ಮಂಗಳೂರು | ಕೊರಗಜ್ಜನ ಆಶೀರ್ವಾದ ಪಡೆಯುತ್ತಲೇ ಶ್ರೀಮಂತರು ಕೊರಗರನ್ನು ತುಳಿಯುತ್ತಿದ್ದಾರೆ: ಬೃಂದಾ ಕಾರಟ್

Date:

Advertisements

“ಶ್ರೀಮಂತರು ಕೊರಗಜ್ಜನ ಮುಂದೆ ಅಡ್ಡಬಿದ್ದು ಆಶೀರ್ವಾದ ಪಡೆಯುತ್ತಲೇ ನಿಜ ಜೀವನದಲ್ಲಿ ಕೊರಗರನ್ನು ತುಳಿಯುತ್ತಿದ್ದಾರೆ” ಎಂದು ಸಿಪಿಎಂ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆಕ್ರೋಶ ಹೊರಹಾಕಿದರು.

ಕರ್ನಾಟಕ ಆದಿವಾಸಿ ಸಮುದಾಯಗಳ ಸಮನ್ವಯ ಸಮಿತಿಯ ವತಿಯಿಂದ ಕರಾವಳಿಯ ಆದಿವಾಸಿ ಸಮುದಾಯದ ಕೊರಗರ ಆಕ್ರೋಶ ರ‍್ಯಾಲಿ ಮತ್ತು ಬಹಿರಂಗ ಸಭೆಯು ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು.

ಈ ಸಮಾವೇಶಕ್ಕೆ ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಬೃಂದಾ ಕಾರಟ್ ಮಾತನಾಡಿ, “ಕೊರಗ ಸಮುದಾಯಕ್ಕೆ ಸೇರಿದ ದೈವ ಕೊರಗಜ್ಜನನ್ನು ಶ್ರೀಮಂತರು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶ್ರೀಮಂತರ ಮನೆಗಳ ಗೋಡೆಗಳಲ್ಲಿ ಕೊರಗಜ್ಜನ ಚಿತ್ರಗಳಿವೆ. ಆದರೆ ಕೊರಗರ ಮನೆಗಳಿಗೆ ಗೋಡೆಗಳೇ ಇಲ್ಲ, ಕೊರಗರು ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದಾರೆ” ಎಂದು ಹೇಳಿದರು.

Advertisements
WhatsApp Image 2025 01 24 at 10.58.51 AM

“ಶ್ರೀಮಂತರು ಕೊರಗಜ್ಜನ ಮುಂದೆ ಅಡ್ಡಬಿದ್ದು ಆಶೀರ್ವಾದ ಪಡೆಯುತ್ತಲೇ ನಿಜ ಜೀವನದಲ್ಲಿ ಕೊರಗರನ್ನು ತುಳಿಯುತ್ತಿದ್ದಾರೆ. ಅವರು ಕೊರಗಜ್ಜನನ್ನು ಆರಾಧಿಸುತ್ತಾ ಕೊರಗರನ್ನು ಜಾನುವಾರುಗಳ ರೀತಿ ನಡೆಸಿಕೊಳ್ಳುತ್ತಿದ್ದಾರೆ, ದೇವರ ಮಕ್ಕಳಾದ ಕೊರಗರು ಅಪೌಷ್ಠಿಕತೆ ಮತ್ತು ಹಸಿವಿನಿಂದ ನರಳುತ್ತಿದ್ದಾರೆ” ಎಂದು ಕಿಡಿಕಾರಿದರು.

ಶತಶತಮಾನಗಳಿಂದ ಕೊರಗರ ಮೇಲೆ ದಬ್ಬಾಳಿಕೆ, ಶೋಷಣೆ ನಡೆಯುತ್ತಾ ಬಂದಿದೆ ಎಂದ ಅವರು, ಭೂಮಾಲೀಕರು, ಪಾಳೇಗಾರರು ಮತ್ತು ಬಂಡವಾಳಶಾಹಿಗಳು ಕೊರಗ ಸಮುದಾಯದ ಜನರ ಮೇಲೆ ಶೋಷಣೆ ಮಾಡುತ್ತಿದ್ದಾರೆ. ಕೊರಗ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದರು.

ಕೆಲ ವರ್ಷಗಳ ಹಿಂದೆ ಕರ್ನಾಟಕದಲ್ಲಿ 20 ಸಾವಿರದಷ್ಟಿದ್ದ ಕೊರಗರ ಜನಸಂಖ್ಯೆ ಈಗ 16 ಸಾವಿರಕ್ಕೆ ಕುಸಿದಿದೆ. ಕೊರಗ ಸಮುದಾಯದಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಕೊರಗರ ಜನಸಂಖ್ಯೆ 12 ಸಾವಿರಕ್ಕೆ ಕುಸಿಯುವ ಸಾಧ್ಯತೆ ಇದೆ. ನಮ್ಮ ಜೊತೆ ಬದುಕಿದ್ದ ಒಂದು ಸಮುದಾಯ ನಮ್ಮ ಕಣ್ಣೆದುರಲ್ಲೇ ನಶಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

WhatsApp Image 2025 01 24 at 10.58.36 AM

ಕೊರಗ ಸಮುದಾಯದಲ್ಲಿ ಅಪೌಷ್ಟಿಕತೆ ಮತ್ತು ಅನಾರೋಗ್ಯ ಬಾಧಿಸುತ್ತಿದ್ದು, ಕೊರಗ ಮತ್ತು ಆದಿವಾಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತೊಡೆದು ಹಾಕಲು ಸರ್ಕಾರ ನಿರ್ದಿಷ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕೇರಳದ ಪಿಣರಾಯಿ ಸರ್ಕಾರ ಕೊರಗ ಸಮುದಾಯವನ್ನು ಗುರುತಿಸಿ ಅವರ ರಕ್ಷಣೆ ಮತ್ತು ಅಭಿವೃದ್ಧಿಗೆ ಯೋಜನೆ ರೂಪಿಸಿದಂತೆ ಕರ್ನಾಟಕ ಸರ್ಕಾರ ಕೂಡ ಕೊರಗ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಬೃಂದಾ ಕಾರಟ್, ಆದಿವಾಸಿಗಳ ಹಕ್ಕುಗಳಿಗಾಗಿ ಎಡರಂಗದ ಸಂಸದರು ಸಂಸತ್‌ನಲ್ಲಿ ಧ್ವನಿ ಎತ್ತಲಿದ್ದಾರೆ ಎಂದು ಭರವಸೆ ನೀಡಿದರು.

ಹೋರಾಟವೇ ನಮ್ಮ ಅಸ್ತ್ರ. ನಮ್ಮ ಸಾಂವಿಧಾನಿಕ ಹಕ್ಕು, ಅವಕಾಶಗಳಿಗಾಗಿ ಒಗ್ಗಟ್ಟಾಗಿ ಹೋರಾಡುತ್ತೇವೆ. ಆ ಅಸ್ತ್ರವನ್ನು ನಮ್ಮಿಂದ ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾ‌ರ್ ಅವರು ಆಂತರಿಕ ಜಗಳದಲ್ಲಿ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದ ಬೃಂದಾ ಕಾರಟ್, ನಾವು ಶೋಷಣೆ ದಬ್ಬಾಳಿಕೆ ವಿರುದ್ಧ ಕುಸ್ತಿ ಮಾಡುತ್ತಿದ್ದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಕುರ್ಚಿಗಾಗಿ ಕುಸ್ತಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

koraga

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಬರೆದ “ಕೊರಗರು ತುಳುನಾಡಿನ ಮಾತೃ ಸಮುದಾಯ” ಪುಸ್ತಕವನ್ನು ಬೃಂದಾ ಕಾರಟ್ ಬಿಡುಗಡೆಗೊಳಿಸಿದರು.

“ಕೊರಗರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಮಹಮ್ಮದ್ ಪೀರ್ 30 ವರ್ಷಗಳ ಹಿಂದೆ ಸಲ್ಲಿಸಿದ್ದ ವರದಿಯತ್ತ ಯಾವ ಸರ್ಕಾರವೂ ಗಮನಹರಿಸಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವಾದರೂ ಈ ವರದಿಯ ಶಿಫಾರಸು ಜಾರಿ ಮಾಡಲಿ’ ಎಂದು ಕೊರಗ ಸಮುದಾಯದ ಮುಖಂಡ ಕರಿಯ ಕೆ. ಆಗ್ರಹಿಸಿದರು.

ಸಮಿತಿಯ ರಾಜ್ಯ ಘಟಕದ ಸಹಸಂಚಾಲಕ ಶ್ರೀಧರ ನಾಡ ‘ಹಿಂದಿನ ಸರ್ಕಾರ ಕೊರಗರ ಅಭಿವೃದ್ಧಿಗೆ ಮೀಸಲಿಟ್ಟ ಬಜೆಟ್‌ ಅನುದಾನವನ್ನು ಕಡಿತಗೊಳಿಸಿತ್ತು. ಅನುದಾನ ಹೆಚ್ಚಿಸಲು ಈಗಿನ ಸರ್ಕಾರವೂ ಕ್ರಮವಹಿಸಿಲ್ಲ’ ಎಂದು ಕಿಡಿಕಾರಿದರು.

WhatsApp Image 2025 01 24 at 10.58.55 AM

ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, “ಕಂಬಳ ನಡೆಸುವವರು ಕಟ್ಟುವ ಮುಂಡಾಸು ಹಾಗೂ ಕೈಯಲ್ಲಿ ಹಿಡಿಯುವ ಬೆತ್ತ ದೌರ್ಜನ್ಯದ ಸಂಕೇತ. ಈಚೆಗೆ ಕಂಬಳದ ಉದ್ಘಾಟನೆಗೆ ವಿಮಾನದಲ್ಲಿ ಜಿಲ್ಲೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಂಬಳ ಆಯೋಜಕರು ಮುಂಡಾಸು ಕಟ್ಟಿ, ಕೈಯಲ್ಲಿ ಬೆತ್ತ ನೀಡಿದ್ದಾರೆ. ಆಧುನಿಕ ಕಾಲಘಟ್ಟದ ಆರ್ಥಿಕ ನೀತಿಗಳು ಬೆತ್ತದೇಟು ಬಾರಿಸಲು ಸಜ್ಜಾಗಿವೆ. ಮುಂಡಾಸು ಮತ್ತು ಬೆತ್ತದ ಬೆದರಿಕೆಗೆ ಸಡ್ಡು ಹೊಡೆದು ತಲೆ ಎತ್ತಿ ನಿಲ್ಲುವ ಸಂಕಲ್ಪವನ್ನು ಕೊರಗರು ಮಾಡಿದ್ದಾರೆ” ಎಂದರು.

korga

ಆದಿವಾಸಿ ಅಧಿಕಾರ್‌ ರಾಷ್ಟ್ರೀಯ ಮಂಚ್‌ನ ರಾಜ್ಯ ಘಟಕದ ಸಂಚಾಲಕ ಎಸ್‌.ವೈ.ಗುರುಶಾಂತ್‌ ಮಾತನಾಡಿದರು. ಸಮಿತಿಯ ರಾಜ್ಯ ಸಹಸಂಚಾಲಕ ಕೃಷ್ಣಪ್ಪ ಕೊಂಚಾಡಿ, ಶೇಖರ ವಾಮಂಜೂರು, ಕೃಷ್ಣಾ ಇನ್ನಾ, ರಶ್ಮಿ, ವಿಕಾಸ್‌, ರವೀಂದ್ರ ವಾಮಂಜೂರು, ತುಳಸಿ ಬೆಳ್ಮಣ್ಣು, ಶಶಿಧರ್‌ ಕೆರೆಕಾಡು, ನಿತೇಶ್‌ ಗುಂಡಾವುಪದವು, ಜಯ ಮಧ್ಯ, ಕೇಶವ ಕೆರೆಕಾರು, ಅಭಿಜಿತ್, ಕಿರಣ್ ಕತ್ತಲ ಸಾರ್‌, ಭಾಗೇಶ್‌ ಮೆಣ್ಣ ಬೆಟ್ಟು, ಆಶಿಕ್‌ ಮೆಣ್ಣಬೆಟ್ಟು, ಪ್ರಶಾಂತ್ ಕಂಕನಾಡಿ, ಪದ್ಮನಾಭ ಮಧ್ಯ ಹಾಗೂ ಜ್ಯೋತಿ ಮಧ್ಯ ಭಾಗವಹಿಸಿದ್ದರು.

ಗಮನ ಸೆಳೆದ ಕೊರಗರ ರ‍್ಯಾಲಿ

ನಗರದ ಬಾವುಟಗುಡ್ಡೆಯಿಂದ ಗಡಿಯಾರ ಗೋಪುರದವರೆಗೆ ನಡೆದ ಆದಿವಾಸಿ ಆಕ್ರೋಶ ರ್‍ಯಾಲಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಆಸುಪಾಸಿನ ಜಿಲ್ಲೆಗಳ ಕೊರಗ ಸಮುದಾಯದವರು ಭಾಗವಹಿಸಿದ್ದರು.

WhatsApp Image 2025 01 24 at 10.58.52 AM

ಕೈಯಲ್ಲಿ ತಮ್ಮ ಮನೆಯ ಪೋಟೋಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕುವ ಮೂಲಕ ಯಾವ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದು ತೋರಿಸಿದರು. ಟರ್ಪಾಲು ಹೊದಿಸಿದ, ಬೀಳುವ ಸ್ಥಿತಿಯಲ್ಲಿದ್ದ ಮನೆಯ ಚಿತ್ರಗಳು ಅವರ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟವು. ಕೆಲವರು ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಭಾಗವಹಿಸಿದ್ದರು. ಡೊಳ್ಳು, ಈಟಿ ಭರ್ಜಿ, ಬೆತ್ತದಿಂದ ತಯಾರಿಸುವ ಕೃಷಿ ಹಾಗೂ ಗೃಹೋಪಯೋಗಿ ಪರಿಕರಗಳನ್ನೂ ರ‍್ಯಾಲಿಯಲ್ಲಿ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

WhatsApp Image 2025 01 24 at 10.58.53 AM
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X