ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರತ್ ತಂಙಲ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.
ಕೇರಳದ ಎಟ್ಟಿಕುಳಂನಲ್ಲಿರುವ ಮನೆಯಲ್ಲಿ ಅವರು ಅನಾರೋಗ್ಯಕ್ಕೀಡಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ. ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಉಳ್ಳಾಲ ತಂಙಳ್ ಎಂದೇ ಪ್ರಸಿದ್ಧರಾಗಿದ್ದ ತಾಜುಲ್ ಉಲಮಾ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅವರ ಪುತ್ರರೂ ಆಗಿರುವ ಅಸೈಯ್ಯದ್ ಫಝಲ್ ಕೋಯಮ್ಮ ಕೂರತ್ ತಂಙಲ್ ಪ್ರಸ್ತುತ ಉಳ್ಳಾಲದ ಖಾಝಿಯಾಗಿದ್ದರು.
ಇಂದು ಮಧ್ಯಾಹ್ನ ಉಳ್ಳಾಲದ ಸೈಯದ್ ಮದನಿ ದರ್ಗಾ ವಠಾರದಲ್ಲಿ ಅವರು ಭಾಗವಹಿಸುವ ಕಾರ್ಯಕ್ರಮವು ನಿಗದಿಯಾಗಿತ್ತು. ಸೈಯದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳ ನೂತನ ಹಾಸ್ಟೆಲ್ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದರು.
ಕೇರಳದ ಮನೆಯಿಂದ ಮಂಗಳೂರಿಗೆ ಹೊರಡಲು ತಯಾರಿ ನಡೆಸುತ್ತಿದ್ದ ವೇಳೆ ಫಝಲ್ ಕೋಯಮ್ಮ ತಂಙಲ್ ಹೃದಯಸ್ತಂಭನಕ್ಕೀಡಾಗಿದ್ದಾರೆ. ಕೂಡಲೇ ಮನೆಯಲ್ಲಿದ್ದವರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷಿಸಿದ ವೈದ್ಯರು ನಿಧನರಾಗಿರುವುದನ್ನು ದೃಢಪಡಿಸಿರುವುದಾಗಿ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ರೋಬೊಟ್ ಆತ್ಮಹತ್ಯೆ | ‘ಸು ಅಂದ್ರೆ ಸುಕ್ರುಂಡೆ’ ಅನ್ನುವ ನಮ್ಮ ಡೀಯರ್ ಮೀಡಿಯಾ!
ಸಂಜೆ 7ಕ್ಕೆ ಉಳ್ಳಾಲ ದರ್ಗಾ ವಠಾರದಲ್ಲಿ ಅಂತಿಮ ದರ್ಶನ
ಸದ್ಯ ಕೂರತ್ ತಂಙಳ್‌ರವರ ಜನಾಝ(ಮೃತದೇಹ) ಎಟ್ಟಿಕ್ಕುಳಂನಲ್ಲಿರುವ ಸ್ವಂತ ಮನೆಯಲ್ಲಿದ್ದು, ಸಾಯಂಕಾಲ ಏಳು ಗಂಟೆಗೆ ಉಳ್ಳಾಲ ದರ್ಗಾಕ್ಕೆ ತಲುಪಲಿದೆ. ಅಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ರಾತ್ರಿ 9 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೂರತ್ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ. ಶೈಖುನಾ ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಅಂತಿಮ ನಮಾಝ್ ನಡೆಯಲಿದೆ ಎಂದು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಜಮಾಅತ್ ಅಧ್ಯಕ್ಷರಾದ ಹನೀಫ್ ಹಾಜಿ ಮಾಹಿತಿ ನೀಡಿದ್ದಾರೆ.
ಸಂತಾಪ
ಖಾಝಿ ಕೂರತ್ ತಂಙಳ್ ನಿಧನಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
