ಕಾವೇರಿ ಜಲಾನಯನ ಪ್ರದೇಶವಾದ ಕೊಡಗಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕನ್ನಂಬಾಡಿ ಅಣೆಕಟ್ಟೆಗೆ ಭಾರೀ ಪ್ರಮಾಣದಲ್ಲಿ ಒಳಹರಿವು ಬರುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯ ಹಾಗೂ ಕಬಿನಿ ಜಲಾಶಯದಿಂದ 2 ಲಕ್ಷ ಕ್ಯುಸೆಕ್‌ಗೂ ಹೆಚ್ಚು ಹೊರಹರಿವು ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.
ಕನ್ನಂಬಾಡಿಯಿಂದ ಸುಮಾರು 1,50,000 ಕ್ಯುಸೆಕ್, ಹೇಮಾವತಿಯಿಂದ 1 ಲಕ್ಷ ಕ್ಯುಸೆಕ್ ಹಾಗೂ ಕಬಿನಿ ಜಲಾಶಯದಿಂದ ಈಗಾಗಲೇ 80,000 ಕ್ಯುಸೆಕ್‌ಗೂ ಹೆಚ್ಚಿನ ಹೊರಹರಿವು ನೀರನ್ನು ಕಾವೇರಿ ನದಿಗೆ ಬಿಡಲಾಗಿದ್ದು, ಈ ಪ್ರಮಾಣವೂ ಸುಮಾರು 3,00,000 ಕ್ಯುಸೆಕ್‌ಗಿಂತ ಅಧಿಕವಾಗುವ ಸಂಭವವಿರುತ್ತದೆ.

ಮಂಡ್ಯ, ಮೈಸೂರು, ಮತ್ತು ಚಾಮರಾಜನಗರ ಜಿಲ್ಲೆಯ ಜನರು ಹಾಗೂ ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ಸುರಕ್ಷತೆಗೆ ಎಚ್ಚರಿಕೆ ವಹಿಸಿ, ಸರಿಯಾದ ಮುನ್ನೆಚ್ಚರಿಕೆಯಿಂದ ಸುರಕ್ಷಿತ ಜಾಗಗಳಿಗೆ ತೆರಳುವಂತೆ ಕಾವೇರಿ ನದಿ ಪಾತ್ರದಲ್ಲಿನ ಸಾರ್ವಜನಿಕರು ಸ್ವಯಂ ಮುಂಜಾಗ್ರತೆ ವಹಿಸಲು ತಿಳಿಸಲಾಗಿದೆ.
ಕಾವೇರಿ ನದಿ ಪಾತ್ರಕ್ಕೆ ಇಲ್ಲವೇ ತಗ್ಗು ಪ್ರದೇಶಗಳಿಗೆ ಭೇಟಿ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನದಿಪಾತ್ರದಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿರುವ ರೈತರು ಕೃಷಿ ಚಟುವಟಿಕೆಗಳಿಗೆ ಹೋಗದಂತೆ ಹಾಗೂ ಜಾನುವಾರುಗಳನ್ನು ಬಿಡದಿರಲು ಸೂಚಿಸಿದೆ.
ನದಿಪಾತ್ರದಲ್ಲಿ ಮತ್ತು ಸೇತುವೆ ಇನ್ನಿತರ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡುವುದು, ನೀರಿನಲ್ಲಿ ಈಜುವುದು ಹಾಗೂ ಸೆಲ್ಫಿ ತೆಗೆಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಅಳವಡಿಸಿರುವ ಸೂಚನಾ ಫಲಕಗಳನ್ನು ಗಮನಿಸಲು ಸೂಚಿಸಲಾಗಿದೆ.
ತಾಲೂಕು ಆಡಳಿತದ ವತಿಯಿಂದ ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಕೈಗೊಂಡಿರುವ ಕ್ರಮವನ್ನು ವ್ಯಾಪಕ ಪ್ರಚಾರ ಮಾಡಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.