ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಇತ್ತೀಚಿನ ದಿನಗಳಲ್ಲಿ ತೀವ್ರ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮಂಡಳಿಯ ಕಾರ್ಮಿಕರಿಗೆ ಸರಿಯಾದ ಯೋಜನಾ ಪ್ರಯೋಜನಗಳ ಲಭಿಸುವಿಕೆಯ ಕೊರತೆ, ನೋಂದಣಿ ಸಮಸ್ಯೆ, ಹಾಗೂ ಪರಿಹಾರ ಸೌಲಭ್ಯಗಳ ವಿಳಂಬ ಇತ್ಯಾದಿ ಅಂಶಗಳಿಂದ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ಬಗ್ಗೆ ಕನ್ನಡ ಜಿಲ್ಲೆಯ ಕಾರ್ಮಿಕ ಆಯುಕ್ತರವರಿಗೆ ಭಾರತೀಯ ಮಜ್ದೂರು ಸಂಘ ದಕ್ಷಿಣ ಕನ್ನಡ ಘಟಕದ ನಿಯೋಗದ ಮೂಲಕ ಮನವಿ ಸಲ್ಲಿಸಲಾಯಿತು.
ಈ ನಿಯೋಗದ ನೇತೃತ್ವವನ್ನು ಭಾರತೀಯ ಮಜ್ದೂರು ಸಂಘ ದಕ್ಷಿಣ ಕನ್ನಡ ಘಟಕದ ಜಿಲ್ಲಾಧ್ಯಕ್ಷರೂ, ವಕೀಲರೂ ಆದ ಅನಿಲ್ ಕುಮಾರ್ ಬೆಳ್ತಂಗಡಿ ವಹಿಸಿದ್ದರು.
ಮನವಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಬೇಕು, ಲೇಬರ್ ಮಂಡಳಿಯಿಂದ ದೊರೆಯಬೇಕಾದ ಸೌಲಭ್ಯಗಳನ್ನು ಸ್ಪಷ್ಟವಾಗಿ ಹಾಗೂ ವೇಗವಾಗಿ ಕಾರ್ಮಿಕರಿಗೆ ತಲುಪಿಸಬೇಕು, ಕಾರ್ಮಿಕ ನೋಂದಣಿಗೆ ಸಂಬಂಧಿಸಿದಂತೆ ಸುಲಭ ಪ್ರಕ್ರಿಯೆ ರೂಪಿಸಬೇಕು, ಜಿಲ್ಲೆಯಲ್ಲಿ ಬಡ ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ ಮತ್ತು ವಸತಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮುಖ್ಯತೆ ನೀಡಬೇಕು, ಹಳೆ ಫಲಾನುಭವಿಗಳಿಗೆ ಬಾಕಿಯಿರುವ ಧನ ಸಹಾಯ, ಪಿಂಚಣಿ ಮತ್ತು ವೈದ್ಯಕೀಯ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಕಾರ್ಮಿಕ ಆಯುಕ್ತರವರು ಈ ಮನವಿಗೆ ಗಂಭೀರವಾಗಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಮಂಗಳೂರು | ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ಕರಾವಳಿ ಮರಳು ನೀತಿ ಜಾರಿಗೆ ಬರಲಿ: ವಸಂತ ಆಚಾರಿ
ಭಾರತೀಯ ಮಜ್ದೂರು ಸಂಘದ ನಿಯೋಗದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಜಿಲ್ಲಾ ಕೋಶಾಧಿಕಾರಿ ಉದಯ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್, ಜಿಲ್ಲಾ ಉಪಾಧ್ಯಕ್ಷ ನಾರಾಯಣ ಪೂಜಾರಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಉದಯ ಬಿ ಕೆ, ಸುಳ್ಯ ತಾಲೂಕಿ ಅಧ್ಯಕ್ಷ ಮಧುಸೂಧನ್, ಕಡಬ ಅಧ್ಯಕ್ಷರಾದ ಚಂದ್ರ ಶೇಖರ, ಪುತ್ತೂರು ತಾಲೂಕು ಅಧ್ಯಕ್ಷ ಪುರಂದರ ರೈ, ಮೂಡಬಿದ್ರೆ ತಾಲೂಕು ಘಟಕದ ಅಧ್ಯಕ್ಷರಾದ ರಾಜೇಶ್ ಸುವರ್ಣ ಸೇರಿದಂತೆ ಇತರ ಪ್ರಮುಖರು ಭಾಗವಹಿಸಿದ್ದರು.
