ಈಕೆ ಆರ್ ಪೇಟೆ ಟಿಬಿ ವೃತ್ತದಲ್ಲಿ ಕೆಲವು ದಿನಗಳ ಹಿಂದೆ ನೀಲಿ ಧ್ವಜವನ್ನು ತೆರವುಗೊಳಿಸಿ ಕೇಸರಿ ಧ್ವಜವನ್ನು ಹಾರಿಸಿದ್ದರ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಇರುವ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಮುಖಂಡರು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಹಶೀಲ್ದಾರ್ ನಿಸರ್ಗಪ್ರಿಯ ಅವರಿಗೆ ಮನವಿ ಸಲ್ಲಿಸಿದರು.
ಕೆಆರ್‌ಪೇಟೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದ ಎದುರು ಯಾವುದೇ ಅನುಮತಿ ಇಲ್ಲದೆ ದೊಡ್ಡ ಕಂಬ ನೆಟ್ಟು ಸಂಘಪರಿವಾರದ ಧ್ವಜ ಹಾರಿಸಿರುವುದನ್ನು ತೆರವುಗೊಳಿಸಬೇಕು. ತಾಲೂಕಿನಾದ್ಯಂತ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ವಿವಾದಿತ ಧ್ವಜವನ್ನು ಹಾರಿಸಲು ಅನುಮತಿ ನೀಡಬಾರದು ಹಾಗೂ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಲು ಅನುಮತಿ ಕೊಡಿ ಎಂದು ಒತ್ತಾಯಿಸಿದರು.
ಸಂಘ ಪರಿವಾರದವರು ಶಾಂತಿ ಸುವ್ಯವಸ್ಥೆಯನ್ನು ಕದಡುವ ಹುನ್ನಾರದ ಭಾಗವಾಗಿ ಧ್ವಜ ಹಾಗೂ ಕಳಸ ಪ್ರಕರಣವನ್ನು ಹುಟ್ಟು ಹಾಕಿ ವಿವಾದ ಮಾಡುತ್ತಿದ್ದಾರೆ. ಆದ್ದರಿಂದ ಇಂತಹ ಹುನ್ನಾರಗಳಿಗೆ ಅನುವು ಕೊಡದಂತೆ ತಾಲೂಕಿನಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ಬಿಜೆಪಿ ಮಿತ್ರರಾದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ತಮ್ಮ ರಾಜ್ಯಕ್ಕೆ ಗಳಿಸಿದ್ದೇನು?
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಬಸ್ತಿ ರಂಗಪ್ಪ , ಗಂಗಾಧರ್ , ಕಾರ್ತಿಕ್ , ಪುರಸಭಾ ಸದಸ್ಯರಾದ ಪ್ರೇಮ್ ಕುಮಾರ್, ಗಿರೀಶ್ , ದಸಂಸ ತಾಲೂಕು ಸಂಚಾಲಕ ರಂಗಸ್ವಾಮಿ, ಕತ್ತರಘಟ್ಟ ರಾಜೇಶ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಮಾಂಬಳ್ಳಿ ಜಯರಾಮು , ತಾಲ್ಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜು, ಭೀಮಸೇನೆ ತಾಲ್ಲೂಕು ಅಧ್ಯಕ್ಷ ಗಣೇಶ್, ದಲಿತ ಸೇನೆ ಜಿಲ್ಲಾಧ್ಯಕ್ಷ ನಾಟನಹಳ್ಳಿ ಮಂಜು, ಹರಿಹರಪುರ ನರಸಿಂಹ, ಮುದುಗೆರೆ ಮಹೇಂದ್ರ ಹಾಗೂ ಇತರರು ಹಾಜರಿದ್ದರು.
