ಕೇಂದ್ರ ಸಂಘದ ವತಿಯಿಂದ ಸೆ.2ರಂದು ಕೈಗೊಂಡ ಸರ್ವಾನುಮತದ ತೀರ್ಮಾನದಂತೆ ವಿವಿಧ ಬೇಡಿಕೆಗಳು ಈಡೇರುವವರೆಗೆ ಸೆ.26ರಿಂದ ಮುಷ್ಕರ ಹಮ್ಮಿಕೊಂಡಿದ್ದೇವೆ. ಎಲ್ಲಾ ಬಗೆಯ ಮೊಬೈಲ್ ಆ್ಯಪ್ ಹಾಗೂ ವೆನ್ ಅಪ್ಲಿಕೇಷನ್, ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯವ್ಯಾಪಿ ಹಮ್ಮಿಕೊಂಡಿದ್ದೇವೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಶ್ರೀರಂಗಪಟ್ಟಣ ತಾಲೂಕು ಘಟಕದ ಅಧ್ಯಕ್ಷರಾದ ರಮೇಶ್ ತಿಳಿಸಿದರು.
ಅವರು ಶ್ರೀರಂಗಪಟ್ಟಣದಲ್ಲಿ ಸೆ.26ರ ಗುರುವಾರ ತಾಲೂಕು ಕಚೇರಿ ಮುಂದೆ ನಡೆದ ಗ್ರಾಮ ಆಡಳಿತ ಆಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೂ ತಾಂತ್ರಿಕ ಆಧಿಕಾರಿಗಳಂತೆಯೇ ವೇತನ ಶ್ರೇಣಿ ನಿಗದಿ ಮಾಡಬೇಕು. ಗ್ರಾಮ ಕಚೇರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಸಲ್ಲಿಸಬೇಕು. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಸೌಲಭ್ಯಗಳನ್ನು ಕೊಡಬೇಕು ಎಂದು ಒತ್ತಾಯಿಸಿದರು.

50 ವರ್ಷಗಳ ಹಿಂದಿನ ಕಾಲದ ಕಛೇರಿಯ ಸಿಬ್ಬಂದಿ ದ್ವಿ.ದ.ಸ/ಪ್ರ.ದ.ಸ/ ಶಿರಸ್ತೇದಾರ್‌ಳ ಹುದ್ದೆಗಳನ್ನು ಹಾಗೂ ಕ್ಷೇತ್ರಮಟ್ಟದಲ್ಲಿನ ಗ್ರಾಮ ಆಡಳಿತ ಅಧಿಕಾರಿಗಳ ವೃತ್ತಗಳನ್ನು/ ಹೋಬಳಿಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಪರಿಷ್ಕರಿಸಿ ಪುನರ್ವಿಂಗಡಣೆ ಮಾಡಿ ಹೆಚ್ಚುವರಿ ಹುದ್ದೆಗಳನ್ನು ಸೃಜಿಸಬೇಕು. ನಮ್ಮ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಜಾಬ್ ಚಾರ್ಟ್ ನಿಗದಿಪಡಿಸಿ ಪೊಲೀಸ್ ಇಲಾಖೆಯಲ್ಲಿ ಇರುವಂತೆ ನೂರಾರು ಕೆಲಸಗಳನ್ನು ನಿರ್ವಹಿಸುವ ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನೊಳಗೊಂಡಂತೆ ಎಲ್ಲಾ ನೌಕರರಿಗೆ ಒಂದು ತಿಂಗಳ ವೇತನವನ್ನು ಹೆಚ್ಚುವರಿ ಕೊಡಬೇಕು. ಬೆಳೆ ಸಮೀಕ್ಷೆ ಹಾಗೂ ಬೆಳೆ ಹಾನಿ ಪರಿಹಾರದ ಕೆಲಸವನ್ನು ಕೃಷಿ/ತೋಟಗಾರಿಗೆ ಇಲಾಖೆಗೆ ನಿರ್ವಹಿಸುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಬೇಡಿಕೆಗಳಿಗೆ ತಾಲೂಕು ಆಡಳಿತ ಸ್ಪಂದಿಸದ ಕಾರಣ ಮಂಡ್ಯ ಜಿಲ್ಲೆಯ ಎಲ್ಲ ತಾಲೂಕುಗಳ ಮುಷ್ಕರವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಮುಂದುವರಿಸಲಿದ್ದೇವೆ. ನಮ್ಮ ಈ ಮುಷ್ಕರಕ್ಕೆ ಜಿಲ್ಲೆಯ ಎಲ್ಲಾ ಕಂದಾಯ ನೌಕರ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗವಹಿಸುವ ಮೂಲಕ ಬೆಂಬಲ ನೀಡಿದ್ದಾರೆ ಎಂದರು.
ಈ ಮುಷ್ಕರದಲ್ಲಿ ಆರ್‌ಐಗಳಾದ ರೇವಣ್ಣ, ಅರಕೆರೆ ಪುಟ್ಟಸ್ವಾಮಿ, ಶೆಟ್ಟಿಹಳ್ಳಿ ಮಂಜುನಾಥ್, ಗ್ರಾಮ ಆಡಳಿತ ಅಧಿಕಾರಿಗಳಾದ ಮಹೇಂದ್ರ, ಶ್ರೀಧರ್, ಉಮೇಶ್, ಲಕ್ಕಪ್ಪ, ರಮೇಶ್, ಕತುಜ ಹೊಸಮನಿ, ಲಾವಣ್ಯ, ಪ್ರಿಯಾಂಕ, ದಿವ್ಯ ಇನ್ನೂ ಮುಂತಾದವರು ಭಾಗವಹಿಸಿದ್ದರು.
