ಮಂಗಳೂರಿನ ಖ್ಯಾತ ಉದ್ಯಮಿ ಮುಮ್ತಾಝ್ ಅಲಿಯವರನ್ನು ಬ್ಲ್ಯಾಕ್‌ಮೇಲ್ ಮಾಡಿ, ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಪ್ರಮುಖ ಆರೋಪಿ ಸೇರಿ ಮತ್ತೆ ಮೂವರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದಂತಾಗಿದೆ.
ಸದ್ಯ ಮೂವರು ಆರೋಪಿಗಳಾದ ಅಬ್ದುಲ್ ಸತ್ತಾರ್, ಮುಸ್ತಫಾ ಮತ್ತು ಶಾಫಿ ಎಂಬವರನ್ನು ಅ.9ರಂದು ಸಿ.ಸಿ.ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯವರು ಪತ್ತೆ ಹಚ್ಚಿದ್ದು, ಕಾವೂರು ಪೊಲೀಸ್ ಠಾಣೆಯ ತನಿಖಾಧಿಕಾರಿಯವರ ಮುಂದೆ ಹಾಜರುಪಡಿಸಿರುವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಒಳಗೊಂಡಿರುವ ಆರೋಪಿಗಳಾದ ರೆಹಮತ್ ಮತ್ತು ಶೋಯಬ್ ಎಂಬವರನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದ್ದು, ಈ ನಡುವೆಯೇ ಈ ಮೂವರನ್ನು ಪತ್ತೆ ಹಚ್ಚಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ರೆಹಮತ್ ಮತ್ತು ಶೋಯಬ್ ಎಂಬವರನ್ನು ನ್ಯಾಯಾಲಯವು ಅಕ್ಟೋಬರ್ 17ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇದನ್ನು ಓದಿದ್ದೀರಾ? ಕುಂದಾಪುರ | ನಕಲಿ ಚಿನ್ನ ನೀಡಿ, ಅಸಲಿ ಚಿನ್ನದೊಂದಿಗೆ ಪರಾರಿಯಾದ ಮಹಿಳೆಯರು!
ಆರೋಪಿಗಳನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ ಈ ಕಾರ್ಯಾಚರಣೆಯನ್ನು ಡಿ.ಸಿ.ಪಿಗಳಾದ ಸಿದ್ದಾರ್ಥ್ ಗೋಯಲ್, ಮತ್ತು ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಸಿ.ಸಿ.ಬಿ ಘಟಕದ ಸಹಾಯಕ ಪೊಲೀಸ್ ಆಯುಕ್ತರಾದ ಮನೋಜ್ ಕುಮಾರ ನಾಯ್ಕ ಅವರ ನೇತೃತ್ವದಲ್ಲಿ ಸಿ.ಸಿ.ಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್, ಉಪ ನಿರೀಕ್ಷಕರಾದ ಶರಣಪ್ಪ ಭಂಡಾರಿ ಹಾಗೂ ಸಿ.ಸಿ.ಬಿ ಘಟಕದ ಸಿಬ್ಬಂದಿಯವರು ಈ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.
