ಆರು ಕೋಟಿ ಅನುದಾನದಲ್ಲಿ ಬ್ಯಾರಿ ಭವನ ನಿರ್ಮಾಣವಾಗಲಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ಪುರಭವನದ ಮರ್ಹೂಂ ಎಂ.ಜಿ.ರಹೀಂ ವೇದಿಕೆಯಲ್ಲಿ ಶುಕ್ರವಾರ ಸಂಜೆ ನಡೆದ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ತಾನು ನೀಡಿದ ಸಂದೇಶದಲ್ಲಿ ಅವರು ತಿಳಿಸಿದರು. ಕಾರಣಾಂತರದಿಂದ ಪಾಲ್ಗೊಳ್ಳಲಾಗದ ಅವರು ಕಳುಹಿಸಿಕೊಟ್ಟ ಸಂದೇಶವನ್ನು ಕಾರ್ಯಕ್ರಮದಲ್ಲಿ ವಾಚಿಸಲಾಯಿತು.
“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾರಿ ಭವನ ನಿರ್ಮಿಸಬೇಕು ಎಂಬ ಬೇಡಿಕೆಯು ಬ್ಯಾರಿ ಸಾಹಿತ್ಯ ಅಕಾಡಮಿಯು ಸ್ಥಾಪನೆಗೊಂಡಾಗಲೇ ಇತ್ತು. ಅದಕ್ಕಾಗಿ ಈ ಹಿಂದೆ ಒಂದೆರೆಡು ಸ್ಥಳಗಳನ್ನೂ ಗುರುತಿಸಲಾಗಿತ್ತು. ಕಾರಣಾಂತರದಿಂದ ಅದನ್ನು ಕೈ ಬಿಡಲಾಗಿದೆ. ಇದೀಗ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಟೆಕಲ್-ಅಸೈಗೋಳಿ ಮಧ್ಯದ ಪ್ರಮುಖ ರಸ್ತೆಯ ಪಕ್ಕದಲ್ಲೇ ಬ್ಯಾರಿ ಭವನ ನಿರ್ಮಾಣಕ್ಕೆ ಜಮೀನು ಗುರುತಿಸಲಾಗಿದ್ದು, ಸರ್ಕಾರದಿಂದ 6 ಕೋ.ರೂ. ಅನುದಾನವೂ ಬಿಡುಗಡೆಗೊಂಡಿದೆ. ಬ್ಯಾರಿ ಭವನ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು” ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

“ಮಂಗಳೂರು ಆಕಾಶವಾಣಿಯಲ್ಲಿ ಬ್ಯಾರಿ ಭಾಷೆಯ ಕಾರ್ಯಕ್ರಮ ಪ್ರಸಾರವಾಗಬೇಕು, ಶಾಲಾ ಪಠ್ಯಪುಸ್ತಕದಲ್ಲಿ ಬ್ಯಾರಿ ಭಾಷೆಯನ್ನು ಅಳವಡಿಸಬೇಕು, ಶಾಲೆಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯೂ ಇದೆ. ಅಕಾಡಮಿಯು ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿಸಿದರೆ ತಾನು ಎಲ್ಲಾ ರೀತಿಯಲ್ಲೂ ಸಹಕರಿಸಲು ಬದ್ಧನಿದ್ದೇನೆ” ಎಂದು ಸ್ಪೀಕರ್ ಖಾದರ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ 2022ನೇ ಸಾಲಿನ ಗೌರವ ಪ್ರಶಸ್ತಿಯನ್ನು ಹಂಝತುಲ್ಲಾ ವೈ. ಕುವೇಂಡ ಬೆಂಗಳೂರು, ಮರಿಯಮ್ ಇಸ್ಮಾಈಲ್ ಉಳ್ಳಾಲ, ಎಂ.ಜಿ. ಶಾಹುಲ್ ಹಮೀದ್ ಗುರುಪುರ ಹಾಗೂ 2023ನೇ ಸಾಲಿನ ಗೌರವ ಪ್ರಶಸ್ತಿಯನ್ನು ಹಾಜಿ ಟಿ.ಎ. ಆಲಿಯಬ್ಬ ಜೋಕಟ್ಟೆ, ಮುಹಮ್ಮದ್ ಶರೀಫ್ ನಿರ್ಮುಂಜೆ, ಅಶ್ರಫ್ ಅಪೋಲೊ ಕಲ್ಲಡ್ಕ ಅವರಿಗೆ ‘ಪದ್ಮಶ್ರೀ’ ಹರೇಕಳ ಹಾಜಬ್ಬ ಪ್ರಶಸ್ತಿ ಪ್ರದಾನಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಬೆಲ್ಕಿರಿ ಮಾಸಿಕ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅಭಿನಂದನಾ ಭಾಷಣ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಹೆಚ್., “ಬ್ಯಾರಿ ಅಕಾಡಮಿಯು ಬ್ಯಾರಿ ಅಧ್ಯಯನ ಪೀಠದ ಸಹಕಾರದೊಂದಿಗೆ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿವೆ. ಬ್ಯಾರಿಗೆ ಸಂಬಂಧಿಸಿದಂತೆ ಪಿಎಚ್‌ಡಿ ಮಾಡುವವರಿಗೆ ಫೆಲೋಶಿಪ್ ನೀಡಲಾಗುವುದು. ಬ್ಯಾರಿ ಭಾಷಾ ಸಂಶೋಧನೆ, ಅಧ್ಯಯನ, ದಾಖಲೀಕರಣ, ಬ್ಯಾರಿ ಭವನದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆಗೆ ತಜ್ಞರ ಸಮಿತಿಯನ್ನೂ ರಚಿಸಲಾಗಿದೆ” ಎಂದರು.
ಮುಖ್ಯ ಅತಿಥಿಗಳಾಗಿ ತುಳು ಅಕಾಡಮಿಯ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಕೊಂಕಣಿ ಅಕಾಡಮಿಯ ಅಧ್ಯಕ್ಷ ಸ್ಪ್ಯಾನಿ ಜೋಕಿಂ ಅಲ್ವಾರಿಸ್, ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷರಾದ ರಹೀಂ ಉಚ್ಚಿಲ್, ಬಿ.ಎ. ಮುಹಮ್ಮದ್ ಹನೀಫ್, ಕರಂಬಾರ್ ಮುಹಮ್ಮದ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಇದರ ಅಧ್ಯಕ್ಷ ಹಾಜಿ ಎಸ್. ಎಂ. ರಶೀದ್, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಿ.ಎಂ. ಅಸ್ಲಮ್, ಮೂಡಿಗೆರೆ ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೂಡಿಗೆರೆ, ಮೈಸೂರಿನ ದಿ ಬ್ಯಾರೀಸ್ ವೆಲ್ವೇರ್ ಅಸೋಸಿಯೇಶನ್‌ನ ಅಧ್ಯಕ್ಷ ಯು.ಕೆ. ಹಮೀದ್ ಹಾಜಿ, ಅಖಿಲ ಭಾರತ ಬ್ಯಾರಿ ಮಹಾಸಭಾದ ಅಧ್ಯಕ್ಷ ಅಬ್ದುಲ್ ಝ್ ಬೈಕಂಪಾಡಿ, ಅಖಿಲ ಭಾರತ ಬ್ಯಾರಿಷತ್‌ನ ಗೌರವಾಧ್ಯಕ್ಷ ಯೂಸುಫ್ ವಕ್ತಾರ್, ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞ ಪಾರೆ, ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹುಸೈನ್ ಪಳ್ಳ ಉಪಸ್ಥಿತರಿದ್ದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾದ ಶಮೀರಾ ಜಹಾನ್, ಹಮೀದ್ ಹಸನ್ ಮಾಡೂರು, ಸಾರಾ ಅಲಿ ಪರ್ಲಡ್ಕ ಅಬೂಬಕರ್ ಅನಿಲಕಟ್ಟೆ, ತಾಜುದ್ದೀನ್ ಅಮ್ಮುಂಜೆ ಸನ್ಮಾನ ಪತ್ರಗಳನ್ನು ವಾಚಿಸಿದರು. ಸದಸ್ಯರಾದ ಅಬ್ದುಲ್ ಶರೀಫ್ ಸ್ವಾಗತಿಸಿದರು. ಬಿ.ಎಸ್. ಮುಹಮ್ಮದ್ ವಂದಿಸಿದರು. ಯು.ಎಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
