ಪ್ರತಿಭಟನೆಯಿಂದ ಮಾತ್ರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಆಲಮಟ್ಟಿ ಹಿನ್ನೀರು ಹಾಗೂ ಘಟಪ್ರಭಾ ನದಿಯಿಂದ ರೈತರಿಗೆ ಉಂಟಾದ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಂತ್ರಸ್ತರ ಪರ ನಿಲ್ಲುತ್ತೇನೆ ಎಂದು ಸಚಿವ ಆರ್ ಬಿ ತಿಮ್ಮಾಪುರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಪಿಡಬ್ಲ್ಯುಡಿ ಪ್ರವಾಸಿ ಮಂದಿರದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಆಲಮಟ್ಟಿ ಹಿನ್ನೀರು ಹಾಗೂ ಘಟಪ್ರಭಾ ನದಿಯಿಂದ ಹಾನಿಗೀಡಾದ ರೈತ ಮುಖಂಡರೊಂದಿಗೆ ಸಂವಾದ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಸಚಿವರು, “ಸರ್ಕಾರದ ಮಟ್ಟದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚನೆಯಾಗಬೇಕು, ಪರಿಸ್ಥಿತಿಯ ಸಾಧಕ-ಬಾಧಕಗಳನ್ನು ವೈಜ್ಞಾನಿಕವಾಗಿ ನಿರ್ಣಯಿಸಿ ಮುಖ್ಯಮಂತ್ರಿಗೆ ವರದಿ ನೀಡಿ ಪರಿಹಾರ ಕಂಡುಕೊಳ್ಳಬೇಕಿದೆ” ಎಂದು ತಿಳಿಸಿದರು.

ರೈತರು ಮತ್ತು ಅತಿವೃಷ್ಟಿ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ತಾವಾಗಲೀ ಸಂಸದ ಗೋವಿಂದ ಕಾರಜೋಳವಾಗಲೀ ಏಕಾಂಗಿಯಾಗಿ ಪರಿಹರಿಸಲು ಸಾಧ್ಯವಿಲ್ಲ. 2019ರ ಪ್ರವಾಹದ ಸಮಯದಲ್ಲಿ ಅವರ ಹಕ್ಕುಗಳಿಗಾಗಿ ಹೋರಾಡಿದ ರೈತನಾಗಿ ತಮ್ಮ ಸ್ವಂತ ಅನುಭವದಿಂದ ರೈತರಿಗೆ ಸಹಾಯ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡಲು ಅವರು ಬದ್ಧರಾಗಿದ್ದಾರೆ. ಈ ಹೋರಾಟದಲ್ಲಿ ಸಂತ್ರಸ್ತರ ಪರ ನಿಲ್ಲುತ್ತೇನೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ ಸಚಿವ ತಿಮ್ಮಾಪುರ, ಪರಿಹಾರ ಕಂಡುಕೊಳ್ಳಲು ಪ್ರತಿಭಟನೆಯಿಂದ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಸರ್ಕಾರದ ಮಟ್ಟದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚನೆಯಾಗಬೇಕು. ಪರಿಸ್ಥಿತಿಯ ಸಾಧಕ-ಬಾಧಕಗಳನ್ನು ವೈಜ್ಞಾನಿಕವಾಗಿ ನಿರ್ಣಯಿಸಿ ಮುಖ್ಯಮಂತ್ರಿಗೆ ವರದಿ ನೀಡಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಸಭೆಯಲ್ಲಿ ರೈತ ಮುಖಂಡ ಅಶೋಕ ಪಾಟೀಲ ಮಾತನಾಡಿ, ಕಬ್ಬಿಗೆ ಎಕರೆಗೆ 1 ಲಕ್ಷ ಹಾಗೂ ಇತರೆ ಬೆಳೆಗಳಿಗೆ 50 ಸಾವಿರ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ಶಾಶ್ವತ ಪರಿಹಾರ ಕಲ್ಪಿಸಬೇಕು. ತಾಲೂಕಿನಲ್ಲಿ 77 ಕಿ.ಮೀ ನದಿ ವ್ಯಾಪ್ತಿಯಿದೆ. ಚಿಂಚನಖಂಡಿ ಮತ್ತು ಯಾದವಾಡದಲ್ಲಿ ಹೆಚ್ಚು ನೀರು ಹರಿಯುತ್ತದೆ. ಕಾತರಕಿ ಬಳಿ ಹೆಚ್ಚಿನ ನೀರು ಹರಿಯುತ್ತದೆ. ಆದರೆ ಸೇತುವೆ ಇದ್ಯಾವುದಕ್ಕೂ ಆಗಿಲ್ಲ, ವಿಸ್ತರಣೆ ಮಾಡಬೇಕು. ಯಾದವಾಡ ಸೇತುವೆ ಹಾಗೂ ಚಿಂಚನಖಂಡಿ ನದಿಯಲ್ಲಿ ಹೂಳು ತುಂಬಿದ್ದು, ಅವುಗಳನ್ನು ತೆಗೆದು ಒತ್ತುವರಿ ಪ್ರದೇಶವೆಂದು ಘೋಷಿಸಬೇಕು ಎಂದು ಸಮಸ್ಯೆಗಳ ಪಟ್ಟಿಯನ್ನು ಹಾಕಿ ಸಭೆಯ ಗಮನ ಸೆಳೆದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕಾರ, ತಹಶೀಲ್ದಾರ್ ವಿನೋದ ಹತಳ್ಳಿ, ಡಿವೈಎಸ್ಪಿ ಶಾಂತವೀರ, ನೀರಾವರಿ ಇಲಾಖೆ ಹಾಗೂ ಹೆಸ್ಕಾಂ ಪ್ರತಿನಿಧಿಗಳು ಸೇರಿದಂತೆ ಪ್ರಮುಖರು ಹಾಜರಿದ್ದರು.
ಪ್ರಮುಖರಾದ ಸ್ಥಳೀಯ ಮುಖಂಡರಾದ ದುಂಡಪ್ಪ ಯರಗಟ್ಟಿ, ಕಲ್ಮೇಶ ಹಣಗುಜಿ, ಉದಯ ಸರ್ವಾಡ, ಸಂಜಯ ನಾಯಿಕ, ರಾಜುಗೌಡ ಪಾಟೀಲ, ಬಸವಂತಪ್ಪ ಕಾಂಬಳೆ, ನಾಗೇಶ ಸೊರಗಾಂವಿ, ಮುತ್ತಪ್ಪ ಕೋಮಾರ, ಶುಭಾಸ ಶಿರಬೂರ, ದುಂಡಪ್ಪ ಲಿಂಗರಡ್ಡಿ, ಹಣಮಂತ ನಬಾಬ, ಎ.ಜಿ.ಪಾಟೀಲ, ಮುತ್ತಪ್ಪ ಕೋಮಾರ, ಮಹೇಶಗೌಡ ಪಾಟೀಲ, ಅಪ್ಪಾ ಸಾಹೇಬ ಲಕ್ಕಂ, ವೆಂಕಣ್ಣ ಗಿಡ್ಡಪ್ಪನವರ ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ತಿಳಿಸಿದರು.
ಈ ಪ್ರದೇಶದಲ್ಲಿ ಪದೇ ಪದೇ ಉಂಟಾಗುತ್ತಿರುವ ಪ್ರವಾಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.
