ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಹುಲ್ಲಿನ ಮೆದೆಯಲ್ಲಿ ದಲಿತ ಯುವಕನ ಸಜೀವ ದಹನ ಪ್ರಕರಣ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಸದರಿ ಗ್ರಾಮದ ಸವರ್ಣಿಯ ಯುವಕ ಅನಿಲ್ ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಕತ್ತರಘಟ್ಟ ಗ್ರಾಮದಲ್ಲಿ ಹುಲ್ಲಿನ ಮೆದೆಗೆ ಬೆಂಕಿ ಹಾಕಿ ದಲಿತ ಯುವಕ ಜಯಕುಮಾರ್‌ನನ್ನು ಜೀವಂತವಾಗಿ ದಹನ ಮಾಡಿರುವ ಸಂಬಂಧ ಗ್ರಾಮದ ಕೃಷ್ಣೆಗೌಡರ ಮಗ ಅನಿಲ್ ಕುಮಾರ್ ವಿರುದ್ಧ ಮೃತನ ಪತ್ನಿ ಲಕ್ಷ್ಮಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೃಷ್ಣರಾಜಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಸಿದ್ದಯ್ಯ ಆವರಿಗೆ ಸೇರಿರುವ ಜಮೀನಿನಲ್ಲಿ ಕೃಷ್ಣೆಗೌಡರ ಮಗ ಅನಿಲ್ ಕುಮಾರ್ ಅಕ್ರಮವಾಗಿ ಹುಲ್ಲಿನ ಮೆದೆಯನ್ನು ಹಾಕಿಕೊಂಡಿದ್ದು, ತನ್ನ ಜಮೀನಿನಲ್ಲಿ ಅಕ್ರಮವಾಗಿ ಹಾಕಿಕೊಂಡಿರುವ ಹುಲ್ಲಿನ ಮೆದೆಯನ್ನು ತೆರವು ಮಾಡಿಕೊಡುವಂತೆ ಗ್ರಾಮದಲ್ಲಿ ರಾಜಿ ಪಂಚಾಯಿತಿ ಮಾಡಿ ಅದು ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮೃತ ಯುವಕ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದನು ಎಂದು ತಿಳಿದುಬಂದಿದೆ.
ನಿನ್ನೆಯೂ ಅನಿಲ್ ಮತ್ತು ಜಯಕುಮಾರ್ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಪರಸ್ಪರ ಗಲಾಟೆ, ಗದ್ದಲಗಳು ನಡೆದಿದ್ದು, ʼನಾನು ಹುಲ್ಲಿನ ಮೆದೆಯನ್ನು ತೆರವುಗೊಳಿಸುವುದಿಲ್ಲ, ಮೆದೆಗೆ ಬೆಂಕಿ ಹಾಕ್ತೀನಿ ನೀನು ಬೆಂಕಿಯೊಳಗೆ ಬಿದ್ದು ಸಾಯಿ, ಇಲ್ಲದಿದ್ದರೆ ನಾನೇ ನಿನ್ನನ್ನು ಸಾಯಿಸುತ್ತೇನೆʼ ಎಂದು ಸವರ್ಣೀಯನೊಬ್ಬ ಬೆದರಿಕೆ ಹಾಕಿದ ಎನ್ನಲಾಗಿದೆ. ಮನನೊಂದ ದಲಿತ ಯುವಕ ಜಯಕುಮಾರ್ ಉರಿಯುತ್ತಿರುವ ಹುಲ್ಲಿನ ಮೆದೆಯೊಳಕ್ಕೆ ಹಾರಿ ಸಾವಿಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ʼನನ್ನ ಪತಿಯ ಸಾವಿಗೆ ಅನಿಲ್ ಕಾರಣʼ ಎಂದು ಲಕ್ಷ್ಮಿ ದೂರು ನೀಡಿದ್ದಾರೆ.
ಆರೋಪಿ ಅನಿಲ್ ಕುಮಾರ್ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಗ್ರಾಮಾಂತರ ಪೊಲೀಸರು ಬಲೆ ಬೀಸಿದ್ದಾರೆ. ನಾಗಮಂಗಲ ಡಿವೈಎಸ್‌ಪಿ ಚಲುವರಾಜು ಅವರು ಅನಿಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದು, ‘ಉರಿಯುವ ಬೆಂಕಿಯಲ್ಲಿ ಕಿರಚಾಟ, ಬೆಂಕಿ ಜ್ವಾಲೆಗೆ ಓಡಾಟ ಇರಬೇಕಿತ್ತು. ಪಕ್ಕದಲ್ಲೇ ಟ್ರಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿದ್ದವರಿಗೂ ಕೇಳಿಸಿಲ್ಲವೆಂದರೆ, ಮುಂಚೆಯೇ ಕೊಲೆ ಮಾಡಿ ಸುಟ್ಟಿರಬೇಕು’ ಎನ್ನುವ ಮಾತುಗಳು
ಕೇಳಿಬಂದಿವೆ.
ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಜಯಕುಮಾರ್ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ವಾರಸುದಾರರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಸಾರ್ವಜನಿಕ ಕಚೇರಿಗಳಿಗೆ ರಾಜ್ಯ ಉಪ ಲೋಕಾಯುಕ್ತ ಬಿ. ವೀರಪ್ಪ ಭೇಟಿ; ಸ್ವಯಂ ಪ್ರೇರಿತ ಪ್ರಕರಣ ದಾಖಲು
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಮಾಂಬಳ್ಳಿ ಜಯರಾಮ್, ತಾಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜ್, ದಲಿತ ಮುಖಂಡರಾದ ಚನ್ನಕೇಶವ, ರಂಗಸ್ವಾಮಿ, ಬಂಡಿಹೊಳೆ ರಮೇಶ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಆನಂದ್ ಗೌಡ, ದಲಿತ ಯುವರೈತ ಮೃತ ಜಯಕುಮಾರ್ ಪತ್ನಿ ಲಕ್ಷ್ಮಿ, ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಮೃತರ ಬಂಧುಗಳು ಹಾಗೂ ಕತ್ತರಘಟ್ಟ ಗ್ರಾಮಸ್ಥರು ಅಂತ್ಯ ಸಂಸ್ಕಾರದ ವೇಳೆ ಇದ್ದರು.