ವ್ಯಕ್ತಿಗಳು ಸಮಾಜ ಸುಧಾರಣೆ ಮಾಡಲು ಬರುತ್ತಿದಂತಹ ಕಾಲ ಹೋಗಿದೆ. ರಾಜಕಾರಣವನ್ನು ಕಸುಬು ಮಾಡಿಕೊಡಿರುವವರು ಹೆಚ್ಚಾಗುತ್ತಿದ್ದಾರೆ. ಈ ನಡೆ ಸರಿಯಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ಆಶಯ್ ಮಧು ಮಾದೇಗೌಡ ಹೇಳಿದರು.
ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಗುರುದೇವರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್, ಶ್ರೀಮತಿ ಪದ್ಮಜಿಮಾದೇಗೌಡ ನರ್ಸಿಂಗ್ ಕಾಲೇಜು, ಬಿಇಟಿ ಹೆಲ್ತ್ ಸೈನ್ಸ್ ಅಂಗಸಂಸ್ಥೆಗಳು, ಆಶಯ್ ಮಧು ಅಭಿಮಾನಿಗಳ ಬಳಗ, ವರ್ಧಮಾನ್ ಜೈನ್ ನೇತ್ರಾಲಯ ಇವರ ಸಂಯುಕ್ತಾಶ್ರಯದಲ್ಲಿ 5 ದಿನಗಳ ಕಾಲ ಬೃಹತ್ ಉಚಿತ ಆರೋಗ್ಯ ತಪಾಸಣೆ, ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ತಾತ ದಿ.ಜಿ.ಮಾದೇಗೌಡರು ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದರು. ಅವರ ಹಾದಿಯಲ್ಲಿ ನಮ್ಮ ಕುಟುಂಬದ ಎಲ್ಲರು ನಡೆಯುತ್ತಿದ್ದೇವೆ. ರಾಜಕಾರಣಿ ಆಗುವುದಕ್ಕೆ ಸಮಾಜದ ಸುಧಾರಣೆಯ ಸೋಗಿನಲ್ಲಿ ರಾಜಕೀಯಕ್ಕೆ ಬರುತ್ತಿರುವ ಕಾಲ ಇದಾಗಿದೆ ಎಂದರು.

ಚುನಾವಣೆಗೂ ಒಂದೆರಡು ವರ್ಷಗಳ ಮುಂಚಿತವಾಗಿ ಜನರಿಗೆ ಉಡುಗೊರೆಗಳನ್ನು ಕೊಟ್ಟು ಕಾರ್ಯಕ್ರಮಗಳನ್ನು ಮಾಡಿ ದಿಕ್ಕು ತಪ್ಪಿಸುತ್ತಿರುವ ಬೆಳವಣಿಗೆಗಳು ಇಂದು ಹೆಚ್ಚಾಗಿವೆ. ಇಂತಹ ರಾಜಕಾರಣಿಗಳಿಂದ ಯಾವುದೇ ಏಳಿಗೆ ಕಾಣಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಹುಟ್ಟೂರು ಗುರುದೇವರಹಳ್ಳಿಯಲ್ಲಿ ನಮ್ಮ ತಾತ ಜಿ.ಮಾದೇಗೌಡರು ಮೂರುವರೆ ಎಕರೆ ಜಮೀನನ್ನು ಕೊಂಡು ಸುತ್ತಮುತ್ತಲಿನ ಹಳ್ಳಿಗಳ ಜನರ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕಟ್ಟಲು ಜಮೀನನ್ನು ಬಿಟ್ಟುಕೊಟ್ಟು ಸೇವೆ ಸಲ್ಲಿಸಿದ್ದಾರೆ. ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿ ಮನೆ ಹೊರತು ಪಡಿಸಿ ಸ್ವಂತಕ್ಕೆ ಇನ್ಯಾವುದೇ ಆಸ್ತಿ ಮಾಡಿದವರಲ್ಲ ಎಂದರು.
ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಜಿ.ಮಾದೇಗೌಡರು ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತಿರುವ ಆಶಯ್ ಮಧು ಅವರಿಗೆ ರಾಜಕೀಯ ಬಲ ನೀಡಿ ಬೆಂಬಲಿಸಬೇಕಾಗಿದೆ. ಜನರ ಉದ್ದೇಶಗಳು ನೆರವೇರಬೇಕಾದರೆ ದೂರದೃಷ್ಟಿ ಇರಬೇಕು. ಇದು ಇಲ್ಲದಿರುವವರು ಹೆಚ್ಚಾಗಿರುವುದರಿಂದ ಜನರ ಸೇವೆಯ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಮಧು ಜಿ ಮಾದೇಗೌಡ ಮಾತನಾಡಿ, ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ನಡೆಸಲು ಆಶಯ್ ಅಭಿಮಾನಿಗಳ ಬಳಗ ಯೋಜನೆ ರೂಪಿಸಿದೆ ಎಂದರು.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ಕಾಲೇಜು ಯುವತಿಗೆ ಚೂರಿ ಇರಿತ; ಯುವಕ ಪೊಲೀಸ್ ವಶಕ್ಕೆ
ವೇದಕೆಯಲ್ಲಿ ಟಿಎಚ್‌ಓ ಬಿ.ರವೀಂದ್ರ, ಬಿಇಟಿ ಹೆಲ್ತ್ ಸೈನ್ಸ್ ನಿರ್ದೇಶಕ ಟಿ.ತಮಿಳ್ ಕಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಜಿ.ಮಾದೇಗೌಡ ಆಸ್ಪತ್ರೆಯ ಆಡಳಿತಾಧಿಕಾರಿ ಪಿ.ಎಸ್.ಗಣೇಶ್ ಪ್ರಭು, ವರ್ಧಮಾನ್ ಜೈನ್ ನೇತ್ರಾಲಯ ವೈದ್ಯಾಧಿಕಾರಿ ಜೆ.ಆಶಾರಾಣಿ, ಪಿಡಿಓ ಎಚ್.ಪಿ.ಶಿವಮಾದಯ್ಯ, ಪದ್ಮ ಜಿ.ಮಾದೇಗೌಡ ನರ್ಸರಿ ಕಾಲೇಜಿನ ಪ್ರೊ.ಮಹೇಶ್ ಕುಮಾರ್, ತಾ.ಪಂ ಮಾಜಿ ಸದಸ್ಯ ಭರತೇಶ್, ಮುಖಂಡರಾದ ಅಣ್ಣೂರು ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್ ಚಂದ್ರು, ಗುರುದೇವರಹಳ್ಳಿ ಪುಟ್ಟಸ್ವಾಮಿ, ಚಿಕ್ಕರಸಿನಕೆರೆ ಶಿವಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
