ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಕೇ ಬೇಕು ಎಂದು ಗಟ್ಟಿದನಿಯಲ್ಲಿ ಬೇಡಿಕೆ ಇಟ್ಟಿದ್ದ ಜನಪರ ಹೋರಾಟಗಾರರ ಬೇಡಿಕೆಗೆ ಕೊನೆಗೂ ಮಣಿದಿರುವ ಕಸಾಪ ಹಾಗೂ ಜಿಲ್ಲಾಡಳಿತವು, ರಾತ್ರಿಯ ಊಟದ ಜೊತೆಗೆ ಮೊಟ್ಟೆಯನ್ನೂ ಕೂಡ ಅಧಿಕೃತವಾಗಿ ಹಂಚಿದೆ.
ಕೊನೆಯ ದಿನವಾಗಿರುವ ಭಾನುವಾರದಂದು ಸಮಾರೋಪ ಸಮಾರಂಭ ನಡೆಯುತ್ತಿರುವ ಸಂದರ್ಭದಲ್ಲೇ ರಾತ್ರಿಯ ಊಟವನ್ನೂ ಕೂಡ ಹಂಚಲು ಆರಂಭಿಸಲಾಗಿತ್ತು. ಕ್ಯಾಟರಿಂಗ್ ವಹಿಸಿಕೊಂಡಿದ್ದವರು ರಾತ್ರಿಯ ಊಟದ ಜೊತೆಗೆ ಮೊಟ್ಟೆಯನ್ನೂ ಕೂಡ ಅಧಿಕೃತವಾಗಿ ಹಂಚಿದ್ದಾರೆ.
BREAKING NEWS
— eedina.com ಈ ದಿನ.ಕಾಮ್ (@eedinanews) December 22, 2024
ಮಂಡ್ಯದಲ್ಲಿಂದು ಕೊನೆಗೊಂಡ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಕೇ ಬೇಕು ಎಂದು ಗಟ್ಟಿದನಿಯಲ್ಲಿ ಬೇಡಿಕೆ ಇಟ್ಟಿದ್ದ ಜನಪರ ಹೋರಾಟಗಾರರ ಬೇಡಿಕೆಗೆ ಕೊನೆಗೂ ಮಣಿದಿರುವ ಕಸಾಪ ಹಾಗೂ ಜಿಲ್ಲಾಡಳಿತವು, ರಾತ್ರಿಯ ಊಟದ ಜೊತೆಗೆ ಮೊಟ್ಟೆಯನ್ನು ಅಧಿಕೃತವಾಗಿ ನೀಡಿದೆ. ಆ ಮೂಲಕ ಮಂಡ್ಯವು ಹೊಸ ಪರಂಪರೆಗೆ ನಾಂದಿ ಹಾಡಿದೆ. pic.twitter.com/Qd8aMkzGgM
ಸಮ್ಮೇಳನದ ಆಹಾರ ಸಮಿತಿಯವರ ವತಿಯಿಂದ ಸುಮಾರು 30ರಿಂದ 40 ಸಾವಿರ ಮೊಟ್ಟೆಗೆ ಆರ್ಡರ್ ಬಂದಿರುವುದಾಗಿ ಮೊಟ್ಟೆಯನ್ನು ಸರಬರಾಜು ಮಾಡಿರುವ ಹೆಸರು ಹೇಳಲಿಚ್ಛಿಸದ ಮಂಡ್ಯದ ಮೊಟ್ಟೆ ವ್ಯಾಪಾರಸ್ಥರೋರ್ವರು ಈ ದಿನ ಡಾಟ್ ಕಾಮ್‌ನ ಪ್ರತಿನಿಧಿಗೆ ಮಾಹಿತಿ ನೀಡಿದ್ದಾರೆ.

ಈವರೆಗೆ ನಡೆದಿದ್ದ 86 ಅಖಿಲ ಭಾರತ ಸಮ್ಮೇಳನದಲ್ಲಿ ಈವರೆಗೂ ಯಾವುದೇ ಮಾಂಸಾಹಾರವನ್ನು ಕನ್ನಡ ಸಾಹಿತ್ಯ ಪರಿಷತ್ ನೀಡಿರಲಿಲ್ಲ ಎಂಬುದು ಗಮನಾರ್ಹ ಸಂಗತಿ. ಮೊಟ್ಟೆಯನ್ನು ಹಂಚುವ ಮೂಲಕ ಮಂಡ್ಯದಲ್ಲಿ ಇಂದು ಸಮಾರೋಪಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹೊಸ ಪರಂಪರೆಗೆ ನಾಂದಿ ಹಾಡಿದೆ. ಮೊಟ್ಟೆಯನ್ನು ಸವಿದ ನೂರಾರು ಸಾರ್ವಜನಿಕರು ಮಂಡ್ಯದ ಜನಪರ ಸಂಘಟನೆಗಳ ಮುಖಂಡರಿಗೆ ಧನ್ಯವಾದ ಸಲ್ಲಿಸಿದ್ದಾರೆ.
‘ಮಂಡ್ಯ ಹೈಕಳ ಆಹಾರ ಕ್ರಾಂತಿ’ ಎಂಬ ಪ್ಲೆಕಾರ್ಡ್

ಸಾರ್ವಜನಿಕರಿಗೆ ಊಟ ಬಡಿಸುವವರು ಮೊಟ್ಟೆ ಬಡಿಸುತ್ತಿರುವ ಮಾಹಿತಿ ಪಡೆದ ಜನಪರ ಸಂಘಟನೆಗಳ ಕಾರ್ಯಕರ್ತರು, ಕೈಯ್ಯಲ್ಲೇ ಬರೆದಿದ್ದ ‘ಮಂಡ್ಯ ಹೈಕಳ ಆಹಾರ ಕ್ರಾಂತಿ’ ಎಂಬ ಪ್ಲೆಕಾರ್ಡ್ ಅನ್ನು ಮಾಧ್ಯಮ ಪ್ರತಿನಿಧಿಗಳರೆದುರು ಪ್ರದರ್ಶಿಸುವ ಮೂಲಕ, ತಮ್ಮ ಹೋರಾಟದಲ್ಲಿ ‘ನಾವು ಗೆದ್ದೆವು’ ಎಂಬ ಸಂತೃಪ್ತಿ ಕಂಡುಬಂತು.
ಮಧ್ಯಾಹ್ನ ಬಾಡೂಟ ಹಂಚಿದ್ದ ಜನಪರ ಸಂಘಟನೆಗಳು
ಆಹಾರದ ಅಸಮಾನತೆಯನ್ನು ಪ್ರಬಲವಾಗಿ ವಿರೋಧಿಸಿದ್ದ ಮಂಡ್ಯದ ಜನಪರ ಸಂಘಟನೆಗಳು, ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಪೊಲೀಸರ ಪ್ರಬಲ ವಿರೋಧದ ನಡುವೆಯೂ ಚಿಕನ್ ಸಾರು, ಮುದ್ದೆ ಹಾಗೂ ಮೊಟ್ಟೆಯನ್ನು ಸಾರ್ವಜನಿಕರಿಗೆ ವಿತರಿಸಿದ್ದರು. ಅಲ್ಲದೇ, ಮುಂಬರುವ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿ ಮಾಂಸಾಹಾರಕ್ಕೂ ವ್ಯವಸ್ಥೆ ಕಲ್ಪಿಸಬೇಕು. ದೇಶದ 80 ಶೇ. ಜನರ ಆಹಾರದ ಹಕ್ಕು ಅದು. ಸರ್ಕಾರಿ ಖರ್ಚಿನಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಹಾರದ ಅಸಮಾನತೆ ಇರಕೂಡದು ಎಂದು ಬಹಿರಂಗವಾಗಿಯೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಆರಂಭಗೊಂಡಿದ್ದ ‘ಬಾಡೂಟ’ ಅಭಿಯಾನ
ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿಂತೆ ಕಸಾವು, ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಈ ಮಾರ್ಗಸೂಚಿಯಲ್ಲಿ ಮಾಂಸಾಹಾರ, ಮದ್ಯಪಾನ ನಿಷೇಧ ಎಂದು ಉಲ್ಲೇಖಿಸಿತ್ತು. ಪ್ರಬಲ ವಿರೋಧದ ಬಳಿಕ ‘ಮಾಂಸಾಹಾರ’ ಪದವನ್ನು ತೆಗೆದುಹಾಕಿತ್ತು. ಅದರ ಬೆನ್ನಲ್ಲೇ, ಮಂಡ್ಯದ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಲೇಬೇಕು ಎಂಬ ಕೂಗು ಎದ್ದಿತ್ತು. ಅಲ್ಲದೇ, ಮಂಡ್ಯದ ಜನಪರ ಸಂಘಟನೆಗಳ ಮುಖಂಡರು, ಸಮ್ಮೇಳನದ ಕೊನೆಯ ದಿನ ಬಾಡೂಟ ನೀಡಬೇಕು ಎಂದು ಕಸಾಪ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಅಭಿಯಾನಕ್ಕೆ ಹಿರಿಯ ಸಾಹಿತಿ ದೇವನೂರ ಮಹಾದೇವ ಸಹಿತ ಹಲವರು ಬೆಂಬಲು ಸೂಚಿಸಿದ್ದರು.
ಬಳಿಕ, ‘ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜತೆಗೆ ಮಾಂಸಾಹಾರವನ್ನೂ ಬಡಿಸಬೇಕು’ ಎಂದು ಆಗ್ರಹಿಸುತ್ತಿದ್ದ ಪ್ರಗತಿಪರ ಸಂಘಟನೆಗಳ ಮುಖಂಡರು ಶನಿವಾರ ಸಮ್ಮೇಳನ ಸ್ಥಳದಲ್ಲಿ ಬಾಡೂಟ ಸವಿದಿದ್ದರು. ಮಧ್ಯಾಹ್ನ ‘ಬಾಡೂಟ ಬಳಗ’ದ ಕೆಲವು ಸದಸ್ಯರು ಸಮ್ಮೇಳನದ ಆಹಾರ ಕೌಂಟರ್‌ನಲ್ಲಿ ನೀಡಿದ ಅನ್ನವನ್ನು, ತಾವು ತಂದಿದ್ದ ಬೋಟಿ ಗೊಜ್ಜು, ಮೊಟ್ಟೆ ಮತ್ತು ಚಿಕನ್ ಬಿರಿಯಾನಿ ಸೇವಿಸಿ, ಅದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಈ ಮಧ್ಯೆ ತಮ್ಮ ಬೇಡಿಕೆಗೆ ಮಣೆ ನೀಡದ್ದರಿಂದ ಆಕ್ರೋಶಗೊಂಡಿದ್ದ ಸಮಾನ ಮನಸ್ಕ ಸಂಘಟನೆಯ ಮುಖಂಡರು, ಸಮ್ಮೇಳನದ ಎರಡನೇ ದಿನವಾದ ಶನಿವಾರ ಸಂಜೆ ಪ್ರಮುಖ ದ್ವಾರದ ಬಳಿಯಲ್ಲೇ ಮಾಂಸಾಹಾರ ಸೇವಿಸುವ ಮೂಲಕ ಪ್ರತಿಭಟನೆ ನಡೆಸಿದ್ದರು. ಕೊನೆಗೂ ಮಣೆ ಹಾಕಿರುವ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾಡಳಿತವು, ರಾತ್ರಿಯ ಊಟದ ಜೊತೆಗೆ ಮೊಟ್ಟೆಯನ್ನೂ ಕೂಡ ಅಧಿಕೃತವಾಗಿ ಹಂಚಿದೆ.
