ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿಡಲಾಗಿದೆ ಎಂದು ದೂರು ಕೊಟ್ಟಿದ್ದ ಸಾಕ್ಷಿ ದೂರುದಾರನನ್ನು ಎಸ್‌ಐಟಿ ಬಂಧಿಸಿದ ಬೆನ್ನಲ್ಲೇ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, “ಧರ್ಮಸ್ಥಳ ಸಾವಿರಾರು ವರ್ಷ ಇತಿಹಾಸವಿರುವ ಪುಣ್ಯಕ್ಷೇತ್ರ. ಇದರ ವಿರುದ್ಧ ಮಾಡಿದ್ದ ಷಡ್ಯಂತ್ರ ಬಯಲಾಗಿದೆ. ಎಸ್‌ಐಟಿ ರಚಿಸಿದ್ದ ಸಿಎಂ ಸಿದ್ದರಾಮಯ್ಯನವರು ಪಾಪದ ಪ್ರಾಯಶ್ಚಿತ್ತಕ್ಕಾಗಿ ದಯವಿಟ್ಟು ಧರ್ಮಸ್ಥಳಕ್ಕೆ ಹೋಗಿ ಒಂದೆರಡು ದಿನ ಇರಬೇಕು” ಎಂದು ತಿಳಿಸಿದ್ದಾರೆ.
ತುಮಕೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೋಮಣ್ಣ, “ಧರ್ಮಸ್ಥಳದ ವಿಚಾರವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಗಿನಿಗೂಟ ಆಗಲಿದೆ. ಧರ್ಮಸ್ಥಳವು ಭಕ್ತರಿಗೆ ನೆಮ್ಮದಿ, ಶಾಂತಿ ಬದುಕುವ ಮಾರ್ಗ ಕೊಟ್ಟಿರುವ ಪವಿತ್ರ ಕ್ಷೇತ್ರ. ಒಂದಿಬ್ಬರು ಬುದ್ಧಿವಂತರು, ನಾನು ದೆಹಲಿಯಲ್ಲಿ ಧರ್ಮಸ್ಥಳದ ಮುಖ್ಯಸ್ಥರನ್ನು ಭೇಟಿ ಮಾಡಿ ಅವೆಲ್ಲವೂ ಫೇಕ್ ಅಂತ ಹೇಳಿದ್ದೆವು. ಸರ್ಕಾರ ನಮ್ಮ ಮಾತನ್ನು ನಂಬದೆ ಎಸ್‌ಐಟಿ ರಚಿಸಿತ್ತು. ಸಾಕ್ಷಿ ದೂರುದಾರನ ಬಂಧನದ ಬಳಿಕ ಈಗ ಎಲ್ಲವೂ ಬಯಲಾಗಿದೆ” ಎಂದು ತಿಳಿಸಿದ್ದಾರೆ.
“ಸತ್ಯ ಎಷ್ಟೇ ಕಹಿಯಾಗಿರಬಹುದು ಸತ್ಯವಿರುತ್ತದೆ. ಸುಳ್ಳನ್ನು ಒಂದು ದೊಡ್ಡ ಕಂತೆಯನ್ನ ಮಾಡಿದ್ರು ಅದು ಸುಳ್ಳೇ. ಧರ್ಮಸ್ಥಳದಲ್ಲಿನ ಬೆಳವಣಿಗೆಯ ಬಗ್ಗೆ ಇಡೀ ವಿಶ್ವವೇ ನೋಡುವಂತಾಯಿತು. ಮಾಧ್ಯಮಗಳೂ ಕೂಡ ಇದರ ಬಗ್ಗೆ ಫೋಕಸ್ ಮಾಡಿತ್ತು. ಜನ ಅದನ್ನೇ ಫಾಲೋ ಮಾಡಬೇಕಾಗಿ ಬಂತು. ನಾವೆಲ್ಲರೂ ಕೂಡ ಅದನ್ನೇ ಸ್ವಾಗತ ಮಾಡಿದ್ದೆವು. ಆದರೆ, ಇಂತಹ ಪಾಪದ ಕೃತ್ಯ ಭಾರತ ದೇಶದಲ್ಲಿ ನಡೆದಾಗ ಮನ್ನಣೆ ಇರುವುದಿಲ್ಲ. ಸತ್ಯಕ್ಕೆ ದಾರಿಯನ್ನು ಭಾರತ ಮಾತೆ ತೋರಿಸ್ತಾಳೆ. ಈ ಪಾಪದ ಕೃತ್ಯಕ್ಕೆ ಯಾರಾದರೂ ಹೊಣೆಗಾರರಿದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ” ಎಂದು ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.
“ಸಿದ್ದರಾಮಯ್ಯ ಅವರು ಇದಕ್ಕೆ ಬೆಲೆ ತೆರಬೇಕಾಗುತ್ತದೆ. ಕೇವಲ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ಮಾತ್ರವಲ್ಲದೆ ಕೋಟ್ಯಂತರ ಭಕ್ತರಿಗೆ ನೋವಾಗಿದೆ. ಯಾರದ್ದೋ ಕೋಮುವಾದಿಗಳ, ಎಡಪಂಥೀಯರ ಮಾತನ್ನು ಕೇಳಿಕೊಂಡು ಕರ್ನಾಟಕ ಜನರ ಮನಸ್ಸನ್ನು ನೀವು ಕೆದಕಿದ್ದೀರಿ. ಇದೆಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದಾರೆ. ಈ ನಾಟಕಕ್ಕೆ ತೆರೆ ಎಳೆಯುವ ಕಾಲ ಬಂದಿದೆ. ಇದು ಸಿದ್ದರಾಮಯ್ಯ ಅವರಿಗೂ ಮನವರಿಕೆಯಾಗಿದೆ” ಎಂದು ಸೋಮಣ್ಣ ತಿಳಿಸಿದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ | ದೂರು ಕೊಟ್ಟಿದ್ದವನ ಹಿನ್ನೆಲೆ ತಿಳಿದುಕೊಂಡಿದ್ದರೆ ಸರ್ಕಾರದ ದುಡ್ಡು ಉಳೀತಿತ್ತು: ಆರ್. ಅಶೋಕ್
“ಸಿದ್ದರಾಮಯ್ಯ ಅವರೇ, ದಯವಿಟ್ಟು ಧರ್ಮಸ್ಥಳಕ್ಕೆ ಹೋಗಿ ಒಂದೆರಡು ದಿನ ಇದ್ದು ಬನ್ನಿ. ಪಾಪದ ಪ್ರಾಯಶ್ಚಿತ್ತಕ್ಕಾಗಿಯಾದರೂ ದರ್ಶನ ಮಾಡಿಕೊಂಡು ಬನ್ನಿ. ಇದರಿಂದ ನಿಮಗೂ ಮತ್ತು ರಾಜ್ಯಕ್ಕೂ ಒಳ್ಳೆಯದಾಗುತ್ತದೆ” ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
