ಕಳೆದ ವಾರ ಮಂಗಳೂರು ತಾಲೂಕಿನ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟೀಲು ಕೊಂಡೆ ಮೂಲದ ಸರಕಾರಿ ಆಸ್ಪತ್ರೆಯ ಹಿಂಭಾಗದ ನೀರಿನ ಟ್ಯಾಂಕ್ ಬಳಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ಸ್ಥಳೀಯ ನಿವಾಸಿ ತಾರಾನಾಥ ಕೊಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ತಾರಾನಾಥ(39)ನನ್ನು ಅತನ ಅಕ್ಕ ದೇವಕಿ (42) ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಆರೋಪಿ ಮಹಿಳೆಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ತಾರಾನಾಥ ಪ್ರತಿದಿನವೂ ಮದ್ಯ ಸೇವನೆ ಮಾಡಿ ಬಂದು ಮನೆಯವರಿಗೆ ಮತ್ತು ತನಗೆ ಕಿರುಕುಳ ನೀಡುತ್ತಿದ್ದು, ಇದೇ ಕಾರಣಕ್ಕಾಗಿ ತಾರಾನಾಥನ ಕುತ್ತಿಗೆಗೆ ಕೇಬಲ್ ವಯರ್ ಬಿಗಿದು ಕೊಲೆ ಮಾಡಿರುವುದಾಗಿ ದೇವಕಿ ಪೊಲೀಸರ ತನಿಖೆಯ ವೇಳೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ‘ವಕ್ಫ್ ಆಸ್ತಿ ಅಲ್ಲಾಹನದ್ದು, ಮರಳಿ ಪಡೆಯಲು ಕಾಂಪ್ರಮೈಸ್ ಬೇಡ’ ಎಂದಿದ್ದ ಬೊಮ್ಮಾಯಿ; ಇಲ್ಲಿದೆ ದಾಖಲೆ
ತಾರಾನಾಥ ಅವರು ಕಟೀಲು ಪರಿಸರದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ಕಳೆದ ರವಿವಾರ ಬೆಳಗ್ಗೆ ಕೊಂಡೆಮೂಲ ನೀರಿನ ಟ್ಯಾಂಕ್ ಬಳಿ ಕುತ್ತಿಗೆಯಲ್ಲಿ ಬಟ್ಟೆ ಒಣಗಿಸುವ ಕೇಬಲ್ ವಯರ್ ಹಾಕಿ, ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಆತನ ಅಕ್ಕನಿಂದಲೇ ಕೊಲೆಯಾಗಿರುವುದನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
