ಪ್ರವಾಸಿಗರ ನೆಚ್ಚಿನ ತಾಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯದ ವಾಮಂಜೂರಿನಲ್ಲಿರುವ ಪಿಲಿಕುಳ ನಿಸರ್ಗಧಾಮದಲ್ಲಿ ಬುಧವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಎಲೆಕ್ಟ್ರಿಕ್ ವಾಹನಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಪಿಲಿಕುಳ ನಿಸರ್ಗಧಾಮದ ಟಿಕೆಟ್ ಕೌಂಟರ್ ಬಳಿ ಅಗ್ನಿ ಅವಘಡ ಸಂಭವಿಸಿದ್ದು, ಎರಡು ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿಯಾಗಿದೆ.
ಇಲ್ಲಿನ ವರ್ಕ್ ಶಾಪ್ ನಲ್ಲಿ ಚಾರ್ಜ್ ಮಾಡಲೆಂದು ಹಾಕಿದ್ದ ಒಂದು ಎಲೆಕ್ಟ್ರಿಕ್ ವಾಹನದ ಬ್ಯಾಟರಿಯಲ್ಲಿ ಬೆಂಕಿಯ ಕಿಡಿ ಉಂಟಾಗಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಟ್ಟು ಎರಡು ವಾಹನಗಳು ಸಂಪೂರ್ಣ ಭಸ್ಮವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಪಾರ್ಕಿಂಗ್ ಸ್ಥಳದಲ್ಲಿ ಹತ್ತಕ್ಕೂ ಅಧಿಕ ಬಗ್ಗಿ ಎಲೆಕ್ಟ್ರಿಕ್ ವಾಹನಗಳಿದ್ದವು. ಕೂಡಲೇ ತೆರವುಗೊಳಿಸಿದ್ದರಿಂದ, ಅದೃಷ್ಟವಶಾತ್ ಭಾರೀ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ತಿಳಿದುಬಂದಿದೆ.
ಇನ್ನು ಎರಡು ವಾಹನಗಳು ಹೊತ್ತಿ ಉರಿಯುತ್ತಿದ್ದರೂ ಕದ್ರಿ ಅಗ್ನಿ ಶಾಮಕ ದಳ ಕ್ಲಪ್ತ ಸಮಯಕ್ಕೆ ಸ್ಥಳಕ್ಕೆ ಆಗಮಿಸಿರಲಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪಿಲಿಕುಳದ ಸಿಬ್ಬಂದಿಗಳೇ ಸೇರಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.
ಅಂತಿಮವಾಗಿ ಅರ್ಧ ಗಂಟೆ ಬಳಿಕ ಕದ್ರಿ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದೆ. ಅಲ್ಲದೆ ಘಟನಾ ಸ್ಥಳಕ್ಕೆ ಕಾವೂರು ಠಾಣಾ, ಮಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮರು ನವೀಕರಿಸದ ಮಾನಸ ಅಮ್ಯೂಸ್ಮೆಂಟ್ ಪಾರ್ಕ್ ಲೈಸೆನ್ಸ್?
ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರಿಗಾಗಿ ಕಾರ್ಯಾಚರಿಸುತ್ತಿರುವ ಮಾನಸ ಅಮ್ಯೂಸ್ಮೆಂಟ್ ಪಾರ್ಕ್ ನಡೆಸುತ್ತಿರುವವರಿಗೇ ಬಗ್ಗಿ ಎಲೆಕ್ಟ್ರಿಕ್ ವಾಹನದ ಗುತ್ತಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಉಡುಪಿ | ನಗರಸಭೆ ಪೌರಾಯುಕ್ತ ರಾಯಪ್ಪಗೆ ಬೀಳ್ಕೊಡುಗೆ
ಈ ನಡುವೆ ಮಾನಸ ಅಮ್ಯೂಸ್ಮೆಂಟ್ ಪಾರ್ಕ್ ಪರವಾನಗಿ ಇನ್ನೂ ಕೂಡ ಮರು ನವೀಕರಣಗೊಂಡಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿದೆ. ಒಂದು ವೇಳೆ ಮಾನಸ ಅಮ್ಯೂಸ್ಮೆಂಟ್ ಪಾರ್ಕಿನಲ್ಲಿ ಅವಘಡ ಸಂಭವಿಸಿದರೆ ಯಾರು ಹೊಣೆ? ಅವರಿಗೇ ಮತ್ತೆ ಎಲೆಕ್ಟ್ರಿಕ್ ವಾಹನದ ಗುತ್ತಿಗೆ ನೀಡಿರುವುದು ಯಾಕೆ ಎಂಬ ಪ್ರಶ್ನೆ ಕೂಡ ಎದ್ದಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
