ಮಂಡ್ಯ ಜಿಲ್ಲೆಯಲ್ಲಿ ಲಾಟರಿ ಹಾವಳಿಯಿಂದ ಆಗುತ್ತಿರುವ ಹಣಕಾಸು ಮತ್ತು ಸಾಮಾಜಿಕ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ತಿಳಿಸಿದರು.
ಅವರು ನ.7ರಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅನಧಿಕೃತ ಲಾಟರಿ ಮಾರಾಟ ಮತ್ತು ಮಟ್ಕಾ ಹಾವಳಿಯನ್ನು ನಿಯಂತ್ರಿಸಲು ಸಭೆ ನಡೆಸಿ ಮಾತನಾಡಿ, ಲಾಟರಿಯ ಪರಿಣಾಮವಾಗಿ ಜಿಲ್ಲೆಯ ಜನರ ಮೇಲೆ ನಕಾರಾತ್ಮಕ ಪರಿಣಾಮಗಳು ಬೀರುತ್ತಿರುವುದಾಗಿ ಹೇಳಿದರು.
ಬೇರೆ ರಾಜ್ಯಗಳಿಂದ ಅನಧಿಕೃತವಾಗಿ ಲಾಟರಿ ಟಿಕೆಟ್‌ಗಳನ್ನು ಜಿಲ್ಲೆಗೆ ತಂದು ಮಾರಾಟ ಮಾಡಲಾಗುತ್ತಿದೆ. ಜನಸಾಮಾನ್ಯರಲ್ಲಿ ಆರ್ಥಿಕ ನಷ್ಟ ಮತ್ತು ಕೌಟುಂಬಿಕ ಕಲಹ ಉಂಟಾಗುತ್ತಿದೆ. ಅನಧಿಕೃತ ಲಾಟರಿ ಟಿಕೆಟ್ ಮಾರಾಟ ಸಂಬಂಧ ಈ ವರ್ಷದಲ್ಲೇ ನಾಲ್ಕು ಪ್ರಕರಣಗಳು ದಾಖಲಾಗಿವೆ ಮತ್ತು ವಿಶೇಷವಾಗಿ ಕಿರುಗಾವಲು ಪ್ರದೇಶದಲ್ಲಿ ಹೆಚ್ಚು ದೂರುಗಳು ಬಂದಿವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಲಾಟರಿ ಮಾರಾಟದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಈ ಸಮಸ್ಯೆಯನ್ನು ತಡೆಯುವ ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟ ಜಿಲ್ಲಾಧಿಕಾರಿ, ಇದಕ್ಕಾಗಿ ಗ್ರಾಮ ಪಂಚಾಯಿತಿ, ಸ್ತ್ರೀ ಶಕ್ತಿ ಸಂಘ, ಸ್ವಸಹಾಯ ಸಂಘಗಳು, ಮತ್ತು ಶಾಲಾ ಮಕ್ಕಳು ಜಾಥಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರಲ್ಲಿ ಲಾಟರಿಯ ಹಾನಿಕರ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕೆಂದು ಸೂಚಿಸಿದರು.
ಅನಧಿಕೃತ ಲಾಟರಿ ಮಾರಾಟಗಾರರು ಹಾಗೂ ಲಾಟರಿ ಟಿಕೆಟ್ ಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ಅವರು ನೀಡಿದರು.
ಲಾಟರಿ ಟಿಕೆಟ್ ಮಾರಾಟದ ಅಕ್ರಮವನ್ನು ತಡೆಗಟ್ಟಲು ಫ್ಲೈಯಿಂಗ್ ಸ್ಕ್ವಾಡ್ ಮೂಲಕ ನಿಯಂತ್ರಣ ಕ್ರಮ ಕೈಗೊಳ್ಳಲಾಗುವುದು, ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅನುಕೂಲಕರವಾದ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಸಣ್ಣ ಉಳಿತಾಯ ಮತ್ತು ರಾಜ್ಯ ಲಾಟರಿ ಸಹಾಯಕ ನಿರ್ದೇಶಕ ಗಿರೀಶ್, ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಬಿ.ಎಸ್. ಲೋಕೇಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.



