ಫಲ ನೀಡಿದ ಅಲ್ಪಸಂಖ್ಯಾತರ ಇಲಾಖೆಯ ಉಚಿತ ಕೋಚಿಂಗ್ ಯೋಜನೆ: 62 ಮಂದಿಗೆ ಸರ್ಕಾರಿ ಉದ್ಯೋಗ

Date:

Advertisements

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯು ವರ್ಷಗಳ ಹಿಂದೆ ಆರಂಭಿಸಿದ್ದ ಸಕಾಲಿಕ ಯೋಜನೆಯು ಈಗ ಫಲ ನೀಡುತ್ತಿದ್ದು, ಉಚಿತ ಕೋಚಿಂಗ್ ತರಬೇತಿ ಪಡೆದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿದ್ದವರ ಪೈಕಿ 62 ಮಂದಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆಯು ವರ್ಷಗಳ ಹಿಂದೆ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್, ಪಾರ್ಸಿ ಹಾಗೂ ಜೈನ ಸಮುದಾಯದ ಅಭ್ಯರ್ಥಿಗಳಿಗಾಗಿ ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಆಸಕ್ತಿ ಇರುವವರಿಗೆ ವಸತಿ ಸೌಕರ್ಯಗಳ ಸಹಿತ ಕೋಚಿಂಗ್ ನೀಡುವ ಯೋಜನೆಯನ್ನು 2023ರ ಅಕ್ಟೋಬರ್‌ನಲ್ಲಿ ಜಾರಿಗೆ ತಂದಿತ್ತು.

WhatsApp Image 2024 11 24 at 5.43.08 PM

ಬೆಂಗಳೂರಿನ ಯಲಹಂಕ ಸಮೀಪ ನಿರ್ಮಿಸಲಾಗಿದ್ದ ಹಜ್ ಭವನದಲ್ಲಿ ಅಲ್ಪಸಂಖ್ಯಾತರ ಯುವ ಜನರಿಗೆ ವಸತಿ ಐಎಎಸ್-ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡುವ ಯೋಜನೆ ಇದಾಗಿತ್ತು. ಹೀಗಾಗಿ, ಸುಮಾರು 10 ತಿಂಗಳ ವಸತಿ ಸಹಿತ ಕೋಚಿಂಗ್ ತರಬೇತಿಯನ್ನು ನೀಡಲಾಗಿತ್ತು. ಜೊತೆಗೆ, ಗ್ರಂಥಾಲಯ ಮತ್ತು ಇತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.

Advertisements

ಈ ಕೋಚಿಂಗ್ ತರಬೇತಿಯ ಮೂಲಕ ಮೊದಲ ವರ್ಷ ಯುವಕ ಯುವತಿಯರ ಸಹಿತ ಒಟ್ಟು 438 ಮಂದಿ ಪ್ರಯೋಜನ ಪಡೆದುಕೊಂಡಿದ್ದರು. ಆ ಬಳಿಕ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿದ್ದವರ ಪೈಕಿ ಸುಮಾರು 62 ಮಂದಿ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಕೆಲವು ಮಂದಿ ಈಗಾಗಲೇ ಉದ್ಯೋಗದ ತರಬೇತಿಯನ್ನು ಕೂಡ ಪಡೆದಿದ್ದು, ಈಗಾಗಲೇ ಸೇವೆಗೂ ಕೂಡ ಸೇರಿಕೊಂಡಿದ್ದಾರೆ.

ಈ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮನೋಜ್ ಜೈನ್ ಈ ದಿನ.ಕಾಮ್ ಜೊತೆಗೆ ಮಾತನಾಡಿದ್ದು, “ಅಲ್ಪಸಂಖ್ಯಾತ ಸಮುದಾಯದ ಬಳಕೆಗಾಗಿ ನಮ್ಮಲ್ಲಿ ಸುಸಜ್ಜಿತವಾದ, ವಸತಿ ಸೌಕರ್ಯ ಇರುವ ಹಜ್ ಭವನ ಈಗಾಗಲೇ ನಿರ್ಮಾಣ ಮಾಡಲಾಗಿತ್ತು. ‌ಈ ಹಿಂದೆ ಇದು ವರ್ಷದಲ್ಲಿ ಕೇವಲ ಎರಡೇ ತಿಂಗಳು ಅಂದರೆ ಹಜ್ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಇಷ್ಟೊಂದು ಸೌಕರ್ಯಗಳಿರುವ ಭವನವನ್ನು ಶೈಕ್ಷಣಿಕ ಬಳಕೆಗೆ ಉಪಯೋಗಿಸಲು ಸಾಧ್ಯವಿರುವುದನ್ನು ಮನಗಂಡು ನಾನು ಹಾಗೂ ಅಲ್ಪಸಂಖ್ಯಾತರ ನಿರ್ದೇಶನಾಲಯದ ಎಲ್ಲ ಅಧಿಕಾರಿಗಳು ಈ ಬಗ್ಗೆ ಒಂದು ಪ್ರಸ್ತಾವನೆಯನ್ನು ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿಸಿದ್ದೆವು. ಇದನ್ನು ಪರಿಗಣಿಸಿದ ಸರ್ಕಾರವು ಜುಲೈ 2023 ಬಜೆಟ್‌ನಲ್ಲಿ ವರ್ಷಕ್ಕೆ 17 ಕೋಟಿ ಅನುದಾನ ಘೋಷಿಸಿತ್ತು.‌‌ ಈ ಅನುದಾನದ ಪೈಕಿ ಸುಮಾರು 5ರಿಂದ 6 ಕೋಟಿ ಅನುದಾನವು ಕೋಚಿಂಗ್ ಹಾಗೂ ಇತರೆ ತರಬೇತಿಗೆ ಬಳಕೆಯಾಗುತ್ತಿದೆ” ಎಂದು ತಿಳಿಸಿದ್ದಾರೆ.

1002448566
ಮನೋಜ್ ಜೈನ್, ಸರ್ಕಾರದ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಈ ಹಿಂದೆ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ನೇರವಾಗಿ ಆರ್ಥಿಕ ಸಹಾಯ ಧನ ನೀಡಲಾಗುತ್ತಿತ್ತು. ಇದರ ದುರುಪಯೋಗ ಆಗುತ್ತಿತ್ತೇ? ಎಂದು ಪ್ರಶ್ನಿಸಿದಾಗ, “ನಾವು ದುರುಪಯೋಗ ಆಗುತ್ತಿತ್ತು ಎಂದು ನೇರವಾಗಿ ಆರೋಪ ಮಾಡಲಾಗುವುದಿಲ್ಲ. ಯಾಕೆಂದರೆ, ಕೋಚಿಂಗ್ ತರಬೇತಿಯನ್ನು ಹಲವು ಮಂದಿ ಸರಿಯಾದ ಮಾನಿಟರಿಂಗ್ ಇಲ್ಲದ್ದರಿಂದ ಅರ್ಧದಲ್ಲಿ ತೊರೆದಿರಲೂಬಹುದು. ಈ ಹಿಂದೆ ನಮ್ಮಲ್ಲೂ‌ ಕೂಡ ಸರಿಯಾದ ಮಾನಿಟರಿಂಗ್ ವ್ಯವಸ್ಥೆ ಇಲ್ಲದ್ದರಿಂದ ಅದನ್ನು ಹೇಳುವುದಕ್ಕೆ ಆಗಲ್ಲ. ಈ ಬಗ್ಗೆ ನಮ್ಮಲ್ಲಿ ಯಾವುದೇ ದಾಖಲೆ ಕೂಡ ಇಲ್ಲ. ನೂತನ ಯೋಜನೆಯ ಪ್ರಕಾರ, ಅಭ್ಯರ್ಥಿಗಳನ್ನು ನಿರಂತರವಾಗಿ ಹಜ್ ಭವನದಲ್ಲಿ ವಸತಿ ಸೌಕರ್ಯ, ಗ್ರಂಥಾಲಯ ಸೌಲಭ್ಯ ನೀಡುವುದರ ಜೊತೆಗೆ 10 ತಿಂಗಳು ನಿರಂತರವಾಗಿ ಕೋಚಿಂಗ್ ಕೊಟ್ಟಿರುವುದರಿಂದ ಸುಮಾರು 62 ಮಂದಿ‌‌ ಇಂದು ಸರ್ಕಾರಿ ಉದ್ಯೋಗಕ್ಕೆ ಸೇರಲು ಕಾರಣವಾಗಿದೆ” ಎಂದು ಐಎಎಸ್‌ ಅಧಿಕಾರಿ ಮನೋಜ್ ಜೈನ್ ಸಂತಸ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರ ಅಧಿಕಾರಿಗಳ ತಂಡದ ಪ್ರಯತ್ನದ ಫಲ ಇದು

“438 ಅಭ್ಯರ್ಥಿಗಳ ಪೈಕಿ 62 ಮಂದಿ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗಿರುವುದಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ಎಲ್ಲ ಅಧಿಕಾರಿಗಳು ತಂಡವಾಗಿ ಕಾರ್ಯ ನಿರ್ವಹಿಸಿದ‌ ಪರಿಣಾಮದ ಪ್ರತಿಫಲವಿದು. ಮುಂದಿನ ದಿನಗಳಲ್ಲೂ ಈ ಕೋಚಿಂಗ್ ತರಬೇತಿಯನ್ನು ಮುಂದುವರಿಸಲಿದ್ದೇವೆ.‌ ಜೊತೆಗೆ ಇತರೆ ತರಬೇತಿಯನ್ನು ಕೂಡ ನೀಡಲು ಹಜ್ ಭವನವನ್ನು ಬಳಸಿಕೊಳ್ಳಲಿದ್ದೇವೆ. ಈಗಾಗಲೇ ತರಬೇತಿ ಪಡೆಯುತ್ತಿರುವ ಮಕ್ಕಳು ತುಂಬಾ ಖುಷಿಯಲ್ಲಿದ್ದಾರೆ. ಸರ್, ನಮಗೆ 10 ತಿಂಗಳು ತರಬೇತಿ ಸಾಕಾಗುತ್ತಿಲ್ಲ, ಇನ್ನಷ್ಟು ಹೆಚ್ಚು ದಿನ ತರಬೇತಿ ಬೇಕಿದೆ ಅಂತ ಬೇಡಿಕೆ ಇಟ್ಟಿದ್ದಾರೆ.‌ ಆದರೆ, ಈ ಬೇಡಿಕೆ ಪೂರೈಸಲು ಸಾಧ್ಯವಿಲ್ಲ. ಯಾಕೆಂದರೆ ಹೊಸ ಅಭ್ಯರ್ಥಿಗಳಿಗೂ ಅವಕಾಶ ನೀಡಬೇಕಿದೆ. ಹಾಗಾಗಿ, 10 ತಿಂಗಳ ನಂತರ ಮನೆಯಲ್ಲಿಯೇ ಕುಳಿತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಸಲಹೆ ನೀಡಿದ್ದೇವೆ. ಈ ಕೋಚಿಂಗ್ ತರಬೇತಿ ಯೋಜನೆ ವರ್ಷದೊಳಗೆ ಪ್ರತಿಫಲ ನೀಡಿರುವುದು ಅಲ್ಪಸಂಖ್ಯಾತರ ಇಲಾಖೆ ಹಾಗೂ ಪ್ರಯತ್ನ ಮಾಡಿದ ಎಲ್ಲ ಅಧಿಕಾರಿಗಳಿಗೂ ಖುಷಿ ಕೊಟ್ಟಿದೆ” ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮನೋಜ್ ಜೈನ್ ಈ ದಿನ.ಕಾಮ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

minority2

ಈ ದಿನ.ಕಾಮ್ ಜೊತೆಗೆ ಮಾತನಾಡಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕ ಜೀಲಾನಿ ಎಚ್ ಮೊಕಾಶಿ, “ಈ ಕೋಚಿಂಗ್ ತರಬೇತಿಗೆ ಅರ್ಜಿ ಆಹ್ವಾನಿಸಿದಾಗ ಸುಮಾರು 3000 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅದರಲ್ಲಿ ಸುಮಾರು 438 ಮಕ್ಕಳನ್ನು ಆಯ್ಕೆ ಮಾಡಿದ್ದೆವು. ತರಬೇತಿಯನ್ನು ಇನ್‌ಸೈಟ್ ಐಎಎಸ್ ಅಕಾಡೆಮಿಯ ಜೊತೆಗೂಡಿ ನೀಡಿದ್ದೇವೆ. ಈಗ ಸುಮಾರು 62 ಮಂದಿ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಅದರಲ್ಲಿ ಸುಮಾರು 43 ಮಂದಿ ಪೊಲೀಸ್ ಇಲಾಖೆಯೊಂದಕ್ಕೇ ಸೇರಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.

WhatsApp Image 2024 11 25 at 4.03.26 PM
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕ ಜೀಲಾನಿ ಎಚ್ ಮೊಕಾಶಿ

10 ತಿಂಗಳ ತರಬೇತಿಯ ನಂತರ ಇಷ್ಟೊಂದು ಮಂದಿ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗುವ ನಿರೀಕ್ಷೆ ಇತ್ತೇ ಎಂದು ಪ್ರಶ್ನಿಸಿದಾಗ, “ನಮಗೆ ಯಾವುದೇ ನಿರೀಕ್ಷೆ ಇರಲಿಲ್ಲ. ತರಬೇತಿ ನೀಡುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಈ ತರಬೇತಿಯ ನಡುವೆ ಹಜ್ ಭವನದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ನಡೆದಿತ್ತು. ಇದರಿಂದಾಗಿ ತರಬೇತಿ ನೀಡುತ್ತಿದ್ದ ಆಡಿಟೋರಿಯಂ ಸಂಪೂರ್ಣ ಸುಟ್ಟು ಹೋಗಿತ್ತು. ಈ ಘಟನೆಯಿಂದ ಅಲ್ಲಿ ತರಬೇತಿ ಪಡೆಯುತ್ತಿದ್ದ ನಮ್ಮ ಅಭ್ಯರ್ಥಿಗಳಿಗೆ ತೊಂದರೆ ಉಂಟಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ನಮ್ಮ ಇಲಾಖೆಯ ಅಧಿಕಾರಿಗಳು, ಎರಡು ವಾರದೊಳಗೆ ಮತ್ತೆ ಯಥಾಸ್ಥಿತಿಗೆ ತರುವಲ್ಲಿ ಶ್ರಮಪಟ್ಟಿದ್ದರಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಾಗಿದೆ” ಎಂದು ಜೀಲಾನಿ ತಿಳಿಸಿದರು.

ಓರ್ವ ಅಭ್ಯರ್ಥಿ ಐಎಎಸ್ ಪ್ರಿಲಿಮ್ಸ್‌ ಪರೀಕ್ಷೆ ತೇರ್ಗಡೆ

“ತೌಸೀಫ್ ಖಾನ್ ಎನ್ನುವ ಓರ್ವ ಅಭ್ಯರ್ಥಿ ಈಗಾಗಲೇ ಐಎಎಸ್ ಪ್ರಿಲಿಮ್ಸ್‌ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಮೇನ್ ಪರೀಕ್ಷೆಗೆ ಹಜ್ ಭವನದಲ್ಲೇ ತರಬೇತಿ ಪಡೆಯುತ್ತಿದ್ದಾನೆ. ಇನ್ನೂ ಕೆಲವೊಂದು ಸರ್ಕಾರಿ ಅಧಿಸೂಚನೆಗಳು ಹೊರಬರಲಿದೆ. ಅದರಲ್ಲೂ ಪರೀಕ್ಷೆ ಬರೆದಿರುವ ಕೆಲವರು ಆಯ್ಕೆಯಾಗುವ ನಿರೀಕ್ಷೆ ಇದೆ” ಎಂದಿರುವ ನಿರ್ದೇಶಕರು, “300 ವಿದ್ಯಾರ್ಥಿಗಳನ್ನು ಒಳಗೊಂಡ ಹೊಸ ಬ್ಯಾಚ್ ಡಿಸೆಂಬರ್ ಅಥವಾ ಜನವರಿಯಲ್ಲಿ ಪ್ರಾರಂಭ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ” ಎಂದು ಹೇಳಿದರು.

ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಅಂಜನಪ್ಪ ಮಾತನಾಡಿ, “ಹಲವು ವರ್ಷಗಳಿಂದ ಇಲಾಖೆಯು ಆಕಾಂಕ್ಷಿಗಳಿಗೆ ಮಾಸಿಕ ಸ್ಟೈಫಂಡ್‌ನೊಂದಿಗೆ ನೆರವು ನೀಡುತ್ತಿತ್ತು. ಪರೀಕ್ಷೆಯ ಮೂಲಕ ಆಯ್ಕೆಯಾದವರು ಹೊಸದಿಲ್ಲಿ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿರುವ ಕೋಚಿಂಗ್ ಸಂಸ್ಥೆಗಳಿಗೆ ಹೋಗಿ ಕಲಿಯುತ್ತಿದ್ದರು. ಆದಾಗ್ಯೂ, ಆಕಾಂಕ್ಷಿಗಳ ಮೇಲ್ವಿಚಾರಣೆ ನಮ್ಮಲ್ಲಿರಲಿಲ್ಲ. ಈ ಹಿನ್ನೆಲೆಯಲ್ಲಿ ವಸತಿ ಸಹಿತ ತರಬೇತಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿತ್ತು. ಅದಕ್ಕಾಗಿ ಹಜ್ ಭವನ ಬಳಸಿಕೊಂಡಿತು. ಅದು ಫಲ ನೀಡಿದೆ” ಎಂದು ತಿಳಿಸಿದರು.

ಸಹಾಯಕ ನಿರ್ದೇಶಕ ಶಶಿಕುಮಾರ್ ಗೌಡ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಆಕಾಂಕ್ಷಿಗಳಲ್ಲಿ ಒಬ್ಬರು ಯುಪಿಎಸ್‌ಸಿ ಪ್ರಿಲಿಮ್ಸ್ ತೇರ್ಗಡೆ ಹೊಂದಿದ್ದಾರೆ. ಇನ್ನೂ ಹಲವು ಅಧಿಸೂಚನೆಗಳು ಹೊರಬರಬೇಕಿದೆ. ಈ ವರ್ಷದ ಡಿಸೆಂಬರ್‌ನಲ್ಲಿ ಕೆಎಎಸ್ ಮರುಪರೀಕ್ಷೆಯನ್ನು ನಿಗದಿಪಡಿಸಲಾಗಿದೆ ಮತ್ತು ಮೊದಲ ಬ್ಯಾಚ್‌ನಿಂದ 50% ಯಶಸ್ಸಿನ ಪ್ರಮಾಣವನ್ನು ಇಲಾಖೆ ನಿರೀಕ್ಷಿಸುತ್ತಿದೆ” ಎಂದು ತಿಳಿಸಿದ್ದಾರೆ.

ವರ್ಷದಲ್ಲಿ 10 ತಿಂಗಳು ಖಾಲಿ ಇರುತ್ತಿದ್ದ ಹಜ್ ಭವನ ಸದ್ಬಳಕೆ

ವರ್ಷಕೊಮ್ಮೆ ಮಾತ್ರ ಮುಸ್ಲಿಂ ಸಮುದಾಯದವರು ಪವಿತ್ರ ಹಜ್ ಯಾತ್ರೆಗೆ ತೆರಳುತ್ತಾರೆ. ಹೀಗಾಗಿ, ಅದಕ್ಕಾಗಿ ತಯಾರಿ ನಡೆಸುವ ಉದ್ದೇಶದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೇ ಹಜ್ ಭವನವನ್ನು 87 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣ ಮಾಡಲಾಗಿತ್ತು. 2016ರಲ್ಲಿ ಹಜ್ ಭವನವನ್ನು ಉದ್ಘಾಟಿಸಲಾಗಿತ್ತು.

1002448594
ಹಜ್ ಭವನ, ಬೆಂಗಳೂರು

ಮೂರು ಎಕರೆಯಲ್ಲಿರುವ ಅತ್ಯಾಧುನಿಕ ಭವನದಲ್ಲಿ 100 ಉತ್ತಮ ಗುಣಮಟ್ಟದ ಕೊಠಡಿಗಳು, ಅತ್ಯಾಧುನಿಕ ಆಡಿಟೋರಿಯಂ, ಗ್ರಂಥಾಲಯ, ಕೆಫೆಟೇರಿಯಾ ಮತ್ತು ಇತರ ಸೌಕರ್ಯಗಳನ್ನು ಕೂಡ ಹೊಂದಿದೆ. ವರ್ಷದಲ್ಲಿ ಕೇವಲ ಎರಡೇ ತಿಂಗಳು ಹಜ್‌ನ ಸಂದರ್ಭದಲ್ಲಿ ಬಳಕೆ ಮಾಡಲಾಗುತ್ತಿತ್ತು. ಉಳಿದ ಹತ್ತು ತಿಂಗಳು ಖಾಲಿ ಇರುವುದನ್ನು ಗಮನಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು, ಹಜ್ ಭವನವನ್ನು ನೈಜ ಕಲ್ಯಾಣಕ್ಕಾಗಿಯೇ ಬಳಸಿಕೊಂಡಿರುವುದು ಮಾತ್ರ ಉತ್ತಮವಾದ ಯೋಜನೆ ಹಾಗೂ ಯೋಚನೆ ಎಂದರೆ ಅತಿಶಯೋಕ್ತಿಯಲ್ಲ.

ಯಾವ ಯಾವ ಇಲಾಖೆ, ವಿಭಾಗಗಳಲ್ಲಿ ಉದ್ಯೋಗ?

ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಸುಮಾರು 62 ಅಭ್ಯರ್ಥಿಗಳ ಪೈಕಿ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಲೋಕೋಪಯೋಗಿ ಇಲಾಖೆ, ಕಾರ್ಮಿಕ ಇಲಾಖೆ, ಗುಪ್ತಚರ ವಿಭಾಗ, ಸರ್ಕಾರಿ ಸ್ವಾಮ್ಯದ ಬ್ಯಾಂಕ್, ರೇಷ್ಮೆ ಇಲಾಖೆ, ಪೊಲೀಸ್ ಕಾನ್ಸ್‌ಟೇಬಲ್, ಸಿಆರ್‌ಪಿಎಫ್‌, ನಗರ ಸಶಸ್ತ್ರ ಮೀಸಲು ಪಡೆಗಳಲ್ಲಿ ಹಜ್ ಭವನದಲ್ಲಿ ತರಬೇತಿ ಪಡೆದಿದ್ದ 62 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು: ತಹಸೀನ ಎಂ

ಪಿ ಎಸ್ ಐ ಪರೀಕ್ಷೆಯಲ್ಲಿ 6ನೇ ರ‌್ಯಾಂಕ್ ಪಡೆದು ಮೈಸೂರು ದಕ್ಷಿಣ ವಿಭಾಗಕ್ಕೆ ಆಯ್ಕೆಯಾಗಿರುವ ತಹಸೀನ ಎಂ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಹಜ್ ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪಡೆದ ಉಚಿತ ಕೋಚಿಂಗ್‌ ನನ್ನ ಕನಸನ್ನು ಪೂರ್ತಿಗೊಳಿಸಲು ನೆರವಾಯಿತು. ಈ ಅವಕಾಶವನ್ನು ಪಡೆಯಲು ಕಾರಣಕರ್ತರಾದ ಎಲ್ಲರಿಗೂ ನಾನು ಕೃತಜ್ಞಳಾಗಿದ್ದೇನೆ” ಎಂದು ತಿಳಿಸಿದ್ದಾರೆ.

“ನಾನು ಕೋಚಿಂಗ್ ತರಬೇತಿಗೆ ಆಯ್ಕೆಯಾದಾಗ ನನ್ನ ಮಗುವಿಗೆ ಏಳು ತಿಂಗಳಷ್ಟೇ ಆಗಿತ್ತು. ಮಗುವಿದ್ದರೂ ಕೂಡ ನನ್ನ ಹೆತ್ತವರು, ಪತಿ ಮತ್ತು ಅತ್ತೆಯವರ ನನಗೆ ಬೆಂಬಲ ಸಿಕ್ಕಿತು. ಇದು ವಸತಿ ಸಹಿತ ಕೋಚಿಂಗ್ ಆಗಿದ್ದರಿಂದ ಮಾತ್ರ ಪಿಎಸ್‌ಐ ಪರೀಕ್ಷೆಯಲ್ಲಿ 6 ನೇ ರ‌್ಯಾಂಕ್ ಪಡೆಯಲು ಸಾಧ್ಯವಾಯಿತು. ತರಬೇತಿಯ ಸಮಯದಲ್ಲಿ ಹಜ್ ಭವನದ ಎಲ್ಲಾ ಸಿಬ್ಬಂದಿಗಳು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಅಲ್ಪಸಂಖ್ಯಾತ ಇಲಾಖೆಯ ಪ್ರತಿ ಅಧಿಕಾರಿಗಳಿಗೂ ಧನ್ಯವಾದ ಹೇಳಲು ಬಯಸುವೆ. ನಮ್ಮ ವಾರ್ಡನ್ ಆಗಿದ್ದ ಅಲ್ಲಾ ಭಕ್ಷ್ ಅವರು ಸಹೋದರನಂತೆ ನೋಡಿಕೊಂಡಿದ್ದಾರೆ. ಇಂತಹ ಅವಕಾಶಗಳನ್ನು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳು ಈ ಅವಕಾಶವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ಹಿನ್ನೆಲೆ

ಈ ಹಿಂದೆ ಹಿಂದುಳಿದ ವರ್ಗಗಳ ನಿರ್ದೇಶನಾಲಯದ ಅಡಿಯಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯವು ಕಾರ್ಯ ನಿರ್ವಹಿಸುತ್ತಿತ್ತು. ಆ ಬಳಿಕ ಬೇರ್ಪಡಿಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಹೆಚ್ಚು ಕೇಂದ್ರೀಕೃತ ವಿಧಾನವನ್ನು ಖಚಿತಪಡಿಸಿಕೊಳ್ಳಲು ಅಲ್ಪಸಂಖ್ಯಾತರ ನಿರ್ದೇಶನಾಲಯವನ್ನು ರಚಿಸಲಾಗಿತ್ತು. ನಿರ್ದೇಶನಾಲಯವು ಎಲ್ಲಾ ಅಲ್ಪಸಂಖ್ಯಾತ ಸಮುದಾಯದ ಜನರು ಸಾಮಾಜಿಕ, ಆರ್ಥಿಕ, ಶಿಕ್ಷಣ, ಇತ್ಯಾದಿ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳೊಂದಿಗೆ ಉತ್ತಮ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ದೂರದೃಷ್ಟಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

minority office bangalore
ಬೆಂಗಳೂರಿನ ವಸಂತ ನಗರಲ್ಲಿರುವ ನಿರ್ದೇಶನಾಲಯದ ಕೇಂದ್ರ ಕಚೇರಿ.

ನಿರ್ದೇಶನಾಲಯವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ನೋಡಲ್ ಕೇಂದ್ರ. ಬೆಂಗಳೂರಿನ ವಸಂತ ನಗರದ ಟ್ಯಾಂಕ್ ಬಂದ್ ರಸ್ತೆಯಲ್ಲಿರುವ ಸುಸಜ್ಜಿತ ‘ಮೌಲಾನಾ ಆಝಾದ್ ಭವನ’ವು ನಿರ್ದೇಶನಾಲಯದ ಕೇಂದ್ರ ಕಚೇರಿಯಾಗಿದೆ. ಪ್ರಸ್ತುತ ಮನೋಜ್ ಜೈನ್ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸರ್ಕಾರದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಜೀಲಾನಿ.ಎಚ್. ಮೊಕಾಶಿಯವರು ನಿರ್ದೇಶಕರಾಗಿ ಕರ್ತವ್ಯದಲ್ಲಿದ್ದಾರೆ.

ನಿರ್ದೇಶನಾಲಯವು ಎಲ್ಲ 30 ಜಿಲ್ಲೆಗಳಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಕಚೇರಿಗಳನ್ನು ಸ್ಥಾಪಿಸಿದೆ. ಈ ಜಿಲ್ಲಾ ಅಧಿಕಾರಿಗಳು ಪ್ರತಿ ಜಿಲ್ಲೆಯ ಜಿಲ್ಲಾ ಪಂಚಾಯತ್‌ನ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಮನ್ವಯದೊಂದಿಗೆ ಅಲ್ಪಸಂಖ್ಯಾತರ ಇಲಾಖೆಯ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತಿದ್ದಾರೆ.

Irshad Venoor
Website |  + posts

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಇರ್ಷಾದ್ ವೇಣೂರು
ಇರ್ಷಾದ್ ವೇಣೂರುhttps://eedina.com
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X