ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಭಾಗದ ದೇವಸ್ಥಾನವೊಂದರ ಬಳಿ ಪ್ರಚಾರ ನಡೆಸುವ ವಿಚಾರವಾಗಿ ಆರಂಭವಾದ ವಾಗ್ವಾದವು, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹೊಯ್ ಕೈ ನಡೆಸುವ ಹಂತಕ್ಕೆ ತಲುಪಿದ ಘಟನೆ ಇಂದು(ಗುರುವಾರ) ನಡೆದಿದೆ.
ನಗರದ ಉರ್ವ ಚಿಲಿಂಬಿ ಸಾಯಿ ಬಾಬಾ ಮಂದಿರದ ಬಳಿ ನಡೆದ ಘಟನೆ ನಡೆದಿದ್ದು, ದೇವಸ್ಥಾನದ ಬಳಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದ ಬಿಜೆಪಿ ಕಾರ್ಯಕರ್ತರ ತಂಡವು ಪ್ರಚಾರ ನಡೆಸುತ್ತಿತ್ತು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ಎತ್ತಿದ್ದಾರೆ. ಪ್ರಚಾರದ ವಿಚಾರವಾಗಿ ಆರಂಭವಾದ ವಾಗ್ವಾದವು, ಹೊಯ್ ಕೈ ನಡೆಸುವ ಹಂತಕ್ಕೆ ತಲುಪಿತು. ವಿಷಯ ತಿಳಿದ ಕೂಡಲೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನೇತೃತ್ವದ ಕಾಂಗ್ರೆಸ್ ಮುಖಂಡರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ವಾಗ್ವಾದವು ವಿಪರೀತಕ್ಕೆ ತಲುಪುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಪೊಲೀಸರು, ಸ್ಥಳದಲ್ಲಿದ್ದವರನ್ನು ಸಮಾಧಾನ ಪಡಿಸಿದರು ಎಂದು ತಿಳಿದುಬಂದಿದೆ.
ರಾಮನವಮಿಯ ಹಿನ್ನೆಲೆಯಲ್ಲಿ ಚಿಲಿಂಬಿಯ ಸಾಯಿ ಮಂದಿರದ ಬಳಿ ಭಾರೀ ಸಂಖ್ಯೆಯ ಭಕ್ತರು ಸೇರಿದ್ದರು. ಈ ವೇಳೆ ಬಿಜೆಪಿಗರು ಇಲ್ಲೇ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದರು. ಮಂದಿರದ ಬಳಿ ಪ್ರಚಾರ ನಡೆಸುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದಾಗ ವಾಗ್ವಾದ, ಮಾತಿನ ಚಕಮಕಿ, ಹೊಯ್‌ಕೈ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಣಕ್ಕೆ ತಂದಿರುವುದಾಗಿ ವರದಿಯಾಗಿದೆ.
