ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಸಭ್ಯ ರೀತಿಯಲ್ಲಿ ಸಾಲ ವಸೂಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ಸ್ಪಷ್ಟ ಎಚ್ಚರಿಕೆ ನೀಡಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಭೆಯಲ್ಲಿ ಅವರು ಮಾತನಾಡಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ಸಾಲ ನೀಡಿದ ನಂತರ, ತಮ್ಮ ಸಿಬ್ಬಂದಿ ಕಂತು ವಸೂಲಿಗೆ ತೆರಳುವಾಗ ಅವರು ಉತ್ತಮವಾಗಿ ವರ್ತಿಸಬೇಕು. ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳನ್ನು ಬಳಸಿದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಬಡ ಕುಟುಂಬಗಳು ಸಾಮಾನ್ಯವಾಗಿ ಈ ಸಂಸ್ಥೆಗಳ ಮೂಲಕ ಸಾಲ ಪಡೆಯುತ್ತವೆ. ಅವರಿಗೆ ಸಾಲದ ಮೊತ್ತ ಸಾಮಾನ್ಯವಾಗಿ ಒಂದರಿಂದ ಎರಡು ಲಕ್ಷದ ಒಳಗೆ ಇರುತ್ತದೆ ಮತ್ತು ತಿಂಗಳ ಕಂತುಗಳು ಸಾವಿರದ ಒಳಗೆ. ಈ ಜನರನ್ನು ಅವಮಾನ ಮಾಡುವುದರಿಂದ, ಅವರಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿ ಆತ್ಮಹತ್ಯೆಗೆ ತಳ್ಳುವಂತಹ ಪ್ರಕರಣಗಳು ನಡೆದಿವೆ. ಇಂತಹ ಘಟನೆಗಳು ಸಮಾಜದ ತಲೆ ತಗ್ಗಿಸುವಂಥವು ಎಂದು ಜಿಲ್ಲಾಧಿಕಾರಿ ಹೇಳಿದರು.
ಸಾಲ ವಸೂಲಿಗೆ ತೆರಳಿದಾಗ ಮನೆ ಪರಿಸ್ಥಿತಿಯನ್ನು ಗಮನಿಸಬೇಕು. ಮನೆಯಲ್ಲಿ ಬೇರೆಯವರು ಇದ್ದಾಗ, ಅಥವಾ ಮಕ್ಕಳ ಮುಂದೆ ಕಂತು ಪಾವತಿ ಒತ್ತಾಯಿಸುವುದು, ಅವರಿಗೊಂದು ಅವಮಾನವಾಗುತ್ತದೆ ಎಂಬ ಜ್ಞಾನ ಇರಬೇಕು. ಸಾಲದ ಮೇಲೆ ವಿಧಿಸುವ ಬಡ್ಡಿ, ಪ್ರೊಸೆಸಿಂಗ್ ಶುಲ್ಕ ಹಾಗೂ ಮರುಪಾವತಿ ಷರತ್ತುಗಳ ಬಗ್ಗೆ ಗ್ರಾಹಕರಿಗೆ ಕನ್ನಡದಲ್ಲಿ ಸ್ಪಷ್ಟವಾಗಿ ಮಾಹಿತಿ ನೀಡಬೇಕು. ಕಂತು ಮರುಪಾವತಿಯಲ್ಲಿ ತಡವಾದರೆ ಲಿಖಿತ ನೋಟಿಸ್ ನೀಡಬೇಕು ಹಾಗೂ ಅವರ ಸ್ಥಿತಿಯನ್ನು ತಿಳಿದು ಅವರಿಗೆ ಸಮಯಾವಕಾಶ ನೀಡಬೇಕು ಎಂದರು.
ಇದನ್ನು ಓದಿದ್ದೀರಾ? 2024ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಪ್ರೊ. ಜಿ.ಬಿ. ಶಿವರಾಜು ಆಯ್ಕೆ
ಜಿಲ್ಲಾಡಳಿತಕ್ಕೆ ಮೈಕ್ರೋ ಫೈನಾನ್ಸ್ ಕುರಿತಂತೆ ಹಲವು ದೂರುಗಳು ಬಂದಿವೆ. ಈ ದೂರುಗಳನ್ನು ಪರಿಶೀಲಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ದೂರು ಕೇಂದ್ರ ಮತ್ತು ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಅಲ್ಲದೆ, ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ತರಬೇತಿಯನ್ನು ನೀಡಬೇಕು. ಸಿಬ್ಬಂದಿಗೆ ಗುರುತಿನ ಚೀಟಿ ನೀಡಬೇಕು ಹಾಗೂ ಕಚೇರಿಗಳ ಮುಂದೆ ನಾಮಫಲಕಗಳನ್ನು ಅಳವಡಿಸಬೇಕು ಹಾಗೂ ಅದನ್ನು ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಮಂಡ್ಯ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್ ಎನ್, ಮುಖಂಡರಾದ ವೆಂಕಟಗಿರಿಯಯ್ಯ, ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಮಂಜುನಾಥ್, ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
