“ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣನಾಗಿ, ಬೀದಿಯಲ್ಲಿ ಸುತ್ತಿ ಬೆಲ್ಲ ಮಾರುತ್ತಿದ್ದರೂ, ಕಠಿಣ ಪರಿಶ್ರಮದಿಂದ ದುಡಿದು, ಕಂಪನಿಯಲ್ಲಿ ಸುರಕ್ಷೆ, ಗುಣಮಟ್ಟ ಮತ್ತು ಬದ್ಧತೆಗೆ ಆದ್ಯತೆ ನೀಡಿದ್ದರಿಂದ ಇಂದು ಏಳು ಸಾವಿರ ಮಂದಿಗೆ ಉದ್ಯೋಗ ಕೊಡಲು ಸಾಧ್ಯವಾಗಿದೆ” ಎಂದು ಸೌದಿ ಅರೇಬಿಯಾದ ಅಲ್ ಮುಝೈನ್ ಕಂಪನಿಯ ಸಿಇಓ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ಹೇಳಿದರು.
ಮಂಗಳೂರು ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಮಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿಯಾಗಿ ಭಾಗವಹಿಸಿ, ಅವರು ತಮ್ಮ ಜೀವನಾನುಭವವನ್ನು ತೆರೆದಿಟ್ಟರು.
“ತನ್ನ ಅಜ್ಜ ಗುತ್ತಿನ ಮನೆಯವರಾಗಿದ್ದರೂ, ಭೂ ಸುಧಾರಣೆ ಕಾಯಿದೆಯಿಂದ ಇದ್ದ ಜಮೀನು ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ತಂದೆಗೆ ಮಗ ಕಲಿಯಬೇಕೆಂಬ ಹಂಬಲವಿತ್ತಾದರೂ, ಎಸ್‌ಎಸ್‌ಎಲ್‌ಸಿಯಲ್ಲಿ ಶಾಲೆ ಬಿಟ್ಟೆ. ನಂತರ ಅಚ್ಚು ಬೆಲ್ಲ ಮಾರಾಟ, ವೆಲ್ಡಿಂಗ್, ಎನ್‌ಎಂಪಿಟಿಯಲ್ಲಿ ಡ್ರೆಜ್ಜಿಂಗ್ ಕೆಲಸ ಮಾಡಿದೆ. 1975ರಲ್ಲಿ ಹಲವಾರು ಕನಸುಗಳೊಂದಿಗೆ ವಿಮಾನವೇರಿ ಸೌದಿ ಅರೇಬಿಯಾಗೆ ತೆರಳಿದ್ದೆ” ಎಂದರು.
“ಸೌದಿ ಅರೇಬಿಯಾದಲ್ಲಿ ಮಿಕ್ಸಿಂಗ್ ಮಾಡಿದ ಸಿಮೆಂಟನ್ನು 20 ಮಹಡಿಗಳ ಕಟ್ಟಡಕ್ಕೆ ಹೊತ್ತುಕೊಂಡು ಹೋಗಬೇಕಿತ್ತು. ರಾತ್ರಿ ಬೇರೊಂದು ಕೆಲಸ. 1979ರಲ್ಲಿ ಡ್ರೆಜ್ಜಿಂಗ್ ಕಂಪನಿಯಲ್ಲಿ ಮೆರೈನ್ ಸರ್ವೇ ಕೆಲಸ ಸೇರಿದೆ. 1985ರಲ್ಲಿ ಪೆಟ್ರೋ ಕೆಮಿಕಲ್ ಕಂಪನಿಯಲ್ಲಿ ಕೆಲಸ. ನೆದರ್‌ಲ್ಯಾಂಡ್‌ನ ಶೂನ್ಯ ಆಮ್ಲಜನಕ ಪ್ರದೇಶದಲ್ಲಿ ತರಬೇತಿಯು ಬದುಕು ಬದಲಿಸಿತು. ಕಂಪನಿಯಲ್ಲಿ 30 ವರ್ಷ ಬದ್ಧತೆಯಿಂದ ಕೆಲಸ ಮಾಡಿದೆ” ಎಂದು ಅವರು ಹೇಳಿದರು.
“2010ರಲ್ಲಿ ದುಬಾಯಿಯಲ್ಲಿ ನಾಲ್ಕು ಮಂದಿ ಸೇರಿ ನಮ್ಮದೇ ಮುಝೈನ್ ಸಂಸ್ಥೆ ಆರಂಭಿಸಿದೆವು. ಕಾರ್ಮಿಕರೆನ್ನುವ ಬದಲಿಗೆ ಪಾಲುದಾರರು ಎಂಬ ನಿಟ್ಟಿನಲ್ಲಿ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿದ್ದರಿಂದ ಕಂಪನಿ ಕೆಲವೇ ಸಮಯದಲ್ಲಿ ಬಹಷ್ಟು ಉನ್ನತ ಸಾಧನೆ ಮಾಡಿದೆ. ಏಳು ಸಾವಿರ ಮಂದಿ ಕಾರ್ಮಿಕರಲ್ಲಿ ಹೆಚ್ಚಿನವರು ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಜಿಲ್ಲೆಯವರೇ ಇದ್ದಾರೆ” ಎಂದರು.

“ಕಷ್ಟದ ದಿನಗಳು ಸಂಯಮ ಕಲಿಸಿವೆ. ಬಡತನವೇ ಸಾಧನೆಗೆ ಸೂರ್ತಿಯಾಗಲಿದೆ. ಸಂಪತ್ತು ಕೈಯಲ್ಲಿದ್ದಾಗ ದಾನ ಮಾಡಿದರೆ ಕೆಟ್ಟವರಾಗುವುದಿಲ್ಲ. ಮೂರು ದಿನದ ಬದುಕಲ್ಲಿ ಎಲ್ಲರೊಡನೆ ಆತ್ಮೀಯವಾಗಿ ಕಳೆಯಬೇಕು. ನಮ್ಮದು ಸುಶಿಕ್ಷಿತರ ಜಿಲ್ಲೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಸೌಹಾರ್ದದಿಂದ ಬದುಕಬೇಕು. ಯಾವುದೇ ಟೀಕೆಗಳಿಗೆ ಪ್ರತಿಕ್ರಿಯೆ ನೀಡಬಾರದು. ಧನಾತ್ಮಕವಾಗಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಸಮಾಜಮುಖಿ ಕಾರ್ಯಗಳೇ ನನ್ನ ಆರೋಗ್ಯದ ಗುಟ್ಟು” ಎಂದು ಝಕರಿಯಾ ಜೋಕಟ್ಟೆ ಹೇಳಿದರು.
“ಕರಾವಳಿಯಲ್ಲಿ ಬಹಳಷ್ಟು ಪ್ರತಿಭೆಗಳಿದ್ದರೂ, ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ ನೀಡದ ಹಿನ್ನೆಲೆಯಲ್ಲಿ ಕೆಲಸ ಸಿಗಲು ಕಷ್ಟವಾಗುತ್ತಿದೆ. ಶಾಲೆ, ಕಾಲೇಜುಗಳಲ್ಲಿ ಪಾಠದ ಜತೆ ಪ್ರಾಯೋಗಿಕ ಅನುಭವಕ್ಕೂ ಆದ್ಯತೆ ಕೊಡಬೇಕು. ನಮ್ಮ ಕಂಪನಿಗೆ ನಾನೇ ಅಭ್ಯರ್ಥಿಗಳ ಆಯ್ಕೆ ಸಂದರ್ಶನ ಮಾಡುತ್ತೇನೆ” ಎಂದು ಉದ್ಯಮಿ ಝಕರಿಯಾ ತಿಳಿಸಿದರು.
“ಉದ್ಯೋಗಾಕಾಂಕ್ಷಿಗಳಿಗಾಗಿ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ತೆರೆಯುವ ಯೋಜನೆ ನಮ್ಮ ಮುಂದಿದೆ. ಸೌದಿ ಅರೇಬಿಯಾದಲ್ಲಿ ಯೆನೆಪೋಯ ಸಂಸ್ಥೆ ಸಹಯೋಗಲ್ಲಿ ಶಿಕ್ಷಣ ಸಂಸ್ಥೆ, ಫುಟ್‌ಬಾಲ್ ಅಕಾಡೆಮಿ, ಲಂಡನ್‌ನಲ್ಲಿ ವೈದ್ಯಕೀಯ ಸಂಸ್ಥೆ ಆರಂಭಿಸಲಿದ್ದೇವೆ. ಜಿಲ್ಲೆಯಲ್ಲಿ ಬಡವರ ಶಿಕ್ಷಣ, ಆರೋಗ್ಯಕ್ಕಾಗಿ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿಶೇಷ ಆರ್ಥಿಕ ವಲಯದ ನಿವೃತ್ತ ಸಾರ್ವಜನಿಕ ಸಂಪರ್ಕ ಅಕಾರಿ ರಾಮಚಂದ್ರ ಭಂಡಾರ್ಕರ್ ಮಾತನಾಡಿ, “ಮನುಷ್ಯ ಎಷ್ಟೇ ಸಾಧನೆ ಮಾಡಿದರೂ ಮಾನವೀಯತೆ ಮರೆಯಬಾರದು. ಪರೋಪಕಾರಿ ಭಾವನೆ ಬೆಳೆಸಿಕೊಂಡು, ಅಶಕ್ತರಿಗೆ ನೆರವಾಗಬೇಕು” ಎಂದರು.
ಇದನ್ನು ಓದಿದ್ದೀರಾ? ತುಮಕೂರು | ಜೀನ್ಸ್ ಧರಿಸಿದ್ದ ವಿದ್ಯಾರ್ಥಿನಿಯರಿಗೆ ಸಿಇಟಿ ಪರೀಕ್ಷೆಗೆ ನಿರ್ಬಂಧ; ಜನಿವಾರದ ಪರ ದನಿ ಎತ್ತಿದವರು ಈಗೆಲ್ಲಿ?
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿದರು. ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.