ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಸ್ಪೀಕರ್ ಯು ಟಿ ಖಾದರ್ ಆಪ್ತನೊಬ್ಬ ಮಾತಿಗೆ ಅಡ್ಡಿಪಡಿಸುವ ಪ್ರಯತ್ನ ಮಾಡಿದ ಪ್ರಸಂಗ ನಡೆಯಿತು.
ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆಯುತ್ತಿದ್ದ ಪತ್ರಿಕಾಗೋಷ್ಠಿ ವೇಳೆ ಈ ಬೆಳವಣಿಗೆ ನಡೆದಿದೆ. ಸಚಿವರ ಹಿಂದೆಯೇ ನಿಂತಿದ್ದ ಕಾಂಗ್ರೆಸ್ ಮುಖಂಡ ಉಸ್ಮಾನ್ ಕಲ್ಲಾಪು, ಸಚಿವರು ಪ್ರಚೋದನಕಾರಿ ಭಾಷಣಗಳಿಗೆ ಬ್ರೇಕ್ ಹಾಕುವ ಬಗ್ಗೆ ಮಾತಾಡುತ್ತಿದ್ದ ವೇಳೆ ಕಾಂಗ್ರೆಸ್ ಮುಸ್ಲಿಂ ಮುಖಂಡ, ಸಚಿವರ ವಿರುದ್ಧ ಸಿಡಿದೆದ್ದಿದ್ದಾರೆ.
ಸಚಿವರು ಮಾತಾಡುತ್ತಿದ್ದ ವೇಳೆ ಮುಸ್ಲಿಂ ಮುಖಂಡ ಮಧ್ಯೆ ಪ್ರವೇಶ ಮಾಡಿ, “ಮೊನ್ನೆ ನಡೆದ ಅಬ್ದುಲ್ ರಹ್ಮಾನ್ ಕೊಲೆ ಕೂಡ ಪ್ರಚೋದನಕಾರಿ ಭಾಷಣದಿಂದಲೇ ಆಗಿದೆ ಎಂದು ಹೇಳಿದ್ದಾರೆ. ಮಾತಿನ ಮಧ್ಯೆ ಬಂದ ಮುಸ್ಲಿಂ ಮುಖಂಡನ ವಿರುದ್ಧ ದಿನೇಶ್ ಗುಂಡೂರಾವ್ ಕೋಪಗೊಂಡು, “ಇದು ಪತ್ರಿಕಾಗೋಷ್ಠಿ, ಸುಮ್ನಿರಿ’ ಎಂದು ತಿಳಿಸಿದರು.
ಮತ್ತೊಮ್ಮೆ ಅಡಚಣೆಯಿಂದ ಸಿಡಿಮಿಡಿಗೊಂಡ ಸಚಿವರು, ತಾಳ್ಮೆ ಕಳೆದುಕೊಂಡ ದಿನೇಶ್ ಗುಂಡೂರಾವ್ ಯುವಕನನ್ನು ಅಲ್ಲಿಂದ ಹೊರಗೆ ಹಾಕಿ ಎಂದು ಹೇಳುತ್ತಾರೆ. ಅವರ ಪಕ್ಕದಲ್ಲಿ ಕುಳಿತಿದ್ದ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಯುವಕನಿಗೆ ಸಮಾಧಾನ ಹೇಳುತ್ತಿರುವುದು ಕಂಡು ಬಂತು.
ಇದನ್ನು ಓದಿದ್ದೀರಾ? ಮಂಗಳೂರು | ತನ್ನ ವರ್ಗಾವಣೆ ಆದೇಶಕ್ಕೂ ಮುನ್ನ ಏಳು ಪೊಲೀಸರನ್ನು ಬೇರೆ ಠಾಣೆಗಳಿಗೆ ವರ್ಗಾಯಿಸಿದ್ದ ಕಮಿಷನರ್ ಅಗರ್ವಾಲ್!
ಹೊರಗಡೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಉಸ್ಮಾನ್ ಕಲ್ಲಾಪು, “ಕೋಮು ಪ್ರಚೋದನೆಯಿಂದಲೇ ಅಮಾಯಕರ ಹತ್ಯೆಗಳು ಆಗಿವೆ,. ಯಾರೇ ಆಗಲಿ ಕ್ರಮ ಕೈಗೊಳ್ಳಿ. ಈ ವಿಚಾರದಲ್ಲಿ ಸರ್ಕಾರದ ಮೃದು ಧೋರಣೆ ಯಾಕೆ” ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಪಕ್ಷಕ್ಕೆ ರಾಜೀನಾಮೆ ಕೊಡುವವರ ಬಗ್ಗೆ ನಾನು ಮಾತಾಡಲ್ಲ: ಗುಂಡೂರಾವ್
ಅಬ್ದುಲ್ ರಹ್ಮಾನ್ ಹತ್ಯೆ ಖಂಡಿಸಿ ಕಾಂಗ್ರೆಸ್ ಮುಸ್ಲಿಂ ಮುಖಂಡರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ದಿನೇಶ್ ಗುಂಡೂರಾವ್, “ನನ್ನ ಬಳಿ ಯಾವ ರಾಜೀನಾಮೆಯ ವಿಚಾರವೂ ಬರಲಿಲ್ಲ. ಪಕ್ಷಕ್ಕೆ ರಾಜೀನಾಮೆ ಕೊಡೋದು, ಬಿಡುವುದರ ಬಗ್ಗೆ ನಾನು ಮಾತನಾಡಲ್ಲ” ಎಂದಿದ್ದಾರೆ.
“ನಾನು ಸರಕಾರದ ಪ್ರತಿನಿಧಿಯಾಗಿ ಇಲ್ಲಿ ಬಂದಿದ್ದೇನೆ. ರಾಜೀನಾಮೆ ವಿಚಾರ ನನಗೆ ನೇರವಾಗಿ ಬರುವುದಿಲ್ಲ. ಸರಕಾರ ಎಂದ ಮೇಲೆ ನಮಗೆ ಎಲ್ಲ ಧರ್ಮ, ಪಕ್ಷ ಸಂಘಟನೆಯವರೂ ಒಂದೇ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ನನ್ನ ಜವಾಬ್ದಾರಿ. ದ್ವೇಷ ಹರಡುವವರಿಗೆ ಸುಲಭವಾಗಿ ಬೇಲ್ ಸಿಗದಂತಹ ಕಾನೂನು ತರುತ್ತೇವೆ. ಗಲಭೆ, ಹತ್ಯೆಗಳನ್ನ ನಿಲ್ಲಿಸುವುದು ನನ್ನ ಮುಖ್ಯ ಕೆಲಸ. ಘಟನೆ ನಡೆದಾಗ ನಾವು ಯಾವಾಗ ಬರಬೇಕು ಬರಬಾರದು ಅನ್ನುವುದನ್ನು ಸಮಯ ನೋಡಿ ತೀರ್ಮಾನ ಮಾಡುತ್ತೇವೆ. ಜನರ ಆಕ್ರೋಶವನ್ನು ಕೆಲವರು ರಾಜಕೀಯ ಬಂಡವಾಳ ಮಾಡುತ್ತಿದ್ದಾರೆ” ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
