ಸಾಹಿತ್ಯ ಎಂಬ ಪ್ರಜ್ಞೆ ಕನ್ನಡದ ಪ್ರಜ್ಞೆ. ಸಾಹಿತ್ಯ ಭಾಷೆಯ ಮೂಲಕ ಘಟಿಸುತ್ತಿರುವ ಒಂದು ವಿದ್ಯಮಾನ. ಭಾಷೆಯನ್ನು ಪ್ರಧಾನವಾದ ಸಾಧನೆಯನ್ನಾಗಿಸಿಕೊಂಡು ಕನ್ನಡ ಕಟ್ಟುವಂತಹ ಕೆಲಸವನ್ನು ಸಾಹಿತಿಗಳು ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎನ್.ಎಲ್. ಮುಕುಂದರಾಜ್ ಅನಿಸಿಕೆ ವ್ಯಕ್ತಪಡಿಸಿದರು.
ಅವರು ಅ.14ರ ಸೋಮವಾರ ಮಂಡ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವಾರದ ಸಾಹಿತ್ಯ ಅತಿಥಿ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಹಿತ್ಯ ಸಮ್ಮೇಳನವು ವೈಭವದ ಸಂಭ್ರಮ. ಈ ಸಮ್ಮೇಳನದಲ್ಲಿ ಹೆಚ್ಚು ಭಾಗವಹಿಸುವವರು ಶಿಕ್ಷಕರಾಗಿದ್ದಾರೆ. ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣ ನೀಡುವ ಶಿಕ್ಷಕರು ಪ್ರತಿನಿಧಿ ಶುಲ್ಕ ಪಾವತಿಸಿ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ರೈತರು, ಆಟೋ ಮತ್ತು ಬಸ್ ಚಾಲಕರು ಸೇರಿದಂತೆ ವಿವಿಧ ವರ್ಗದ ಜನರು ಕನ್ನಡದ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

ಸಾಹಿತ್ಯದ ಬರವಣಿಗೆಗಳ ತೀವ್ರತೆ, ತೀಕ್ಷ್ಣತೆ ಇತ್ತೀಚಿನ ಬರವಣಿಗೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹೊಸಬರಾಗಿ ಶ್ರೀಹರ್ಷ ಸಾಲಿಮಠ, ದಯಾ ಸಂದನಘಟ್ಟ, ಟಿ.ಕೆ.ದಯಾನಂದ, ಗುರು ಪ್ರಸಾದ್ ಕಟ್ಟಲಗೆರೆ, ಚಾಂದ್ ಪಾಷ, ವಿ.ಆರ್.ಕಾರ್ಪೆಂಟರ್, ಕಡಲ ಬೇಟೆಗಾರ ನಾಗರಾಜ್ ಮುಂತಾದವರ ಶ್ರೇಷ್ಠ ಬರಹಗಳನ್ನು ಓದಬೇಕು ಎಂದು ಕರೆ ನೀಡಿದರು.
ಮಹಿಳಾ ಲೇಖಕರು, ದಲಿತ ಸಮುದಾಯದ ಬರಹಗಾರರು ತೀಕ್ಷ್ಣ ಬರಹಗಳನ್ನು ಪ್ರಕಟಿಸುತ್ತಿರುವುದರ ಕುರಿತು ಉಲ್ಲೇಖಿಸಿದ ಮುಕುಂದರಾಜ್ ಅವರು, ಇವುಗಳು ಈ ಕಾಲದ ಸಮಸ್ಯೆಗಳಿಗೆ ಸಾಕಷ್ಟು ಸ್ಪಷ್ಟನೆ ನೀಡುತ್ತವೆ. ಪಂಪ, ರನ್ನ, ಕುವೆಂಪು, ಬೇಂದ್ರೆ, ಅನಂತಮೂರ್ತಿ, ತೇಜಸ್ವಿ ಅವರ ಸಾಹಿತ್ಯಗಳು ಇಂದಿನ ಸಮಸ್ಯೆಗಳಿಗೆ ಉತ್ತರವನ್ನು ಹೊಂದಿವೆ ಎಂದರು.
ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಸಂಸ್ಕಾರವನ್ನು ಕೊಂಡಾಡಿದ ಅವರು, ಈ ಜಿಲ್ಲೆ ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿದ್ದು, ಸೌಹಾರ್ದತೆಯನ್ನು ಕಾಪಾಡುವ ಕಾರ್ಯದಲ್ಲಿ ಎಲ್.ಎಲ್.ನಾಗೇಗೌಡ, ಜೀ.ಶಂ.ಪ, ಅರ್ಚಕ ರಂಗಸ್ವಾಮಿ ಮುಂತಾದವರ ಕೊಡುಗೆಯನ್ನು ಸ್ಮರಿಸಿದರು.
ಮಹಿಳಾ ಲೇಖಕಿಯನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಕೀರ್ತಿಯು ಮಂಡ್ಯ ಜಿಲ್ಲೆಯದ್ದಾಗಿದೆ. ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಆಯ್ಕೆ ಮಾಡುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದರು.
ಸಂವಾದದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಂ, ಸೋಮಶೇಖರ್ ಕೆರಗೋಡು, ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ಅಧ್ಯಕ್ಷ ಡಿ.ಎಲ್.ಲಿಂಗರಾಜು ಇದ್ದರು.
