ವಿಜಯಪುರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗಿಯ ನಿಯಂತ್ರಣಧಿಕಾರಿಯಾದ ನಾರಾಯಣಪ್ಪ ಕುರುಬರ ಅವರು ಒಟ್ಟು ಮೂರು ಕೋಟಿ 82 ಲಕ್ಷ ರೂಪಾಯಿಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ, ನೇರವಾಗಿ ಸಾರಿಗೆ ಇಲಾಖೆಗೆ ಸಂಬಂಧಿಸಿದವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿರುತ್ತಾರೆ. ಇದರಿಂದಾಗಿ ಸುಮಾರು 77 ಜನರಿಗೆ ಆರ್ಥಿಕ ಸೌಲಭ್ಯ ದೊರೆಯುವಂತಾಗಿದೆ ಎಂದು ಕೆಎಸ್ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ವಿಭಾಗದ ವಿಜಯಪುರ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಹಿರೇಮಠ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿರುವ ಅವರು, ಫೆಬ್ರುವರಿ- 2024 ರಿಂದ ಏಪ್ರಿಲ್- 2024 ರ ಅವಧಿಯ ಬಾಕಿ ಉಳಿದಿರುವ ಗಳಿಕೆ ರಜೆ ನಗದೀಕರಣ ಹಾಗೂ ಏಪ್ರಿಲ್- 2024 ಮತ್ತು ಮೇ- 2024ರ ಮಾಯೆಯಲ್ಲಿ ನಿವೃತ್ತಿ, ಸ್ವಯಂ ಪ್ರೇರಣಾ ನಿವೃತ್ತಿ, ಮರಣ ಹೊಂದಿದ ಕಾರಣಗಳಲ್ಲಿ ಈ ಹಣವನ್ನು ನೇರವಾಗಿ ಸಾರಿಗೆ ಇಲಾಖೆಗೆ ಸಂಬಂಧಿಸಿದವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.
ನಾರಾಯಣಪ್ಪ ಕುರುಬರವರು ವಿಜಯಪುರ ವಿಭಾಗಕ್ಕೆ ಬಂದ ಮೇಲೆ ವಿಜಯಪುರ ವಿಭಾಗಕ್ಕೆ, ಕೇಂದ್ರ ಕಚೇರಿಯ ಅಧಿಕಾರಿಗಳ ಮನವೊಲಿಸಿ ಸಾಕಷ್ಟು ಹಣಕಾಸಿನ ಅನುಕೂಲ ಮಾಡಿರುತ್ತಾರೆ. ಹಣ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕರಾದ ಎಂ ರಾಚಪ್ಪ ಅವರಿಗೆ ಮೂಲಕ ಧನ್ಯವಾದ ಅರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ರೀತಿ ಮುಂಬರುವ ದಿನಗಳಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ನೀಡುವ ಆರ್ಥಿಕ ಸೌಲಭ್ಯಗಳಿಂದ ವಂಚಿತವಾಗಿರುವ ವಿಜಯಪುರ ವಿಭಾಗಕ್ಕೆ ವಿಶೇಷ ಅನುದಾನದ ಅಡಿಯಲ್ಲಿ ಸುಮಾರು 200 ಹೊಸ ಬಿಎಸ್ 6 ವಾಹನಗಳನ್ನು ಹಾಗೂ ಬಾಕಿ ಉಳಿದಿರುವ ಸಿಬ್ಬಂದಿಗಳ ಆರ್ಥಿಕ ಸೌಲಭ್ಯಗಳನ್ನು ಪೂರೈಸಲು ಎರಡು ನೂರು ಕೋಟಿ ರೂಪಾಯಿ ಹಾಗೂ ಬಸ್ ನಿಲ್ದಾಣಗಳ ಪುನಶ್ಚೇತನಕ್ಕಾಗಿ ಐವತ್ತು ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿಬೇಕಿದೆ. ವಿಜಯಪುರ ನಗರ ಮತ್ತು ಜಿಲ್ಲೆಯನ್ನು ಅತ್ಯುತ್ತಮ ನಗರ ಮತ್ತು ಉತ್ತಮ ಸಾರಿಗೆ ಸೌಕರ್ಯ ಇರುವ ಜಿಲ್ಲೆಯನ್ನಾಗಿಸುವ ಕೆಲಸ ಬಾಕಿ ಇದೆ ಎಂದು ಅರುಣ್ ಕುಮಾರ್ ಹಿರೇಮಠ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಮೆಣಸಿನಕಾಯಿ ಬೆಳೆಗಾರರಿಗೆ ಹಣ ನೀಡದೆ ಮೋಸ : ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಸಾರಿಗೆ ಸಚಿವರು, ಕಲಬುರ್ಗಿ ವ್ಯವಸ್ಥಾಪಕ ನಿರ್ದೇಶಕರು ತಮ್ಮ ಈ ಬೇಡಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ಕೆ ಎಸ್ ಆರ್ ಟಿ ಸಿ ಸ್ಟಾಪ್ ಅಂಡ್ ವರ್ಕರ್ಸ್ ಯೂನಿಯನ್ ಸಂಘಟನೆಯ ಪದಾಧಿಕಾರಿಗಳಾದ ಐ ಐ ಮುಶ್ರಿಫ, ಆರ್ ಆರ್ ನದಾಫ್, ಎನ್ ಎಚ್ ಸೌದಾಗರ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆನಂದ್ ತಳವಾರ, ರವೀಂದ್ರ ಜಮುನಾಳ, ಶಿವಾನಂದ ಹದನೂರ, ಶ್ರೀಕಾಂತ್ ಮೇಟಗಾರ, ಮಲ್ಲು ಲಮಾಣಿ, ಎಸ್ ಡಿ ಪಟ್ಟಣಶೆಟ್ಟಿ, ರಾಜಶೇಖರ ಕನ್ನೂರ್ ಇತರರು ಉಪಸ್ಥಿತರಿದ್ದರು.
