ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ರಿಕ್ಷಾವೊಂದಕ್ಕೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯೋರ್ವಳು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ದೇರಳಕಟ್ಟೆ ಸಮೀಪದ ಬೆಳ್ಮ ಗ್ರಾಮದ ಬಡಕಬೈಲ್‌ನ ಕಲ್ಪಾದೆ ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ವಿದ್ಯಾರ್ಥಿನಿ ಆಯಿಷಾ ವಹಿಬಾ ಮೃತಪಟ್ಟಾಕೆ ಎಂದು ತಿಳಿದುಬಂದಿದೆ.
ಬಡಕಬೈಲು ನಿವಾಸಿ ಮಹಮ್ಮದ್ ಬಿ ಮೋನು ಮತ್ತು ಮುನ್ಝಿಯಾ ದಂಪತಿ ಪುತ್ರಿಯಾಗಿರುವ 4ನೇ ತರಗತಿಯ ವಿದ್ಯಾರ್ಥಿನಿ ಆಯಿಷಾ ವಹಿಬಾ (11 ), ದೇರಳಕಟ್ಟೆ ನೇತಾಜಿ ಶಾಲೆಯಲ್ಲಿ ಕಲಿಯುತ್ತಿದ್ದಳು.
ದೇರಳಕಟ್ಟೆ ನೇತಾಜಿ ಶಾಲೆಗೆ ಮಕ್ಕಳನ್ನು ಕರೆತರುವ ಆಟೋ ರಿಕ್ಷಾಗೆ ಕಲ್ಪಾದೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗದಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾ ಪಲ್ಟಿಯಾಗಿ ಆಯಿಷಾ ವಹಿಬಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾಳೆ.
ಇದನ್ನು ಓದಿದ್ದೀರಾ? ಮಂಗಳೂರು | ಕಲ್ಲಿದ್ದಲು ಬಳಸುತ್ತಿರುವ ಉಳ್ಳಾಲದ ಫಿಶ್‌ಮಿಲ್ ಮುಚ್ಚದಿದ್ದಲ್ಲಿ ಹೋರಾಟ : ಬಿ.ಕೆ ಇಮ್ತಿಯಾಝ್
ರಿಕ್ಷಾದಲ್ಲಿದ್ದ ಇತರ ಮೂವರು ವಿದ್ಯಾರ್ಥಿಗಳು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಅಪಘಾತದಲ್ಲಿ ಮೃತಪಟ್ಟ ವಿಚಾರ ತಿಳಿದ ದೇರಳಕಟ್ಟೆ ನೇತಾಜಿ ಶಾಲೆಯ ಮುಖ್ಯ ಶಿಕ್ಷಕಿ ಶಾಲೆಗೆ ರಜೆ ಘೋಷಿಸಿದ್ದಾರೆ.
