ರಾಜ್ಯದಲ್ಲಿರುವ ರೈತ ವಿರೋಧಿ ಕೃಷಿ ನೀತಿಗಳು ಕೇಂದ್ರ ಸರ್ಕಾರದ ಒತ್ತಡದಿಂದ ಜಾರಿಗೆ ಬಂದಿವೆ. ಅವುಗಳನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು. ರೈತ ಪರವಾದ ನೀತಿಗಳನ್ನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಮುಖಂಡ ಯಶವಂತ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ನಡೆಯುತ್ತಿರುವ ಮಹಾಧರಣಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಜಾರಿಗೆ ತಂದಿದ್ದ ಕೃಷಿ ನೀತಿಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಅಂತ ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಹೇಳಿತ್ತು. ತಮಿಳುನಾಡಿನ ಸ್ಟಾಲಿನ್ ಸರ್ಕಾರ ಕೂಡ ಆ ನೀತಿಗಳಿಗೆ ವಿರೋಧ ವ್ಯಕ್ತಪಡಿಸಿತ್ತು. ಅದರೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಾಗಿದ್ದಾರೆ. ಅವರು ರೈತರ ವಿರೋಧಿ ನೀತಿಗಳನ್ನು ಚಳಿಗಾಲದ ಅಧಿವೇಶನದಲ್ಲಿ ಹಿಂಪಡೆಯಬೇಕು” ಎಂದು ಗ್ರಹಿಸಿದ್ದಾರೆ.
“ಕೇಂದ್ರ ಸರ್ಕಾರ ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಲು ನಿರಾಕರಿಸಿದೆ. ಬಂಡವಾಳಿಗರಿಗೆ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಬೇಕೆಂಬ ಹುನ್ನಾರವನ್ನ ಬಿಜೆಪಿ ಸರ್ಕಾರ ಹೊಂದಿದೆ. ಭಾರತದ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಂವಿಧಾನಕ್ಕೆ ಭಾರಿ ದೊಡ್ಡ ಗಂಡಾತರ ಬಂದಿದೆ. ಅದನ್ನು ಕಾರ್ಪೋರೇಟ್ ಪರವಾದ ಹಿಂದುತ್ವವಾದಿ ಮೊದಿ ಸರ್ಕಾರ ಮಾಡುತ್ತಿದೆ” ಎಂದು ಆರೋಪಿಸಿದರು.
“ಇಂದಿರಾಗಾಂಧಿ ಹೇಳಿದ್ದ ತುರ್ತುಪರಿಸ್ಥಿತಿಯ ಸಮಯದಲ್ಲಿ ಅವರಿಗೆ ಸರಿಯಾದ ಪಾಠ ಕಲಿಸಿ, ದೇಶವನ್ನು ಜನರು ರಕ್ಷಿಸಿದ್ದಾರೆ. ವಾಜಪೇಯಿ ಕಾಲದಲ್ಲಿ ಕೋಮುವಾದಿ, ಉದಾರವಾದಿ ನೀತಿಗಳು ಹಾಗೂ ಖಾಸಗೀಕರಣವನ್ನು ಹೇರುವ ಮೂಲಕ ಭಾರತ ಹೊಳೆಯುತ್ತಿದ್ದೆ ಎಂದಿದ್ದರು. ಅವರಿಗೂ ಈ ದೇಶದ ಬಡ ಜನರು ಪಾಠ ಕಲಿಸಿದ್ದಾರೆ. ಇಂದು ಮೋದಿ ಸರ್ಕಾರವೂ ಅಂತದ್ದೇ ಕೆಲಸವನ್ನ ಮಾಡುತ್ತಿದೆ. ಅವರಿಗೂ ಸರಿಯಾದ ಪಾಠ ಕಲಿಸಿ, ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ” ಎಂದು ಯಶವಂತ್ ಹೇಳಿದ್ದಾರೆ.