ಮುಡಾ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸೋಮವಾರ (ಆ.19) ರಾಜ್ಯಾದ್ಯಂತ ಪ್ರತಿಭಟನೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯ ವೇಳೆ ನಗರದ ಖಾಸಗಿ ಸಿಟಿ ಬಸ್‌ಗೆ ಕಲ್ಲು ಎಸೆದಿರುವ ಘಟನೆ ನಡೆದಿದೆ.
ಕಾಂಗ್ರೆಸ್ ಪ್ರತಿಭಟನೆಯ ವೇಳೆ ಮಂಗಳೂರಿನ ಲಾಲ್ ಭಾಗ್ ಜಂಕ್ಷನ್ ಬಳಿ ಘಟನೆ ನಡೆದಿದೆ. ಜೋಕಟ್ಟೆಯಿಂದ ಸ್ಟೇಟ್‌ಬ್ಯಾಂಕ್‌ಗೆ ತೆರಳುತ್ತಿದ್ದ ವೇಳೆ ಬಿಜೆಪಿ ಮುಖಂಡನ ಮಾಲೀಕತ್ವದ ಬಸ್‌ಗೆ ಕಲ್ಲು ತೂರಾಟ ನಡೆದಿದೆ.

ಪಾದಯಾತ್ರೆ ಬಳಿಕ ಸಭೆ ಮುಗಿಯುತ್ತಲೇ ರಸ್ತೆಗಿಳಿದ ಕಾರ್ಯಕರ್ತರು ಅಲ್ಲೇ ಸಂಚರಿಸುತ್ತಿದ್ದ ಖಾಸಗಿ ಸಿಟಿ 2ಸಿ ನಂಬರ್‍ನ ಬಸ್‌ಗೆ ಕಲ್ಲು ಎಸೆದಿದ್ದಾರೆ. ಪರಿಣಾಮ ಬಸ್‌ನ ಎದುರಿನ ಗಾಜು ಸಂಪೂರ್ಣ ಪುಡಿಯಾಗಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಜೋಕಟ್ಟೆಯಿಂದ ಸ್ಟೇಟ್‌ಬ್ಯಾಂಕ್‌ಗೆ ತೆರಳುತ್ತಿದ್ದ 2ಸಿ ನಂಬರ್‌ನ ಬಸ್ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಜೋಕಟ್ಟೆಯ ನೌಫಾಲ್ ಎಂಬವರಿಗೆ ಸೇರಿದ್ದು ಎಂದು ತಿಳಿದುಬಂದಿದ್ದು. ಈತ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಲ್ಲು ತೂರಾಟ ಆಗಿರುವ ಬಗ್ಗೆ ಪ್ರಕರಣ ದಾಖಲಾಗಿರುವ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನು ಓದಿದ್ದೀರಾ? ಬೆಂಗಳೂರು | ಡ್ರಾಪ್ ಕೊಡುವ ನೆಪದಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ; ಆರೋಪಿಯ ಬಂಧನ
ಕಾಂಗ್ರೆಸ್‌ನ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಪ್ರಕಾಶ್ ರಾಥೋಡ್, ರಮಾನಾಥ ರೈ ಮೊದಲಾದವರು ಭಾಗಿಯಾಗಿದ್ದರು. ಮಂಗಳೂರಿನ ನಾರಾಯಣ ಗುರು ವೃತ್ತದಿಂದ ನಡೆಸಲಾದ ಕಾಲ್ನಡಿಗೆ ಜಾಥಾದಲ್ಲಿ ಮಂಗಳೂರು ನಗರ ಸೇರಿ ಪುತ್ತೂರು, ಸುಳ್ಯ, ಬೆಳ್ತಂಗಡಿಯ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.
