ಪಡೆದಿದ್ದ ಸಾಲವನ್ನು ಅವಧಿಯೊಳಗೆ ಸಂಪೂರ್ಣವಾಗಿ ಮರುಪಾವತಿಸಿಲ್ಲ ಎಂದು ಆರೋಪಿಸಿ ಮೈಕ್ರೋ ಫೈನಾನ್ಸ್ ಸಂಸ್ಥೆಯೊಂದು ಮನೆಗೆ ನೋಟಿಸ್ ಅಂಟಿಸಿ ಬೀಗ ಜಡಿದ ಪರಿಣಾಮ ವಿಶೇಷ ಚೇತನ ಮಗುವಿನೊಂದಿಗೆ ಕುಟುಂಬವೊಂದು ಬೀದಿಗೆ ಬಿದ್ದಿರುವ ಬೆಳವಣಿಗೆ ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮದ ದಸ್ತಗೀರಸಾಬ್ ಮುಗಟಸಾಬ್ ಕಾದ್ರೊಳ್ಳಿ ಎಂಬುವವರ ಕುಟುಂಬ ವಿಶೇಷ ಚೇತನ ಮಗುವಿನೊಂದಿಗೆ ಬೀದಿಗೆ ಬಿದ್ದಿದೆ.
ಈ ಬಗ್ಗೆ ಅಮ್ಮ ಅಳಲು ತೋಡಿಕೊಂಡಿರುವ ಕುಟುಂಬದ ಯಜಮಾನ ದಸ್ತಗೀರ್ ಸಾಬ್, “₹5 ಲಕ್ಷ ಸಾಲ ನೀಡಲಾಗಿತ್ತು. ಈ ಪೈಕಿ ₹2 ಲಕ್ಷ ಮಧ್ಯವರ್ತಿ ಪಾಲಾಗಿದೆ. ಎಲ್ಲ ಸಾಲ ಕಟ್ಟಲು ನಮಗೆ ಒತ್ತಡ ಹಾಕಲಾಗುತ್ತಿದೆ. ಮೈಕ್ರೊ ಫೈನಾನ್ಸ್ ಕಂಪನಿಯವರು ಮನೆಗೆ ವಾರದ ಹಿಂದೆ ಬೀಗ ಜಡಿದು, ನೋಟಿಸ್ ಅಂಟಿಸಿದ್ದಾರೆ” ಎಂದು ತಿಳಿಸಿದ್ದಾರೆ.

“ನಾನು ತೆಗೆದುಕೊಂಡಿದ್ದ ₹3 ಲಕ್ಷ ಸಾಲಕ್ಕೆ, ಈಗಾಗಲೇ ₹3.30 ಲಕ್ಷ ಪಾವತಿಸಿರುವೆ. ₹2 ಲಕ್ಷ ಪಡೆದ ಮಧ್ಯವರ್ತಿಗೆ ಕೇಳಿದರೆ ನನಗೇನೂ ಸಂಬಂಧವಿಲ್ಲ ಎನ್ನುತ್ತಾರೆ. ನಿಗದಿತ ಅವಧಿಗೆ ಸಾಲದ ಕಂತು ಕಟ್ಟಿಲ್ಲ ಎಂದು ನಿಂದಿಸಿ, ಓಡಾಡುತ್ತಿದ್ದ ಬೈಕ್ ಕೂಡ ಜಪ್ತಿ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
“ನನ್ನ ಕೊರಳಲ್ಲಿದ್ದ ತಾಳಿ ಗಿರವಿ ಇಟ್ಟು ಶುಕ್ರವಾರ ₹2 ಲಕ್ಷ ಹಣ ಒಟ್ಟುಗೂಡಿಸಿ ತುಂಬಲು ಹೋಗಿದ್ದೆವು. ₹2.5 ಲಕ್ಷ ಕಟ್ಟಿದರೆ ಮಾತ್ರ ಮನೆ ಬೀಗ ತೆರೆಯುತ್ತೇವೆ ಎನ್ನುತ್ತಾರೆ. ₹50 ಸಾವಿರ ನಂತರ ಕಟ್ಟುತ್ತೇವೆ ಎಂದರೂ ಕೇಳುತ್ತಿಲ್ಲ” ಎಂದು ದಸ್ತಗೀರಸಾಬ್ ಪತ್ನಿ ಶಹನಾಬಿ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಕೃಷಿ ಹೊಂಡದ ಹೆಸರಲ್ಲಿ ಕಲ್ಲು ಗಣಿಗಾರಿಕೆ: ಗ್ರಾಮಸ್ಥರ ಮನೆಯ ಗೋಡೆಯಲ್ಲಿ ಬಿರುಕು!
“ಪತಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿ ಒಟ್ಟು 15 ಜನ ಮನೆಯಲ್ಲಿ ವಾಸಿಸುತ್ತೇವೆ. ಮನೆಗೆ ಬೀಗ ಹಾಕಿದ್ದರಿಂದ ಮಂದಿ ಮನೆ, ಊರ ಗುಡಿ ನಮ್ಮ ಮಲಗುವ ಸ್ಥಳವಾಗಿದೆ. ಅಂಗವೈಕಲ್ಯ ಇರುವ ಬಾಲಕಿಯನ್ನು ಹೊತ್ತುಕೊಂಡು ಓಡಾಡುವ ಕೆಟ್ಟ ಪರಿಸ್ಥಿತಿಯನ್ನು ಸಾಲ ಕೊಡಿಸಿದ ಮಧ್ಯವರ್ತಿ ನಮಗೆ ತಂದಿಟ್ಟಿದ್ದಾರೆ. ನಮಗೆ ಯಾರಾದರೂ ನೆರವು ನೀಡಬೇಕು. ಸರ್ಕಾರ ನಮ್ಮಂಥವರ ನೆರವಿಗೆ ಬರಬೇಕು’ ಎಂದು ಕುಟುಂಬದ ಯಜಮಾನ ದಸ್ತಗೀರಸಾಬ್ ಅಳಲು ತೋಡಿಕೊಂಡಿದ್ದಾರೆ.
ಸುಗ್ರೀವಾಜ್ಞೆ ವಾಪಸ್ ಕಳುಹಿಸಿರುವ ರಾಜ್ಯಪಾಲ
ಸಾಲ ವಸೂಲಿ ವೇಳೆ ಮೈಕ್ರೊ ಫೈನಾನ್ಸ್ ಕಂಪನಿಗಳು ಮತ್ತು ಲೇವಾದೇವಿದಾರರು ಅನುಸರಿಸುವ ಕಾನೂನುಬಾಹಿರ ಕ್ರಮಗಳು ಹಾಗೂ ಕಿರುಕುಳದಿಂದ ಸಾಲಗಾರರನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ರೂಪಿಸಿದ್ದ, ‘ಕರ್ನಾಟಕ ಮೈಕ್ರೊ ಫೈನಾನ್ಸ್ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ–2025’ ಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದರು.
