ಬೆಳೆ ಹಾನಿ, ಬರಗಾಲ, ಅತಿವೃಷ್ಠಿ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಗೆ ನೀಡುವ ಪರಿಹಾರ ಹಣ ಬಹಳಷ್ಟು ಕಡಿಮೆ ಪ್ರಮಾಣದಲ್ಲಿದ್ದು ಅದನ್ನು ಪರಿಷ್ಕರಿಸುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ.
ವಿವಿಧ ರಾಜ್ಯಗಳ ವಿಪತ್ತು ನಿರ್ವಹಣಾ ಸಚಿವರ ಜೊತೆಗೆ ಅಮಿತ್ ಶಾ ಸಭೆ ನಡೆಸಿದ ಸಭೆಯಲ್ಲಿ ಭಾಗಿಯಾದ ಅವರು, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಬರಗಾಲ, ಅತಿವೃಷ್ಠಿ, ಮಳೆ ಹಾನಿ, ಬೆಳೆ ಪರಿಹಾರ ಮೊತ್ತ ಕಡಿಮೆ ಇದ್ದು ಅದನ್ನು ಪರಿಷ್ಕರಣೆಯಾಗಬೇಕು ಎಂದು ಒತ್ತಾಯಿಸಿದರು.
ಸಭೆ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ಅಂಶಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಮೊದಲನೇಯದಾಗಿ ಮಳೆ ಆಶ್ರಿತ ಪ್ರತಿ ಹೆಕ್ಟೇರ್ ಭೂಮಿಗೆ 8500 ರೂ.ಬೆಳೆ ಹಾನಿ ಪರಿಹಾರ ನೀಡಲಾಗುತ್ತಿದೆ ಅದನ್ನು 20000 ರೂ.ಗಳಿಗೆ ಹೆಚ್ಚಿಸಬೇಕು, ನೀರಾವರಿ ಭೂಮಿಗೆ 17000 ರೂ. ನೀಡಲಾಗುತ್ತಿದೆ ಇದನ್ನು 35000 ರೂ.ಗೆ ಹೆಚ್ಚಿಸಬೇಕು. ತೋಟಗಾರಿಕೆ ಬೆಳೆ ಹಾನಿಗೆ 22000 ರೂ.ಗಳಿಂದ 49000 ರೂ.ಗಳಿಗೆ ಹೆಚ್ಚಿಸಲು ಮನವಿ ಮಾಡಿದ್ದಾರೆ.
ಇದು ಬಹಳಷ್ಟು ವರ್ಷಗಳಿಂದಿರುವ ಸಾರ್ವಜನಿಕರ ಒತ್ತಾಯವಾಗಿದೆ. ಸದ್ಯ ರಾಜ್ಯ ಸರ್ಕಾರ ಕೈಯಿಂದ ಹಣ ಹಾಕಿ ಹೆಚ್ಚಿನ ಪರಿಹಾರ ನೀಡಲಾಗುತ್ತಿದೆ. ಇದು ರಾಜ್ಯ ಸರ್ಕಾರಗಳಿಗೆ ಹೊರೆಯಾಗುತ್ತಿದೆ ಕರ್ನಾಟಕದ ಎಸ್‌ಡಿಆರ್‌ಎಫ್ ಗೆ ಈಗಾಗಲೇ ಅನುದಾನ ಕಡಿಮೆ ಬರುತ್ತಿದೆ. ಹೀಗಾಗಿ ಕೇಂದ್ರದಿಂದ ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ ಎಂದು ಹೇಳಿದರು.
ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರ ಪಕೃತಿ ವಿಕೋಪ ಮಾರ್ಗಸೂಚಿಯಲ್ಲಿ ನಿಯಮ ಬದಲಾಯಿಸಿದೆ. ಸರ್ಕಾರ ನೀಡುವ ಪರಿಹಾರ ಮೊತ್ತದಲ್ಲಿ ವಿಮಾ ಕಂಪನಿಗಳು ವಿಮಾ ಮೊತ್ತವನ್ನು ಕಡಿತಗೊಳಿಸಿ ನೀಡುವ ನಿಯಮವನ್ನು ತೆಗೆದು ಹಾಕಬೇಕು, ಇದರಿಂದ ರೈತರು ಮತ್ತು ಸರ್ಕಾರಕ್ಕೆ ನಷ್ಟವಾಗುತ್ತಿದ್ದು ವಿಮಾ ಕಂಪನಿಗಳಿಗೆ ದೊಡ್ಡ ಲಾಭವಾಗುತ್ತಿದೆ ಇದನ್ನು ಬದಲಾಯಿಸಬೇಕು ಎಂದರು.
ಕಡೆಯದಾಗಿ ಸಿಡಿಲು ಮಳೆ ಜಾಸ್ತಿಯಾಗುತ್ತಿರುವ ಹಿನ್ನಲೆ ಅದರ ಮುನ್ಸೂಚನೆ ಪತ್ತೆ ಹಚ್ಚಬೇಕಿದೆ ಅದಕ್ಕಾಗಿ ಡಾಪ್ಲರ್ ರಾಡಾರ್ ಅಳವಡಿಸಬೇಕು. ರಾಡಾರ್ ಅಳವಡಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.