87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರನ್ನು ಆಯ್ಕೆ ಮಾಡುವ ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ನಡೆ ಅವಿವೇಕದ ಪರಮಾವಧಿ. ಕನ್ನಡ ಸಾಹಿತ್ಯ ಪರಂಪರೆಗೆ ಶತಮಾನಗಳ ಇತಿಹಾಸ ಇದೆ. ಆ ದಿವ್ಯ ಪರಂಪರೆಯನ್ನು ಮಂಡ್ಯದ ನೆಲದಲ್ಲಿ ಮುರಿಯಲು ಇಲ್ಲಿನ ಜನ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಅಧ್ಯಕ್ಷರಿಗೆ ಸಾಹಿತ್ಯ ಸಮ್ಮೇಳನ ಹೀಗೆ ನಡೆಯಬೇಕು ಎಂದು ಕಿವಿ ಹಿಂಡಿ ಜಿಲ್ಲಾಡಳಿತ ಹೇಳಬೇಕಿದೆ ಎಂದು ಸಾಹಿತಿ ಜಗದೀಶ್ ಕೊಪ್ಪ ಕಿಡಿಕಾರಿದರು.
ಅವರು ಮಂಡ್ಯ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಲ್ಲಾ ವಲಯದ ತಜ್ಞರನ್ನು ಸಾಹಿತ್ಯ ಸಮ್ಮೇಳನದಲ್ಲಿ ಕರೆಸಿ ಸನ್ಮಾನ ಮಾಡಿ. ನಮಗೆ ಯಾವ ಅಭ್ಯಂತರವೂ ಇಲ್ಲ. ಮಂಡ್ಯದ ಮಣ್ಣಿನ ಮಕ್ಕಳಿಗೆ ತಮ್ಮದೇ ಆದ ಗುಣವಿದೆ. ಎಲ್ಲರನ್ನೂ ಸನ್ಮಾನ ಮಾಡಿ ಎಂದು ಹೇಳುತ್ತಾರೆಯೇ ಹೊರತು ಯಾರನ್ನೂ ಅವಮಾನ ಮಾಡಿ ಎಂದು ಹೇಳುವುದಿಲ್ಲ” ಎಂದು ಹೆಳಿದರು.
“ಭಾವೈಕ್ಯದ ಪರಂಪರೆಯ ನೆಲ ಮಂಡ್ಯ. ನಮ್ಮ ಬೈಲಾದಲ್ಲಿ ಇಲ್ಲ ಎಂದು ಯಾರನ್ನು ಬೇಕಾದರೂ ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಅಧ್ಯಕ್ಷರನ್ನಾಗಿ ಮಾಡಿ, ಪ್ರಮೋದ್ ಮುತಾಲಿಕರಿಂದ ಉದ್ಘಾಟಿಸಿದರೆ ನಾವು ಸಹಿಸಲು ಸಾಧ್ಯವಿಲ್ಲ” ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, “ಇದು ಕನ್ನಡ ಸಮ್ಮೇಳನ ಅಲ್ಲ, ಕನ್ನಡ ಸಾಹಿತ್ಯ ಸಮ್ಮೇಳನ. ಈ ಸಮ್ಮೇಳನ ಮೂರು ದಿನಗಳ ಕಾಲ ನಡೆಯುತ್ತದೆ. ಆ ಎಲ್ಲಾ ಗೋಷ್ಠಿಗಳಲ್ಲಿ ರಾಜಕಾರಣಿ ಇಲ್ಲವೇ ಸ್ವಾಮೀಜಿ ಮೂರು ದಿನಗಳು ಕುಳಿತು ಕೇಳಿ ಪ್ರತಿಕ್ರಿಯೆ ಮಾಡಬೇಕಾಗುತ್ತದೆ. ಇದು ಅವರಿಂದ ಸಾಧ್ಯವಿಲ್ಲ. ಆದ್ದರಿಂದ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳೇ ಅಧ್ಯಕ್ಷರಾಗಬೇಕು. ಸಾಹಿತ್ಯೇತರರನ್ನು ಸಮ್ಮೇಳನದ ಉದ್ಘಾಟನೆಗೋ ಇಲ್ಲವೇ ಸಮಾರೋಪಕ್ಕೋ ವೇದಿಕೆಗೆ ಕರೆದು ಗೌರವಿಸಲಿ. ನಾವು ಬೇಡ ಎನ್ನುವುದಿಲ್ಲ” ಎಂದರು.
ಇದನ್ನು ಓದಿದ್ದೀರಾ? ಮಂಡ್ಯ | ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಆಯ್ಕೆ ಮಾಡಿದರೆ ಉಪವಾಸ ಸತ್ಯಾಗ್ರದ ಎಚ್ಚರಿಕೆ
ವಕೀಲರಾದ ಬಿ ಟಿ ವಿಶ್ವನಾಥ್ ಮಾತನಾಡಿ, ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಏಕೆ ಮಾಡಬಾರದು ಎನ್ನುವ ಪ್ರಶ್ನೆ ಮುಂದಿನ ದಿನಗಳಲ್ಲಿ ಸಮ್ಮೇಳನದ ಸ್ವರೂಪವನ್ನು ಬದಲಾಯಿಸಿ ಬಿಡಬಹುದು. ಬಲಪಂಥೀಯ ಹಿನ್ನೆಲೆಯ ಅಧ್ಯಕ್ಷರುಗಳು ಬಂದಾಗಲೆಲ್ಲ ಏನೆಲ್ಲ ಹುಚ್ಚಾಟಗಳಾಗಿವೆ ಎಂದು ಎಲ್ಲರೂ ನೋಡಿದ್ದಾರೆ. ಹರಿಕೃಷ್ಣ ಪುನರೂರು ಅಧ್ಯಕ್ಷರಾಗಿದ್ದಾಗ ಎರಡು ವರ್ಷದ ಅಧ್ಯಕ್ಷರ ಅವಧಿಯನ್ನು ಐದು ವರ್ಷಕ್ಕೆ ಮಂಡ್ಯದಲ್ಲಿ ಕುಳಿತು ಗುಟ್ಟಾಗಿ ಹೆಚ್ಚಿಸಬೇಕು ಎಂದು ಹೊರಟಾಗ ದಾವೆ ಹಾಕಿ ತಡೆಯಾಜ್ಞೆ ತಂದಿದ್ದು ಮಂಡ್ಯದವರು. ಬೇಕಾದಂತೆ ಹಿಟ್ಲರ್ ಶಾಹಿ ನಡಾವಳಿ ತೋರಿದರೆ ಪಾಠ ಕಲಿಸುವುದು ಮಂಡ್ಯದ ಜನರಿಗೆ ಗೊತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ, ಹಿರಿಯ ಸಾಹಿತಿ ಚಿಕ್ಕಮರಳಿ ಬೋರೇಗೌಡ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಹಿರಿಯ ವಕೀಲ ಬಿ.ಟಿ.ವಿಶ್ವನಾಥ್, ಸಿಐಟಿಯುನ ಸಿ.ಕುಮಾರಿ, ಜನಶಕ್ತಿಯ ಪೂರ್ಣಿಮಾ ಇದ್ದರು.
