- ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ದಸಂಸದಿಂದ ಬೃಹತ್ ಪ್ರತಿಭಟನೆ
- ರಾಜ್ಯಪಾಲರು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕೈಗೊಂಬೆ: ಗುರುಪ್ರಸಾದ್ ಕೆರೆಗೋಡು
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಹಾಗೂ ಬಿಜೆಪಿ- ಜೆಡಿಎಸ್‌ನ ದುಷ್ಟ ರಾಜಕಾರಣ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಮಾವಳ್ಳಿ ಶಂಕರ್, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರನ್ನು ಸಿಲುಕಿಸಿ, ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲು ಹುನ್ನಾರ ನಡೆಸಲಾಗುತ್ತಿದೆ. ಬಿಜೆಪಿ ಜೆಡಿಎಸ್ ಮಾನಗೆಟ್ಟವರು. ಹುರುಳಿಲ್ಲದ ಪ್ರಕರಣವನ್ನು ಭ್ರಷ್ಟ ಪ್ರಕರಣವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ರಾಜ್ಯಪಾಲರು ನಡೆದುಕೊಂಡಿದ್ದಾರೆ. ಒಂದು ವೇಳೆ ರಾಜ್ಯಪಾಲರಿಗೆ ತಾಕತ್ತಿದ್ದರೆ ಕಳೆದ ಸರ್ಕಾರದ ಅವಧಿಯಲ್ಲಿ ಆರ್‌ಎಸ್‌ಎಸ್ ಆಕ್ರಮಿಸಿಕೊಂಡ ಭೂಮಿಯ ಬಗ್ಗೆ ತನಿಖೆ ನಡೆಸಲಿ” ಎಂದು ಸವಾಲೆಸೆದರು.
“ಹಿಂದುಳಿದ ವರ್ಗದವರು ಮುಖ್ಯಮಂತ್ರಿಗಳಾದರೆ ಅದನ್ನು ಸಹಿಸಲು ಮೇಲ್ವರ್ಗದವರಿಗೆ ಆಗುತ್ತಿಲ್ಲ. ಒಂದು ವೇಳೆ ಮುಡಾ ಪ್ರಕರಣದ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದರೆ ದಲಿತರು ಸುಮ್ಮನೆ ಕೂರುವುದಿಲ್ಲ” ಎಂದು ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಮಾತನಾಡಿ, “ಕರ್ನಾಟಕದ ಜನ ಜಾತಿವಾದಿ, ಕೋಮುವಾದಿಗಳನ್ನು ಕಳೆದ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ನ ಮಹಾನ್ ಕಳ್ಳರು, ದರೋಡೆಕೋರೆಲ್ಲ ಸೇರಿ ಒಟ್ಟಿಗೆ ಸೇರಿಕೊಂಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಸಿದ್ಧರಾಮಯ್ಯರನ್ನು ಮಣಿಸಲು ಬಿಜೆಪಿ – ಜೆಡಿಎಸ್ ಮಸಲತ್ತು ನಡೆಸಿದೆ. ಸಿದ್ದರಾಮಯ್ಯರವರು ಬಿಜೆಪಿ ಜೆಡಿಎಸ್‌ನವರಂತೆ ಕೈ ತುಂಬಾ, ಬಾಯಿ ತುಂಬಾ ಭ್ರಷ್ಟಾಚಾರದ ಹಣ ತಿನ್ನುವವರಾಗಿದ್ದರೆ ಅವರನ್ನು ಎಂದೋ ಮುಗಿಸಿ ಬಿಡುತ್ತಿದ್ದರು. ಬಿಜೆಪಿ – ಜೆಡಿಎಸ್‌ಗೆ ಸಿದ್ದರಾಮಯ್ಯನವರು ರಾಜಕೀಯ ವಿರೋಧಿ ಮಾತ್ರವಲ್ಲ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ತತ್ವ ಸಿದ್ಧಾಂತಗಳಿಗೆ ಬಹಿರಂಗ ಸವಾಲು ಒಡ್ಡುವ ನಾಯಕರೂ ಆಗಿದ್ದಾರೆ. ತಳ ಸಮುದಾಯಗಳ ಪ್ರತಿನಿಧಿಯಾಗಿ ಬೆಳೆದು ಬಂದಿರುವ ಸಿದ್ದರಾಮಯ್ಯ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಕುತಂತ್ರ ರಾಜಕಾರಣವನ್ನು ರಾಜ್ಯಪಾಲರ ಮೂಲಕ ನಡೆಸಿದ್ದಾರೆ” ಎಂದು ಹೇಳಿದರು.
“ತಳ ಸಮುದಾಯಗಳ ಪರವಾಗಿರುವ ಸಿದ್ದರಾಮಯ್ಯರವರನ್ನು ರಾಜಕೀಯವಾಗಿ ಮುಗಿಸಲು ನಾನಾ ಷಡ್ಯಂತ್ರಗಳನ್ನು ಹೆಣೆಯುತ್ತಿವೆ. ಸೈದ್ಧಾಂತಿಕವಾಗಿ ಅವರನ್ನು ಸೋಲಿಸುವುದು ಕಷ್ಟವಾಗಿದೆ. ಯಾವುದೂ ಸಿಗದೇ ಇದ್ದಾಗ ತಾವೇ ಮಂಜೂರು ಮಾಡಿದ್ದ ಸೈಟನ್ನು ವಿವಾದಮಯಗೊಳಿಸಿ, ಅದನ್ನು ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ನಡೆಸಿರುವ ಅಕ್ರಮ ಎಂಬಂತೆ ಬಿಂಬಿಸಿ ಇಲ್ಲದ ವಿವಾದವನ್ನು ಸೃಷ್ಟಿಸುತ್ತಿದ್ದಾರೆ. ಈ ಕುತಂತ್ರ ರಾಜಕಾರಣವನ್ನು ನಾವು ಖಂಡಿಸುತ್ತೇವೆ” ಎಂದು ಕೆರೆಗೋಡು ತಿಳಿಸಿದರು.
“ಕಾಂಗ್ರೆಸ್ ಪಕ್ಷ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂಬ ನಂಬಿಕೆ ನಮಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಲಿತ ದಮನಿತರಿಗೆ ಆಗುವ ಅನ್ಯಾಯದ ವಿರುದ್ಧ ಮಾತನಾಡಲು ಅವಕಾಶವಿದೆ. ಆದರೆ ಬಿಜೆಪಿ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಹೋರಾಟ ಮಾಡಲು ಅವಕಾಶಗಳಿರುವುದಿಲ್ಲ. ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷ-ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ದಸಂಸ ಹೋರಾಟ ಮಾಡುತ್ತಲೇ ಇದೆ. ಈಗಲೂ ಸಿದ್ದರಾಮಯ್ಯನವರ ಸರ್ಕಾರ ತೆಗೆದುಕೊಳ್ಳುತ್ತಿರುವ ಅನೇಕ ಕ್ರಮಗಳ ಕುರಿತು ನಮಗೆ ತೀವ್ರ ಭಿನ್ನಾಭಿಪ್ರಾಯವಿದೆ. ಅದನ್ನು ಬಹಿರಂಗವಾಗಿಯೇ ಖಂಡಿಸಿದ್ದೇವೆ, ಹೋರಾಡಿದ್ದೇವೆ, ಮುಂದೆಯೂ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಆದರೆ, ಕುತಂತ್ರ ರಾಜಕೀಯವನ್ನು ನಾವು ಒಪ್ಪುವುದಿಲ್ಲ” ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಸಂಘಟನಾ ಸಂಚಲಕ ಮರಿಯಪ್ಪ ಹಳ್ಳಿ ಮಾತನಾಡಿ, “ಬಿಜೆಪಿ ಪಕ್ಷ ಹುರುಳು ಎಬ್ಬಿಸಿ, ಸುಳ್ಳು ಹೇಳಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ನಡೆಸಿದೆ. ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದ್ದು, ಅವರ ಮೇಲೆ ಮಾಡುತ್ತಿರುವ ಆರೋಪ ಸುಳ್ಳು ಎಂದು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಈ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಸಿದ್ದರಾಮಯ್ಯನವರು ಜಾತಿ ಮೀರಿ ಕೆಲಸ ಮಾಡಿದವರು. ಆ ಕಾರಣಕ್ಕಾಗಿ ಅವರನ್ನು ಬೆಂಬಲಿಸಿ ರಾಜ್ಯಮಟ್ಟದ ಕಾರ್ಯಕ್ರಮ ರೂಪಿಸಿದ್ದೇವೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ದಲಿತ ಮುಖಂಡ ಇಂದೂಧರ ಹೊನ್ನಾಪುರ, ಎನ್ ಮುನಿಸ್ವಾಮಿ, ವಿ ನಾಗರಾಜು, ಕೆ ಎಂ ರಾಮಚಂದ್ರಪ್ಪ, ದಸಂದ ಮೈಸೂರು ಜಿಲ್ಲಾ ಸಂಚಾಲಕ ಬೆಟ್ಟಯ್ಯ, ದಸಂಸ ಹಿರಿಯ ಮುಖಂಡ ಎನ್.ವೆಂಕಟೇಶ್ ಮಾತನಾಡಿದರು.
ಪ್ರತಿಭಟನೆಯಲ್ಲಿ ದಂಟರಮಕ್ಕಿ ಶ್ರೀನಿವಾಸ, ಹೆಬ್ಬಾಲೆ ಲಿಂಗರಾಜು, ಪ್ರೊ ಎಚ್ ಎಂ ರುದ್ರಸ್ವಾಮಿ, ಗಂಗನಂಜಯ್ಯ, ಸಿ ಬಸವಲಿಂಗಯ್ಯ, ಎಚ್ ಜನಾರ್ಧನ್, ಪಿಚ್ಚಳ್ಳಿ ಶ್ರೀನಿವಾಸ್, ಗೊಲ್ಲಹಳ್ಳಿ ಶಿವಪುಸಾದ್, ಮರೆಪ್ಪ ಮೇತ್ರಿ, ಮರೆಪ್ಪ ಜಾಲಿಮಂಚಿ, ಪೂಜಪ್ಪ ಮೇತ್ರಿ, ಬಸವರಾಜ ಗುಡಿಮನಿ, ಮಲ್ಲು ಆರಬೊಳೆ, ಭೀಮರಾಯ ಸೈದಾಪುರ, ಸುಭಷ ತಳವಾರ, ಮೌನೇಶ ಶಟ್ಟಿಗೇರಿ, ಲಿಂಗಣ್ಣ ನಾಟ್ಟೇಕರ್, ಶೇಖರ ಬಡಿಗೇರ್, ಗೊಪಾಲ್ ತೆಳಗೇರಿ, ಸೈದಪ್ಪ ಕೋಲೂರು, ಹೊನ್ನಾಪ್ಪ ಹೊಸಳ್ಳಿ, ಬಾಶಾ ಬೊಲಾರಿ, ಹೊನ್ನಾಪ್ಪ ಯಡಳ್ಳ, ಮರಲಿಂಗ ಕುರುಕುಂಬಳ್ಳಿ, ಚಂದ್ರು ಚಟ್ಟರಕೆರ್, ಗಿರೀಶ ಚಟ್ಟರಕೆರ್, ಸಂತೊಷ ಆಶನ್ನಾಳ, ಮಾಲ್ಲು ಕಾಗಿ, ಶರಣಪ್ಪ ಕೋಲ್ಲೂರ್, ಐಯ್ಯಪ್ಪ ಬನಹಟ್ಟಿ, ವಿಜಯ್ ಆಶನ್ನಾಳ ಉಪಸ್ಥಿತರಿದ್ದರು.
ದಸಂಸ ಹಿರಿಯ ಮುಖಂಡ ಹುಲಿಕೆರೆ ಮಾದಯ್ಯ ಪ್ರತಿಭಟನಾ ಸಭೆಯ ನಿರ್ಣಯಗಳನ್ನು ಓದಿದರು. ಶಿವಕುಮಾರ ಅಲ್ಲೂಗುಡ್ ನಿರೂಪಿಸಿದರು. ರಾಜ್ಯದ ಹಲವು ಜಿಲ್ಲೆಯಿಂದ ದಸಂಸ ಹೋರಾಟಗಾರರು ಭಾಗವಹಿಸಿದ್ದರು.


