ಪ್ರಸ್ತುತ ನಡೆಯುತ್ತಿರುವ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಸಹಕಾರ ಮಸೂದೆ ಮಂಡನೆ ಸಂದರ್ಭದಲ್ಲಿ ರಾಜ್ಯದ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಜೆಡಿಎಸ್ ಶಾಸಕ ಜಿ ಟಿ ದೇವೆಗೌಡ ವಿರುದ್ಧ ಕರ್ನಾಟಕ ಸಂವಿಧಾನ ಸೇನೆ ನೇತೃತ್ವದೊಂದಿಗೆ ಮಂಡ್ಯ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
“ಸಹಕಾರಿ ಕ್ಷೇತ್ರದಲ್ಲಿ ದಲಿತರು, ಮಹಿಳೆಯರಿಗೆ ಆದ್ಯತೆ ನೀಡುವ ಉದ್ದೇಶದಿಂದ ಜಾರಿಗೆ ತರಲು ಉದ್ದೇಶಿಸಿದ್ದ ಮಸೂದೆ ಕುರಿತು ವಿರೋಧ ವ್ಯಕ್ತಪಡಿಸಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೆಗೌಡ, ʼಸಹಕಾರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡುವ ಮೂಲಕ ಸಹಕಾರ ಕ್ಷೇತ್ರವನ್ನು ಮುಳುಗಿಸಿಬಿಡಿ, ಸರ್ವನಾಶ ಮಾಡಿಬಿಡಿʼ ಎಂದು ಹೇಳಿಕೆ ನೀಡಿರುವುದು ಅವರ ದಲಿತ ವಿರೋಧಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇದರಿಂದ ರಾಜ್ಯದ ಬಹು ಸಂಖ್ಯಾತರಾದ ದಲಿತ ವರ್ಗಕ್ಕೆ ಅಪಾರ ಮಾನಹಾನಿಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಅವರ ವಿರುದ್ಧ ಅಟ್ರಾಸಿಟಿ ಕಾಯ್ದೆ ಪ್ರಕರಣ ದಾಖಲಿಸಿಕೊಳ್ಳಬೇಕು” ಎಂದು” ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ ನಗರದಲ್ಲಿ ಹೆಚ್ಚಿದ ಬೀದಿನಾಯಿಗಳ ಹಾವಳಿ: ಸೂಕ್ತ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ
“ದಲಿತರಿಗೆ ಪ್ರಾತಿನಿಧ್ಯ ನೀಡಿದರೆ ಸಹಕಾರ ಕ್ಷೇತ್ರ ಸರ್ವನಾಶವಾಗುವುದೆ? ದಲಿತರ ಬಗ್ಗೆ ಈ ರೀತಿಯ ಕೀಳು ಮನೋಭಾವನೆಯನ್ನು ಹೊಂದಿರುವ ಮೂಲಕ ದಲಿತರನ್ನು ಅವಮಾನ ಮಾಡಿರುವ ಜಿ ಟಿ ದೇವೆಗೌಡರನ್ನು ಜೆಡಿಎಸ್ ಪಕ್ಷದ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಗಂಗರಾಜು, ನರಸಿಂಹಮೂರ್ತಿ ಎಂ ವಿ ಕೃಷ್ಣ, ಜೆ ರಾಮಯ್ಯ, ತುಳಸೀಧರ್, ನಾರಾಯಣಸ್ವಾಮಿ, ಎಲೆಚಾಕನಹಳ್ಳಿ ಸ್ವಾಮಿ, ನರಸಿಂಹರಾಜು ಸೇರಿದಂತೆ ಮತ್ತಿತರರು ಇದ್ದರು.