ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣಗೊಂಡ ಕನ್ನಂಬಾಡಿ ಅಣೆಕಟ್ಟೆಯ ಐತಿಹಾಸಿಕ ಕ್ರಸ್ಟ್‌ಗೇಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅಣೆಕಟ್ಟು ನಿರ್ಮಾಣ ಆಗುವಾಗ 150 ಕ್ರೆಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿತ್ತು. ಇತ್ತೀಚೆಗೆ ಇವುಗಳನ್ನು ಬದಲಾವಣೆ ಮಾಡಲಾಗಿದೆ. ಹಳೆಯ ಗೇಟ್‌ಗಳನ್ನು ಮಾಣಿಕೇಶ್ವರಿ ಸಂಸ್ಥೆಗೆ ಕೆ.ಜಿ.ಗೆ ₹6ರಂತೆ ಮಾರಾಟ ಮಾಡಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ ಆರೋಪಿಸಿದ್ದಾರೆ.
ಈ ದಿನ.ಕಾಮ್ ಜೊತೆಗೆ ಮಾತನಾಡಿದ ಅವರು, “ಇಂತಹ ಐತಿಹಾಸಿಕ ಮಹತ್ವವುಳ್ಳ ಗೇಟ್‌ಗಳನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬುದು ದುಃಖದ ಸಂಗತಿಯಾಗಿದೆ. 150 ಗೇಟ್‌ಗಳ ಒಟ್ಟು ತೂಕ 608 ಟನ್ ಇದೆ. ಈ ಗೇಟ್‌ಗಳನ್ನು ಕೇವಲ ₹6 ಕಿಲೋ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಅತ್ಯಂತ ಕಡಿಮೆ ದರ. ಇದಕ್ಕೆ ಮಾರುಕಟ್ಟೆಯಲ್ಲಿ ಹಳೆಯ ಕಬ್ಬಿಣದ ದರವೇ ಸುಮಾರು ₹40 ಕೆ.ಜಿ. ಇದೆ. ಈ ಮಾರಾಟದಿಂದ ಸರ್ಕಾರಕ್ಕೆ ದೊಡ್ಡ ನಷ್ಟವಾಗುತ್ತದೆ” ಎಂದು ಅಸಹನೆ ವ್ಯಕ್ತಪಡಿಸಿದರು.
“ಈ ಐತಿಹಾಸಿಕ ಕ್ರಸ್ಟ್ ಗೇಟ್‌ಗಳನ್ನು ಮ್ಯೂಸಿಯಂನಲ್ಲಿ ಇರಿಸಿ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡಬೇಕು. ಕನ್ನಂಬಾಡಿ ಬೃಂದಾವನದಲ್ಲಿ ಸಾಕಷ್ಟು ಜಾಗ ಲಭ್ಯವಿದೆ. ಅಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಬಳಸಿದ ಹಳೆಯ ವಸ್ತುಗಳನ್ನು ಪ್ರದರ್ಶನಕ್ಕಾಗಿ ಇರಿಸಬೇಕು. ಇದು ನಮ್ಮ ಇತಿಹಾಸವನ್ನು ಸಂರಕ್ಷಿಸಲು ಹಾಗೂ ನಾವು ಶತಮಾನದಿಂದ ಹೆಮ್ಮೆಯಿಂದ ಬಳಸಿಕೊಂಡು ಬಂದಿರುವ ಅಣೆಕಟ್ಟಿನ ಮಹತ್ವವನ್ನು ಗುರುತಿಸಲು ಸರಿಯಾದ ನಡೆಯಾಗಿದೆ” ಎಂದು ಅಭಿಪ್ರಾಯಿಸಿದರು.
ಹೀಗಾಗಿ, ಗೇಟ್‌ಗಳನ್ನು ಮಾರಾಟ ಮಾಡಬೇಕಾದ ಅಗತ್ಯತೆ ಏನು ಎಂಬುದಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಪಷ್ಟೀಕರಣ ನೀಡಬೇಕೆಂದು ಅವರು ಒತ್ತಾಯಿಸಿದರು.
“ಈ ಗೇಟ್‌ಗಳ ಬದಲಾವಣೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಸರಕಾರವು ಬಹಿರಂಗ ಮಾಡಬೇಕು ಮತ್ತು ಈ ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು. ನಮ್ಮ ಮನವಿಗೆ ಸ್ಪಂದಿಸದಿದ್ದರೆ, ನಾವು ಹೋರಾಟವನ್ನು ತೀವ್ರಗೊಳಿಸುತ್ತೇವೆ” ಎಂದು ಎಚ್ಚರಿಸಿದರು.
ಇದಕ್ಕೆ ಸಂಬಂಧಪಟ್ಟಂತೆ ಜಲಸಂಪನ್ಮೂಲ ಇಲಾಖೆ ಹಾಗೂ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಗೇಟ್‌ಗಳನ್ನು ಮಾರಾಟ ಮಾಡದಂತೆ ಮನವಿ ಸಲ್ಲಿಸಲಾಗಿದೆ ಎಂದರು.
ಇದನ್ನು ಓದಿದ್ದೀರಾ? ಮಂಡ್ಯ | ಯುವಜನರಿಗೆ ಗಾಂಧಿ ಚಿಂತನೆಯನ್ನು ತಿಳಿಸುವ ಅಗತ್ಯವಿದೆ: ಡಾ. ಬಿ.ಸಿ. ಬಸವರಾಜು
ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಜಯಂತ್‌ರಿಗೆ ಈದಿನದಿಂದ ಕರೆ ಮಾಡಿ ಇದರ ಬಗ್ಗೆ ಮಾತಾಡಿಸಿದಾಗ, “ಹಳೆಯ ಕ್ರಸ್ಟ್ ಗೇಟನ್ನು ಮಾರಾಟ ಮಾಡುವ ಯೋಜನೆ ಇಲ್ಲ. ಹಳೆಯ ಗೇಟುಗಳನ್ನು ನಮ್ಮ ಇಲಾಖೆಯ ಸುಪರ್ದಿಯಲ್ಲಿ ಸಂರಕ್ಷಿಸಿ ಇಡಲಾಗಿದೆ. ರೈತರು ಆತಂಕ ಪಡುವ ಅಗತ್ಯ ಇಲ್ಲ” ಎಂದು ತಿಳಿಸಿದ್ದಾರೆ.
