“ಮಂಗಳೂರು ಆಸುಪಾಸು ನಡೆದ ಎರಡು ಕೊಲೆಗಳಿಗೆ ಪ್ರಚೋದನೆಯೇ ಕಾರಣ. ಹಾಗಾಗಿ, ಹಿಂದು -ಮುಸ್ಲಿಂ ಯಾರೇ ಆದರೂ ಪ್ರಚೋದನೆ ಮಾಡಿದರೆ ಕ್ರಮ ಕೈಗೊಳ್ಳಿ. ಅದರಲ್ಲಿ ಮುಲಾಜಿಯೇ ಬೇಡ” ಎಂದು ಮಂಗಳೂರಿನ ಮುಸ್ಲಿಂ ಮುಖಂಡರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಉಸ್ತುವಾರಿ ಸಚಿವರ ಸಭೆಗೂ ಮುನ್ನ ಮುಸ್ಲಿಂ ಮುಖಂಡರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ ಬಳಿಕ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಜಿ ಎ ಬಾವಾ, “ಸುಮಾರು 38 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ಬಂದಿದ್ದೇನೆ. ಆ ಸಮಯದಲ್ಲಿ ಇಂತಹ ಬೆಳವಣಿಗೆ ನೋಡಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಅದು ಸಾಮರಸ್ಯದ ಜಿಲ್ಲೆ. ನಾವೆಲ್ಲ ಬಾಲ್ಯವನ್ನು ಹಿಂದೂ-ಮುಸ್ಲಿಂ ಎಂದು ನೋಡದೆ ಕಳೆದಿದ್ದೇವೆ. ನಾನು ಹಿಂದೂಗಳ ಮನೆಯಲ್ಲಿ ವಾಸವಿದ್ದುಕೊಂಡು ವಿದ್ಯಾಭ್ಯಾಸ ಪಡೆದವನು. ಅಂತಹ ಸೌಹಾರ್ದತೆಯ ವಾತಾವರಣ ನಮ್ಮ ಜಿಲ್ಲೆಯಲ್ಲಿತ್ತು. ಆದರೆ, ಇವತ್ತು ಸ್ವಾಥ ರಾಜಕಾರಣಕ್ಕಾಗಿ ನಮ್ಮ ಜಿಲ್ಲೆಯ ಸೌಹಾರ್ದತೆಯ ವಾತಾವರಣವನ್ನು ಕೆಡಿಸಲಾಗುತ್ತಿದ್ದು, ಜನರು ನೆಮ್ಮದಿಯಿಂದ ಬದುಕುವುದು ಕೂಡ ಕಷ್ಟ ಆಗಿದೆ” ಎಂದು ಬೇಸರಿಸಿದರು.

“ಮಂಗಳೂರಿನ ಎರಡು ಕೊಲೆಗಳಿಗೆ ಪ್ರಚೋದನೆಯೇ ಕಾರಣ. ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಸಚಿವರಲ್ಲಿ ಒತ್ತಾಯಿಸಿದ್ದೇವೆ. ಮಂಗಳೂರಿನ ಜನರು ಸಾಮರಸ್ಯದಿಂದ ಬದುಕಬೇಕು. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ಕಟ್ಟಿಕೊಡಬೇಕಿದೆ. ಇಲ್ಲಿನ ಪೊಲೀಸ್ ಇಲಾಖೆ ಯಾವುದೇ ಪಕ್ಷಪಾತವಿಲ್ಲದೆ, ಯಾವುದೇ ಮುಲಾಜಿಗೆ ಒಳಪಡದೆ ಕಠಿಣ ಕ್ರಮಗಳನ್ನು ಕೈಗೊಂಡರೆ ಇಲ್ಲಿನ ಪರಿಸ್ಥಿತಿ ತಕ್ಷಣವೇ ನಿಯಂತ್ರಣಕ್ಕೆ ಬರುತ್ತದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಸುದ್ದಿಗೋಷ್ಠಿ ವೇಳೆ ಸಚಿವ ಗುಂಡೂರಾವ್ ಜೊತೆಗೆ ವಾಗ್ವಾದಕ್ಕಿಳಿದ ಖಾದರ್ ಆಪ್ತ!
ಬಳಿಕ ಮಾತನಾಡಿದ ಹಿರಿಯ ಮುಖಂಡ ಇಬ್ರಾಹೀಂ ಕೋಡಿಜಾಲ್, “ಜಿಲ್ಲೆಯ ವಾತಾವರಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ಕೊನೆಗೂ ಕಮಿಷನರ್ ಹಾಗೂ ಎಸ್‌ಪಿಯವರನ್ನು ವರ್ಗಾವಣೆಗೊಳಿಸಿ, ಬೇರೆಯವರನ್ನು ನೇಮಕ ಮಾಡಿದೆ. ಇದು ಒಳ್ಳೆಯ ವಿಚಾರವಾದರೂ, ಅಧಿಕಾರಿಗಳ ಬದಲಾವಣೆಯಾದರೆ ಮಾತ್ರ ಎಲ್ಲವೂ ಸರಿಯಾಗುತ್ತದೆ ಎಂಬ ವಿಶ್ವಾಸ ನಮಗಿಲ್ಲ. ಕಮಿಷನರ್, ಎಸ್‌ಪಿ ಕೆಳಗಡೆ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳ ಪೈಕಿ ಕೆಲವರು 15-20 ವರ್ಷಗಳಿಂದ ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿರುವ ವಿಚಾರ ನಮಗೆ ಗೊತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಿದೆ. ಆಗ ಸುಧಾರಣೆ ಸಾಧ್ಯವಿದೆ. ಇದನ್ನು ಸಿಎಂ ಹಾಗೂ ಗೃಹ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಸಮುದಾಯ ಮುಖಂಡರಾದ ಕಣಚೂರು ಮೋನು ಸೇರಿದಂತೆ ಹಲವರು ಉಪಸ್ಥಿತರಿದ್ದರು.