ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೀನುಗಾರರ ಮೇಲೆ ಕೇಸು ದಾಖಲಿಸಿರುವುದನ್ನು ಖಂಡಿಸಿ ಶನಿವಾರ ಮಲ್ಪೆ ಮೀನುಗಾರರ ಸಂಘದ ವತಿಯಿಂದ ಮಲ್ಪೆ ಬಂದರು ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉಡುಪಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡುತ್ತಿದ್ದಾಗ ರಾಜಕೀಯ ಮಾತನ್ನಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು, ಭಾಷಣ ನಡೆಸಲು ಅಡ್ಡಿಪಡಿಸಿದ ಬೆಳವಣಿಗೆ ನಡೆದಿದೆ.
ಮಲ್ಪೆಯಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೀನುಗಾರರ ಮೇಲೆ ಕೇಸು ದಾಖಲಿಸಿರುವುದನ್ನು ಖಂಡಿಸಿ ನಡೆದ ಪ್ರತಿಭಟನಾ ವೇದಿಕೆಯಲ್ಲಿ ಉಡುಪಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡುತ್ತಿದ್ದಂತೆಯೇ, ರಾಜಕೀಯ ಪ್ರಸ್ತಾಪಿಸದಂತೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. pic.twitter.com/8mjNgPLq8a
— eedina.com ಈ ದಿನ.ಕಾಮ್ (@eedinanews) March 22, 2025
ಪ್ರತಿಭಟನೆಯಲ್ಲಿ ಮಾತನಾಡಿದ ರಮೇಶ್ ಕಾಂಚನ್, ವೇದಿಕೆಯಲ್ಲಿ ಕೂತಿದ್ದ ಬಿಜೆಪಿ ಮುಖಂಡ, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಉಲ್ಲೇಖಿಸಿ, ‘ಕೆಲವು ವರ್ಷಗಳ ಹಿಂದೆ ನಮ್ಮ ಜಿಲ್ಲೆಯಲ್ಲಿ ಇದೇ ರೀತಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಮೀನುಗಾರರರಿಗೆ ಸಮಸ್ಯೆಯಾಗುತ್ತಿದೆ ಎಂದು ಆಗಿನ ಶಾಸಕರಾಗಿದ್ದ ಪ್ರಮೋದ್ ಮಧ್ವರಾಜ್ ಅವರನ್ನು ನಂಬಿಕೊಂಡು ಪ್ರತಿಭಟನೆ ನಡೆಸಿದ್ದೆವು. ಆವಾಗ ಅಂದಿನ ಎಸ್‌ಪಿಯವರು ನಮ್ಮ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು. ಇವತ್ತು ಕೂಡ ಆ ಕೇಸಿನ ಹಿಂದೆ ಓಡಾಡುತ್ತಿದ್ದೇವೆ. ಆವಾಗ ಪ್ರಮೋದ್ ಮಧ್ವರಾಜ್ ಈವಾಗಿನ ಆಕ್ರೋಶ ತೋರಿಸಲೇ ಇಲ್ಲ. ಹಾಗಾಗಿ, ನನ್ನನ್ನೂ ಸೇರಿದಂತೆ ಯಾವುದೇ ರಾಜಕೀಯ ಮುಖಂಡರ ಮಾತುಗಳನ್ನು ನಂಬಬೇಡಿ. ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವವರ ಮಾತುಗಳನ್ನಷ್ಟೇ ನಂಬಿ’ ಎಂದು ಹೇಳಿ, ಮಾತು ಮುಗಿಸಿದರು.
ಈ ವೇಳೆ ಆಕ್ರೋಶಗೊಂಡ ಕೆಲವು ಪ್ರತಿಭಟನಾಕಾರರು ವೇದಿಕೆಯ ಕಡೆಗೆ ನುಗ್ಗಿ ಬಂದು, ‘ರಾಜಕೀಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ಈ ವೇಳೆ ವೇದಿಕೆಯಲ್ಲಿದ್ದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಮೀನುಗಾರರ ಸಂಘದ ಮುಖಂಡರು, ಸಮಾಧಾನಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಬಿಜೆಪಿ ಶಾಸಕ ರಘುಪತಿ ಭಟ್, “ಮಲ್ಪೆ ಬಂದರಿನಲ್ಲಿ ಘಟನೆ ನಡೆದಿದ್ದು ದುರದೃಷ್ಟಕರ ಸಂಗತಿ. ದುಡಿದು ಕಷ್ಟ ಪಟ್ಟು ತಂದ ಮೀನು ಅದನ್ನು ಕದ್ದು ಹೋಗುವುದು ದೊಡ್ಡ ತಪ್ಪು. ಕದ್ದು ಸಿಕ್ಕಿ ಬಿದ್ದ ಮಹಿಳೆಯನ್ನು ಕಟ್ಟಿ ಹಾಕಿದ್ದು ವೈರಲ್ ಆದದ್ದು ದುರದೃಷ್ಟಕರ. ಆದರೆ ಸರಕಾರ ನಡೆದುಕೊಂಡ ರೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದರು.
“ಪಿಕ್ ಪಾಕೆಟ್ ಮಾಡಿದವರನ್ನು, ಚಿನ್ನ ಕದ್ದವರಿಗೆ ಪ್ರಥಮ ಪ್ರಕ್ರಿಯೆ ಥಳಿತವೇ ಆಗಿರುತ್ತದೆ. ಆದರೆ ಇಲ್ಲಿ ವ್ಯವಸ್ಥೆ ಇದೆ. ಈ ರೀತಿಯ ಘಟನೆಯಾಗಿಲ್ಲ. ಸಂಘ ಸಂಸ್ಥೆ ಗಳು ರಾಜಿ ಪಂಚಾಯತ್ ಮಾಡಿದ ವೀಡಿಯೋ ಇದೆ. ಪೊಲೀಸ್ ಠಾಣೆ ರಾಜಿಯಾದ ವಿಚಾರದ ಮೇಲೆ ಅಟ್ರಾಸಿಟಿ ಕೇಸ್ ಹೇಗೆ ಹಾಕಿದ್ದೀರ? ಇಲ್ಲಿ ಎಲ್ಲೂ ಜಾತಿ ನಿಂದನೆಯಾಗಿಲ್ಲ. ಕಟ್ಟಿ ಹೊಡೆಯುವಾಗ ಜಾತಿ ನಿಂದನೆ ಮಾಡಿಲ್ಲ. ಪೊಲೀಸರು ಅಟ್ರೋಸಿಟಿ ಕೇಸನ್ನು ವಾಪಸು ಪಡೆಯಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಭಾಗವಹಿಸಿ ಮೀನುಗಾರರಿಗೆ ಅದ ಅನ್ಯಾಯಕ್ಕೆ ನ್ಯಾಯ ಒದಗಿಸಲು ಸದಾ ಜೊತೆಗಿರುವ ಭರವಸೆ ನೀಡಿದರು. ಪ್ರತಿಭಟನೆಯ ಬಳಿಕ ಅಪರ ಜಿಲ್ಲಾಧಿಕಾರಿ ಆಬಿದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ವಿವಿಧ ಮೀನುಗಾರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾವಿರಾರು ಮೀನುಗಾರರು ಉಪಸ್ಥಿತರಿದ್ದರು.