ಮಂಡ್ಯದ ಕಾವೇರಿ ನಗರ ಸದ್ವಿದ್ಯಾ ಶಾಲೆಯ ಬಳಿ ಎರಡು ಕಾಡಾನೆಗಳು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಇದೇ ಆನೆಗಳು ಶ್ರೀರಂಗಪಟ್ಟಣ ತಾಲೂಕಿನ ಹಲವು ಹಳ್ಳಿಗಳಲ್ಲಿ ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡಿದ್ದವು. ಕಳೆದ ರಾತ್ರಿ ಮಂಡ್ಯ ನಗರದ ಕಲ್ಲಹಳ್ಳಿ ವಿವಿ ನಗರ ಭಾಗದಲ್ಲಿ ಅಡ್ಡಾಡಿದ್ದವು. ನಾಯಿ ಬೊಗಳುತ್ತಿರುವುದನ್ನು ಕಂಡ ಸ್ಥಳೀಯರು ಗಮನಿಸಿದಾಗ ಆನೆಗಳು ಸಂಚರಿಸುತ್ತಿರುವುದು ಬೆಳಕಿಗೆ ಬಂದಿದೆ.
ಮುಂಜಾನೆ ವೇಳೆಗೆ ಜಾಗ ಬದಲಾಯಿಸಿದ್ದ ಎರಡು ಆನೆಗಳು ಮಂಡ್ಯ, ಕಿರುಗಾವಲು ದಾರಿಯಲ್ಲಿ ಕಾವೇರಿನಗರ 2 ಹಂತದ ಸದ್ವಿದ್ಯಾ ಶಾಲೆ ಬಳಿಯ ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡಿವೆ. ಕಾರಸವಾಡಿ ಗ್ರಾಮದ ರೈತರ ಜಮೀನಿನಲ್ಲಿ ಆನೆಗಳು ನಡೆದಾಡಿರುವ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಲಾಗಿದೆ.
ರೈತರ ಜಮೀನಿಗೆ ಲಗ್ಗೆ ಇಟ್ಟು ಅಡ್ಡಾಡುತ್ತಿರುವ ಎರಡು ಆನೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಜನತೆ ನೋಡಲು ಮುಗಿಬಿದ್ದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿ ಆನೆಗಳ ಸಮೀಪ ಜನರು ಸುಳಿಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಬೀಟ್ ಫಾರೆಸ್ಟರ್ ಲೋಕೇಶ್ ಈ ದಿನ.ಕಾಮ್ ಜೊತೆ ಮಾತನಾಡಿ, “ಮಂಡ್ಯದ ಕಾವೇರಿನಗರ ಬಳಿಯಲ್ಲಿ ಪ್ರತ್ಯಕ್ಷವಾಗಿರುವ ಕಾಡಾನೆಗಳು ಚನ್ನಪಟ್ಟಣದ ಅರಣ್ಯ ಪ್ರದೇಶದಿಂದ ಆಹಾರವನ್ನರಸಿ ಮಂಡ್ಯದವರೆಗೆ ವಲಸೆ ಬಂದಿವೆ. ಪ್ರಸ್ತುತ ಎಲ್ಲ ಕಡೆ ಮಳೆಯಾಗಿ ಅಲ್ಲಿಯೇ ಆಹಾರ ಲಭ್ಯವಿದ್ದರೂ, ವಿಭಿನ್ನವಾದ ಆಹಾರವನ್ನರಸಿ ಕಾಡಾನೆಗಳು ಇಲ್ಲಿಗೆ ಬಂದಿವೆ” ಎಂದು ಮಾಹಿತಿ ನೀಡಿದರು.
“ಆನೆಗಳು ಮುತ್ತತ್ತಿ ಅರಣ್ಯ ಭಾಗದಿಂದ ಮದ್ದೂರು ಮಾರ್ಗವಾಗಿ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿಯಲ್ಲಿ ಕಳೆದ 3 ದಿನಗಳ ಹಿಂದೆ ಪ್ರತ್ಯಕ್ಷವಾಗಿದ್ದವು. ಆನಂತರ ಕಾಳೇನಹಳ್ಳಿ ಬಳಿಯ ಕಸ ವಿಲೇವಾರಿ ಘಟಕದ ಬಳಿ ಪ್ರತ್ಯಕ್ಷವಾಗಿದ್ದು. ಆನಂತರ ಇಂಡುವಾಳು- ಕಿರಗಂದೂರು ಭಾಗದಲ್ಲಿ ಕಾಣಿಸಿಕೊಂಡಿದ್ದವು. ಆನಂತರ ಕಾರಸವಾಡಿ ಮಹದೇಶ್ವರ ದೇವಾಲಯದ ಮಾರ್ಗವಾಗಿ ಕಾವೇರಿ ನಗರದ ಬಳಿಯ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ” ಎಂದರು.
ಡ್ರೋನ್ ಕ್ಯಾಮೆರಾದ ಮೂಲಕ ಆನೆಗಳ ಚಲನವಲನ ಮೇಲೆ ನಿಗಾ ಇಟ್ಟಿದ್ದು, ಅವುಗಳ ವಲಸೆ ಸಂಬಂಧಿಸಿದಂತೆ ಸುತ್ತಮುತ್ತಲ ಜನರಿಗೆ ಮುನ್ನೇಚ್ಚರಿಕೆ ನೀಡುತ್ತಿದ್ದೇವೆಂದು ಲೋಕೇಶ್ ತಿಳಿಸಿದ್ಧಾರೆ.
ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸುವುದಕ್ಕಾಗಿ ಹುಣಸೂರಿನಿಂದ 18 ಅಧಿಕಾರಿಗಳನ್ನೊಳಗೊಂಡ ಆನೆ ಕಾರ್ಯಪಡೆಯನ್ನು ಕರೆಸಿಕೊಳ್ಳಲಾಗಿದೆ. ಅದರೊಂದಿಗೆ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
