ನಾಡಿನ ಬೇರೆ ಬೇರೆ ಲೇಖಕ-ಲೇಖಕಿಯರು ಬ್ಯಾರಿ ಭಾಷೆಯಲ್ಲಿ ಬರೆದ ಜಾನಪದ ಕತೆಗಳ ಸಂಕಲನ “ಚನ್ನನ”ದ ಇಂಗ್ಲಿಷ್ ಅನುವಾದಿತ ’The Fakir’s Daughter and other Beary Folktales”ಕೃತಿಯನ್ನು ನಗರದ ಸಂತ ಅಲೋಶಿಯಸ್ ಡೀಮ್ಡ್ ವಿವಿಯ ಅಡ್ಮಿನ್ ಬ್ಲಾಕ್‌ನ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.
ಸಂತ ಅಲೋಶಿಯಸ್ ಡೀಮ್ಡ್ ವಿವಿಯ ಉಪಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಕೃತಿಯನ್ನು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಭಾಷೆ ಮತ್ತು ಸಾಂಸ್ಕ್ರತಿಕ ಅಧ್ಯಯನ ನಿಕಾಯವು ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಸಂಸ್ಕೃತಿ ನೆಲೆನಿಲ್ಲಲು ಇಂತಹ ವೌಲಿಕ ಕೃತಿಗಳ ಪ್ರಕಟನೆಯ ಅಗತ್ಯವೂ ಇದೆ. ಇವುಗಳನ್ನು ಓದುವ ಮೂಲಕ ಸಂಸ್ಕೃತಿ – ಬದುಕಿನ ಬಗ್ಗೆ ಅರಿಯಲು ಸಾಧ್ಯವಿದೆ ಎಂದರು.
ಕೃತಿಯ ಸಂಪಾದಕ, ಪತ್ರಕರ್ತ ಹಂಝ ಮಲಾರ್ ಮಾತನಾಡಿ, ಬ್ಯಾರಿ ಕ್ಷೇತ್ರಕ್ಕೆ ಸಂಬಂಧಿಸಿ ಈವರೆಗೆ ಬ್ಯಾರಿ, ಕನ್ನಡ, ಇಂಗ್ಲಿಷ್‌ನಲ್ಲಿ 125 ಕೃತಿಗಳು ಪ್ರಕಟಗೊಂಡಿವೆ. ಆದರೆ ಬ್ಯಾರಿ ಭಾಷೆಯಲ್ಲಿ ಪ್ರಕಟಗೊಂಡ ಕೃತಿ ಇದೇ ಮೊದಲ ಬಾರಿಗೆ ಇಂಗ್ಲಿಷ್‌ಗೆ ಅನುವಾದಗೊಂಡಿದೆ. ಅದಕ್ಕಾಗಿ ಅನುವಾದಕಿ ಡಾ.ಸಿಲ್ವಿಯಾ ರೇಗೋ ಅಭಿನಂದನಾರ್ಹರು ಎಂದರು.
ವೇದಿಕೆಯಲ್ಲಿ ಹಿರಿಯ ಸಂಶೋಧಕ ರೆ.ಡಾ.ವಿಲ್ಲಿ ಡಿಸಿಲ್ವ, ಕೃತಿಯ ಅನುವಾದಕಿ, ಸಂತ ಅಲೋಶಿಯಸ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಡಾ.ಸಿಲ್ವಿಯಾ ರೇಗೋ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳನ್ನು ಡಾ.ಝೀಟ ಲೋಬೊ ಪರಿಚಯಿಸಿದರು. ಕೊಂಕಣಿ ವಿಭಾಗದ ಮುಖ್ಯಸ್ಥೆ ಪ್ರೊ.ಫ್ಲೋರಾ ಕ್ಯಾಸ್ಟಲಿನೊ ಸ್ವಾಗತಿಸಿದರು.ಕಾರ್ಯಕ್ರಮದ ಸಂಯೋಜಕ ಜೊಕ್ಕಿಂ ಪಿಂಟೊ ವಂದಿಸಿದರು.
ರೇಡಿಯೋ ಸಾರಂಗ್‌ನ ಕಾರ್ಯಕ್ರಮ ನಿರ್ವಾಹಕ ಸೈಫ್ ಕುತ್ತಾರ್ ಸಹಕರಿಸಿದರು. ಪ್ರಾಧ್ಯಾಪಕ ಸ್ಯಾಮುವೆಲ್ ಪೀಟರ್ಸ್ ಕಾರ್ಯಕ್ರಮ ನಿರೂಪಿಸಿದರು.
