ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 98 ಜನರ ಪೈಕಿ 97 ಮಂದಿಗೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠವು ಬುಧವಾರ ಜಾಮೀನು ಮಂಜೂರು ಮಾಡಿದೆ. ಅಲ್ಲದೇ, ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿದೆ.
10 ವರ್ಷಗಳ ಹಿಂದೆ ನಡೆದ ಗ್ರಾಮದ ದಲಿತರ ದೌರ್ಜನ್ಯ ಪ್ರಕರಣದಲ್ಲಿ ಕಳೆದ ತಿಂಗಳು ಕೊಪ್ಪಳ ಜಿಲ್ಲಾ ನ್ಯಾಯಾಲಯವು 97 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದೊಂದು ಐತಿಹಾಸಿ ತೀರ್ಪು ಆಗಿತ್ತು. ಇಡೀ ಗ್ರಾಮದ ಬಹುತೇಕ ಮನೆಗಳ ಸದಸ್ಯರು ಜೈಲು ಪಾಲಾಗಿದ್ದರು. ಆ ಬಳಿಕ ಅವರೆಲ್ಲಾ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಕುರಿತು ವಿಚಾರಣೆ ನಡೆದಿಸ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠವು 98 ಅಪರಾಧಿಗಳ ಪೈಕಿ 97 ಜನರಿಗೆ ಜಾಮೀನು ಮುಂಜೂರು ಮಾಡಿ ಆದೇಶ ಹೊರಡಿಸಿದೆ. ಜಾಮೀನು ಅರ್ಜಿ ಹಾಕದ ಎ1 ಅಪರಾಧಿಯಾಗಿದ್ದ ಮಂಜುನಾಥ ಹೊರತು ಪಡಿಸಿ ಉಳಿದೆಲ್ಲರಿಗೂ ಜಾಮೀನು ಮುಂಜೂರು ಮಾಡಿದೆ.
ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ದಂಡದ ಮೊತ್ತ ಪಾವತಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಪ್ರತಿಯೊಬ್ಬರಿಗೂ 50 ಸಾವಿರ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿರುವುದಾಗಿ ವರದಿಯಾಗಿದೆ. ಈ ನಡುವೆ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದ್ದ ಬೆನ್ನಲ್ಲೇ ಈ ಪ್ರಕರಣದಲ್ಲಿ 98ನೇ ಅಪರಾಧಿಯಾಗಿದ್ದ ರಾಮ ಲಕ್ಷಣ ಭೋವಿ(44) ನಿಧನರಾಗಿದ್ದರು.
ದೇಶದ ಗಮನ ಸೆಳೆದಿದ್ದ ತೀರ್ಪು: ಏನಿದು ಮರಕುಂಬಿ ಪ್ರಕರಣ?
2014ರ ಆಗಸ್ಟ್ 28ರಂದು ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ‘ಪವರ್’ ಸಿನಿಮಾ ನೋಡಲು ಟಿಕೆಟ್ ಪಡೆಯುವಾಗ ದಲಿತರು ಹಾಗೂ ಸವರ್ಣೀಯರ ನಡುವೆ ಮಾತಿಗೆ ಮಾತು ಬೆಳೆದು ಶುರುವಾದ ಜಗಳ ಸಂಘರ್ಷಕ್ಕೆ ತಿರುಗಿತ್ತು.
ಒಂದು ದಶಕದ ಹಿಂದೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ ನಡೆದ ದಲಿತರು ಹಾಗೂ ಸವರ್ಣೀಯರ ನಡುವಿನ ಜಾತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಒಟ್ಟು 101 ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿತ್ತು.
ಈ ಪ್ರಕರಣದ ಕುರಿತು ಮಾದಿಗ ಸಮುದಾಯದ ಭೀಮೇಶ ಎಂಬುವವರು ದೂರು ನೀಡಿದ್ದರು. “ನಮ್ಮ ಗ್ರಾಮದ ಸವರ್ಣೀಯ ಮಂಜುನಾಥ ಈಳಿಗೇರ ಹಾಗೂ ಇತರರು ಟಿಕೆಟ್ ಪಡೆಯುವಾಗ ಯಾರೊ ವ್ಯಕ್ತಿಗಳ ಜೊತೆ ಜಗಳ ಮಾಡಿಕೊಂಡಿದ್ದರು. ಆಗ ಅವರ ಮೇಲೆ ಹಲ್ಲೆಯಾಗಿತ್ತು. ಅದನ್ನು ನಾವೇ ಮಾಡಿಸಿದ್ದೇವೆ ಎಂದು ತಪ್ಪು ತಿಳಿದುಕೊಂಡು ಮಂಜುನಾಥ ಅವರು ಗ್ರಾಮಕ್ಕೆ ಸವರ್ಣೀಯರನ್ನು ಕರೆದುಕೊಂಡು ಬಂದು ನಮ್ಮ ಸಮುದಾಯದ ಜನರ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ್ದ. ಗ್ರಾಮದಲ್ಲಿ ಗುಡಿಸಲುಗಳಿಗೆ ಬೆಂಕಿಯನ್ನೂ ಹಚ್ಚಲಾಗಿತ್ತು” ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮದ 117 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ನಡುವೆ ಕೆಲ ಆರೋಪಿಗಳು ಸಾವನ್ನಪ್ಪಿದ್ದಾರೆ. ಉಳಿದವರ ಪೈಕಿ 101 ಮಂದಿಯ ವಿರುದ್ಧ ಆರೋಪ ಸಾಬೀತಾಗಿದೆ. ಅಕ್ಟೋಬರ್ 24ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸುವುದಾಗಿ ನ್ಯಾಯಾಲಯ ತಿಳಿಸಿತ್ತು.
ಇದನ್ನು ಓದಿದ್ದೀರಾ? ವಿಜಯಪುರ | ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
ಅದರಂತೆ, 2014ರಲ್ಲಿ ನಡೆದ ಸವರ್ಣೀಯರು ಮತ್ತು ದಲಿತರ ನಡುವೆ ಗಲಾಟೆ ಪ್ರಕರಣದ ಒಟ್ಟು 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ತೀರ್ಪು ಪ್ರಕಟಿಸಿದ್ದರು.
ಇನ್ನುಳಿದಂತೆ ಮೂವರು ಅಪರಾಧಿಗಳು ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಸೇರಿದ್ದರಿಂದ ಅವರಿಗೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗಿಲ್ಲ. ಹೀಗಾಗಿ ಅವರಿಗೆ ಕೊಲೆ ಯತ್ನ, ದೊಂಬಿ ಸೇರಿದಂತೆ ಇನ್ನಿತರ ಸೆಕ್ಷನ್‌ನಲ್ಲಿ ಐದು ವರ್ಷ ಶಿಕ್ಷೆ ವಿಧಿಸಿದ್ದಾರೆ. ಈಗ ಎಲ್ಲ 98 ಅಪರಾಧಿಗಳ ಪೈಕಿ ಮಂಜುನಾಥ್ ಓರ್ವನನ್ನು ಬಿಟ್ಟು 97 ಮಂದಿಗೆ ಜಾಮೀನು ನೀಡಿದ್ದಲ್ಲದೇ, ದೇಶದ ಗಮನ ಸೆಳೆದಿದ್ದ ಕೊಪ್ಪಳ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
