಗಾರರು
ಒಕ್ಕಲಿಗ ಮತ್ತು ಲಿಂಗಾಯತರಿಗೆ ಮಾಡುತ್ತಿರುವ ಅವಮಾನ
ಈ ಮೊದಲು ಬೆಳಗಾವಿ ಅಧಿವೇಶನ ಮುಗಿದಾಗ ಇಡಬ್ಲ್ಯೂಎಸ್‌ನಲ್ಲಿ ಕಿತ್ತು ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ ಹೆಚ್ಚು ಮೀಸಲಾತಿ ಕೊಡುತ್ತೇವೆ ಎಂದು ಹೇಳಿ ಒಕ್ಕಲಿಗ ಸಮುದಾಯದವರನ್ನು ನಂಬಿಸಿ ಅವಮಾನ ಮಾಡಿದ್ದರು. ಈಗ ಮುಸ್ಲಿಮರಿಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ಕಿತ್ತು ಈ ನಮಗೆ ಕೊಡುತ್ತೇವೆ ಎಂದು ಘೋಷಿಸಿ ಮತ್ತೆ ಅವಮಾನ ಮಾಡುತ್ತಿದ್ದಾರೆ. ಪ್ರಸ್ತುತ ಘೋಷಿಸಿರುವ ಮೀಸಲಾತಿಯನ್ನು ಕಾರ್ಯಗತಗೊಳಿಸುವುದು ಸಾಧ್ಯವಿಲ್ಲ.
ಒಕ್ಕಲಿಗರು ಮತ್ತು ಲಿಂಗಾಯತರು ಈ ರೀತಿ ಯಾರ ಬಳಿಯೂ ಕಿತ್ತುಕೊಂಡವರಲ್ಲ. ಅದರಲ್ಲೂ ತಮಗಿಂತ ಹೆಚ್ಚು ಕಷ್ಟದಲ್ಲಿರುವಂತಹ ಸಮುದಾಯದವರಿಂದ ಕಿತ್ತುಕೊಂಡವರಲ್ಲ. ಬದಲಿಗೆ, ಕೊಟ್ಟು ಅಭ್ಯಾಸ ಇರುವವರು. ಇನ್ನೊಬ್ಬರ ಹತ್ತಿರ ಕಿತ್ತು ಒಕ್ಕಲಿಗ ಸಮುದಾಯವರಿಗೆ ಮೀಸಲಾತಿ ಹೆಚ್ಚಿಸಿದಂತೆ ಮಾಡುವುದು ತಪ್ಪು. ಹಾಗೆಯೇ, ಇದನ್ನು ಕೂಡ ಜಾರಿ ಮಾಡಲು ಸಾಧ್ಯವಿಲ್ಲ. ಆದರೂ, ಹೀಗೆ ಹೇಳಿ ನಂಬಿಸಲು ಪ್ರಯತ್ನಿಸುತ್ತಿರುವುದು ನಮಗೆ ಪದೇ ಪದೇ ಮಾಡುತ್ತಿರುವ ಘೋರ ಅಪಮಾನ.
ಹೀಗೆ ಕಿತ್ತು ಕೊಡುವ ಬದಲಿಗೆ ಕೇಂದ್ರ ಸರ್ಕಾರ, ಇಡಬ್ಲ್ಯೂಎಸ್ ವಿಚಾರದಲ್ಲಿ ಶೇ.50ರ ಮೀಸಲಾತಿಯ ಮಿತಿಯನ್ನು ಹೇಗೆ ಹೆಚ್ಚು ಮಾಡಿತೋ, ಅದೇ ರೀತಿ ಮೀಸಲಾತಿ ಮಿತಿಯನ್ನು ಹೆಚ್ಚಿಸಿ ಈ ಎರಡೂ ಸಮುದಾಯಗಳಿಗೆ ಕೊಡಬೇಕೇ ಹೊರತು ಮುಸ್ಲಿಂ ಸಮುದಾಯದವರ ಮೀಸಲಾತಿಯನ್ನು ಕಿತ್ತು ಕೊಡುವುದಲ್ಲ. ಇದು ಈ ಮೂರು ಸಮುದಾಯದವರಿಗೂ ಮಾಡುತ್ತಿರುವ ದೊಡ್ಡ ಅನ್ಯಾಯ.

ಡಾ. ಬಿ ಸಿ ಬಸವರಾಜು, ಸಾಮಾಜಿಕ ವಿಶ್ಲೇಷಕರು
ಒಕ್ಕಲಿಗರಿಗೆ ಮೀಸಲಾತಿ: ಚುನಾವಣೆ ಗಿಮಿಕ್
ಜನಸಂಖ್ಯೆ ತಕ್ಕಂತೆ, ವೈಜ್ಞಾನಿಕ ಆಧಾರದಲ್ಲಿ ಮೀಸಲಾತಿ ಜಾರಿಗೊಳಿಸಬೇಕು. ಆದರೆ, ಆಡಳಿತ ಸರ್ಕಾರ ಚುನಾವಣೆ ಉದ್ದೇಶವನ್ನು ಬಳಸಿ, ಮುಸ್ಲಿಂ ಸಮುದಾಯದ ಮೀಸಲಾತಿ ರದ್ದುಗೊಳಿಸಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ನೀಡಿದೆ. ಈ ಮೀಸಲಾತಿಯನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ.ಇದೆಲ್ಲವೂ ಕೇವಲ ಚುನಾವಣೆ ಗಿಮಿಕ್. ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿ ಕಸಿದುಕೊಂಡರೆ, ಅದು ಆ ಸಮುದಾಯಕ್ಕೆ ಮಾಡುವ ಅನ್ಯಾಯ.

ಜಿ ಟಿ ವೀರಪ್ಪ, ನಿವೃತ್ತ ಪ್ರಾಂಶುಪಾಲರು
ಮುಸ್ಲಿಮರ ಬಗ್ಗೆ ಚಿಂತಿಸಿದಕ್ಕಾಗಿ ಲಿಂಗಾಯತ ಹಾಗೂ ಒಕ್ಕಲಿಗ ಬುದ್ದಿಜೀವಿಗಳಿಗೆ ನನ್ನ ಕೋಟಿ ವಂದನೆಗಳು,🙏
ಬಿಜೆಪಿ ಯವರು ಮಾಡುವ ಒಂದೊಂದು ಒಡೆಯುವ ಕೆಲಸವೂ, ನಮ್ಮ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸ ಬೇಕು.
Good thinking 👍