ಕಳೆದ ಒಂದು ವಾರದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಮುಸ್ಲಿಂ ಯುವಕನ ಗುಂಪು ಹತ್ಯೆ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಸೇರಿದಂತೆ ಇನ್ನಿತರ ಗಲಾಟೆಗಳು ನಡೆದ ಹಿನ್ನೆಲೆಯಲ್ಲಿ ಕೊನೆಗೂ ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಪರಮೇಶ್ವರ್ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರನ್ನು ಮುಸ್ಲಿಂ ಮುಖಂಡರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿದ್ದ ಗೃಹ ಸಚಿವ ಪರಮೇಶ್ವರ್, ಮುಸ್ಲಿಂ ಹಾಗೂ ಸ್ಥಳೀಯ ಪ್ರಮುಖ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ಕರೆದಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಮುಖಂಡರು ಕೇರಳದ ಯುವಕ ಅಶ್ರಫ್‌ನನ್ನು ಗುಂಪು ಹತ್ಯೆ ನಡೆಸಿದ ಬಳಿಕ ನಡೆದ ಎಲ್ಲ ಬೆಳವಣಿಗೆಗಳನ್ನು ವಿವರಿಸಿದ್ದಾರೆ.
ಸುಮಾರು ಒಂದೂವರೆ ಗಂಟೆ ನಡೆದ ಈ ಸಭೆಯಲ್ಲಿ ಎಲ್ಲ ವಿವರಗಳನ್ನು ಪ್ರಸ್ತಾಪಿಸಿದ ಮುಸ್ಲಿಂ ಮುಖಂಡರು, ಮುಸ್ಲಿಮರು ಹತ್ಯೆಯಾದಾಗ ಸರ್ಕಾರ ಹಾಗೂ ಸಂಬಂಧ ಬೇಜವಾಬ್ದಾರಿಯಾದಂತ ಹೇಳಿಕೆ, ನಿಧಾನಗತಿಯ ಪ್ರಕ್ರಿಯೆ ಹಾಗೂ ಪೊಲೀಸರ ಬೇಜವಾಬ್ದಾರಿಯನ್ನು ಖಾರವಾಗಿಯೇ ಪ್ರಶ್ನಿಸಿದ್ದಾರೆ.

“ನೀವು ಈ ರಾಜ್ಯದ ಗೃಹ ಸಚಿವರು, ಅಶ್ರಫ್ ಹತ್ಯೆಯ ಸಂಬಂಧ ಪಾಕಿಸ್ತಾನ ಪರ ಘೋಷಣೆ ಕಾರಣ ಎಂದು ಹೇಳಿಕೆ ನೀಡುವುದಕ್ಕೆ ಮಾಹಿತಿ ನೀಡಿದವರು ಯಾರು? ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮ ಜಿಲ್ಲೆ. ಇಲ್ಲಿ ನಡೆಯುವ ಘಟನೆಗಳ ಬಗ್ಗೆ ಏನೇ ಹೇಳಿಕೆ ನೀಡುವುದಕ್ಕೂ ಮುನ್ನ ಸರಿಯಾದ ಮಾಹಿತಿ ಕಲೆ ಹಾಕಿ ನೀಡಿದರೆ ಉತ್ತಮ” ಎಂದು ಗರಂ ಆಗಿಯೇ ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಗೃಹ ಸಚಿವರು ತನ್ನ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
ಗುಂಪಿನಿಂದ ಹತ್ಯೆಯಾಗಿರುವ ಕೇರಳದ ಮುಸ್ಲಿಂ ಯುವಕ ಅಶ್ರಫ್ ಅವರ ಕುಟುಂಬ ಬಡ ಕುಟುಂಬವಾಗಿದ್ದು, ಅವರಿಗೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿರುವ ಮುಸ್ಲಿಂ ಮುಖಂಡರು, ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಕೂಡ ಯತ್ನಿಸಿದ್ದಾರೆ. ಈ ಘಟನೆ ನಡೆಯಲು ರವೀಂದ್ರ ಎಂಬಾತನ ಪ್ರಚೋದನೆಯೇ ಕಾರಣ. ಆತನನ್ನು ಈವರೆಗೆ ಪೊಲೀಸರು ಬಂಧಿಸಿಲ್ಲ. ಹಾಗಾಗಿ, ಎಲ್ಲ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಭೆಯಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನೂ ಪ್ರಶ್ನೆ ಮಾಡಿರುವ ಮುಸ್ಲಿಂ ಮುಖಂಡರು, “ಅಶ್ರಫ್ ಅವರ ಗುಂಪು ಹತ್ಯೆ ಸಂಬಂಧ ತಾವು ಟ್ವೀಟ್ ಮಾಡುವಾಗ ಅನ್ಯ ಕೋಮು ಎಂದು ಬಳಸಿದ್ದೀರಿ. ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಅನ್ಯವಾದದ್ದು ಯಾವಾಗ?” ಎಂದು ಕೇಳಿರುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಮುಖಂಡರೋರ್ವರು ಮಾಹಿತಿ ನೀಡಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮುಸಲ್ಮಾನರನ್ನು ಗುರಿಯಾಗಿಸಿ ಮೂರು ನಾಲ್ಕು ಕೊಲೆ ಯತ್ನ ಘಟನೆಗಳು ನಡೆದಿದೆ. ಉಡುಪಿ ಅತ್ರಾಡಿಯ ರಿಕ್ಷಾ ಚಾಲಕ ಅಬೂಬಕ್ಕರ್ ಎಂಬವರ ಮೇಲೆ ತಲ್ವಾರ್ ದಾಳಿಗೆ ಯತ್ನ, ಅಪಾಯ ಅರಿತು ಓಡಿ ಹೋಗಿರುವುದರಿಂದ ಪ್ರಾಣ ಉಳಿದಿದೆ. ತೊಕ್ಕೋಟು ಒಳಪೇಟೆಯಲ್ಲಿ ಅಳೇಕಲದ ಫೈಝಲ್ ಎಂಬವರ ಮೇಲೆ ತಂಡ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದು, ಗಾಯಾಳು ಆಗಿ ಆಸ್ಬತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಹೊರವಲಯದ ಕಣ್ಣೂರು ಬಳಿ ನೌಶಾದ್ ಎಂಬ ಯುವಕನ ಮೇಲೆ ಆತ ಮುಸ್ಲಿಂ ಎಂದು ಖಚಿತಪಡಿಸಿದ ಬಳಿಕ ಹಿಂಭಾಗದಿಂದ ಬೆನ್ನಿಗೆ ಚೂರಿಯಿಂದ ಇರಿಯಲಾಗಿದೆ, ಮಾರಣಾಂತಿಕವಾಗಿ ಗಾಯಗೊಂಡಿರುವ ನೌಶಾದ್ ಸರ್ಜರಿ ಬಳಿಕ ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೌಶಾದ್ ಬಡ ಕುಟುಂಬದವರಾಗಿದ್ದು, ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿಯ ನಂತರದ ಯುದ್ಧೋನ್ಮಾದ ಸರಿಯೇ?
ಜೊತೆಗೆ, ಮಂಗಳೂರಿನ ಕುಂಟಿಕಾನ ಬಳಿ ಉಳ್ಳಾಲದ ಮೀನಿನ ವ್ಯಾಪಾರಿ ಉಕ್ಮಾನ್ ರನ್ನು ಕಾರಿನಲ್ಲಿ ಬಂದ ತಂಡವು ಲುಕ್ಮಾನ್ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆಗೆ ಯತ್ನಿಸಿತ್ತು, ಇದನ್ನು ನೋಡಿದ ಹಿಂದೂ ಮಹಿಳೆಯೊಬ್ಬರು ಬೊಬ್ಬೆ ಹೊಡೆದು ರಕ್ಷಣೆಗೆ ಮುಂದಾಗಿದ್ದರಿಂದ ಲುಕ್ಮಾನ್ ಪಾರಾಗಿದ್ದಾರೆ. ಪಂಜಿಮೊಗರು ಸಮೀಪ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಂಜಿಮೊಗರು ನಿವಾಸಿ ಮೊಯ್ದಿನಬ್ಬ ಮತ್ತು ಶಾಂತಿನಗರದ ನಾಸಿರ್ ಎಂಬವರಿಗೆ ತಲವಾರು ಬೀಸಿ ಬೆದರಿಸಿದ ದುಷ್ಕರ್ಮಿಗಳು ಬಳಿಕ ಪರಾರಿಯಾಗಿದ್ದಾರೆ. ಈ ಕುರಿತ ಸಿಸಿ ಟಿವಿ ದ್ರಶ್ಯವಳಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಇನ್ನು ಬಿಸಿ ರೋಡಿನಲ್ಲಿ ಶವಯಾತ್ರೆಯ ವೇಳೆ ಮುಸ್ಲಿಂ ವ್ಯಕ್ತಿ ಸಂಚರಿಸುತ್ತಿದ್ದ ಆಟೋ ರಿಕ್ಷಾಗೆ ಹಾನಿ ಮಾಡಲಾಗಿದೆ. ಪುತ್ತೂರಿನಲ್ಲಿ ಬಲವಂತದ ಬಂದ್ ಮಾಡಲಾಗಿದೆ. ಕಡಬದಲ್ಲಿ ರಸ್ತೆ ಮಧ್ಯೆ ಟಯರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆ ಮಾಡಲಾಗಿದೆ. ಇದಕ್ಕೆಲ್ಲ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಅವರ ಬಂದ್ ಕರೆ ಹಾಗೂ ಕೆಲವು ಬಿಜೆಪಿ, ಸಂಘಪರಿವಾರದ ನಾಯಕರ ಪ್ರಚೋದನೆಯೇ ಕಾರಣ. ಈವರೆಗೆ ಪೊಲೀಸ್ ಇಲಾಖೆ ಸರಿಯಾದ ಕ್ರಮ ಕೈಗೊಳ್ಳದ ಕಾರಣ ಈ ಎಲ್ಲ ಬೆಳವಣಿಗೆ ನಡೆದಿದೆ. ಸುಹಾಸ್ ಶೆಟ್ಟಿಯ ಹತ್ಯೆಯ ಬೆನ್ನಲ್ಲೇ ಈ ಎಲ್ಲ ಘಟನೆ ನಡೆದಿದೆ. ಜಿಲ್ಲೆಯಲ್ಲಿ ನಿಷೇಧಾಜ್ಞೆ ನಡುವೆಯೇ ಈ ಎಲ್ಲ ಘಟನೆ ನಡೆದಿದೆ. ಹಾಗಾದರೆ, ನಿಷೇಧಾಜ್ಞೆ ಇದ್ದಿದ್ದು ಯಾರಿಗೆ ಎಂದು ಗೃಹ ಸಚಿವರಿಗೆ ಮುಸ್ಲಿಂ ಮುಖಂಡರು ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೇ, ಈವರೆಗೆ ನಡೆದಿರುವ ಎಲ್ಲ ಘಟನೆಗಳ ಬಗ್ಗೆ ಸುಮಾರು ಒಂದೂವರೆ ಗಂಟೆಗಳ ಕಾಲ ವಿವರಿಸಿರುವುದಾಗಿ ತಿಳಿದುಬಂದಿದೆ.
ಸಮಗ್ರ ಮಾಹಿತಿ ಪಡೆದು ಬಳಿಕ ಕಮಿಷನರ್ ಕಚೇರಿಗೆ ಗೃಹ ಸಚಿವ ಪರಮೇಶ್ವರ್ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತೆರಳಿರುವುದಾಗಿ ತಿಳಿದುಬಂದಿದೆ.
ಸಭೆಯಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆಕೆ, ಯುವ ಮುಖಂಡರಾದ ಸುಹೇಲ್ ಕಂದಕ್, ನಿವೃತ್ತ ಪೊಲೀಸ್ ಅಧಿಕಾರಿ ಜಿ ಎ ಬಾವಾ, ಮಾಜಿ ಮೇಯರ್ ಅಶ್ರಫ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕೆ ಸೇರಿದಂತೆ ಹಲವರು ಹಾಜರಿದ್ದರು.